ಮಡಿಕೇರಿ, ಏ. 15: ಹತ್ತು ಕುಟುಂಬ ಹದಿನೆಂಟು ಗೋತ್ರದ ಹಿರಿಮೆಯಿರುವ ಗೌಡ ಜನಾಂಗದ ನಡುವೆ ಕೊಡಗು ಗೌಡ ಯುವ ವೇದಿಕೆ ಆಶ್ರಯದಲ್ಲಿ ಆಯೋಜಿಸಲಾಗಿರುವ ಚೆರಿಯಮನೆ ಕಪ್ ಕ್ರಿಕೆಟ್ ಜಂಬರಕ್ಕೆ ಇಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸಂಭ್ರಮದ ಚಾಲನೆ ದೊರೆಯಿತು. ಚೆರಿಯಮನೆ ಕುಟುಂಬದ ಪಟ್ಟೆದಾರರಾದ ಚೆರಿಯಮನೆ ಕೆಂಚಪ್ಪ ಹಾಗೂ ಚೆರಿಯಮನೆ ಬೆಳ್ಯಪ್ಪ ಇವರುಗಳು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹಾಸನ ಜಿಲ್ಲೆಯ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಮಠಾಧಿಪತಿ ಶ್ರೀ ಶಂಭುನಾಥ ಮಹಾಸ್ವಾಮೀಜಿ ಅವರು ಕ್ರಿಕೆಟ್ ಪಂದ್ಯಕ್ಕೆ ಚಾಲನೆ ನೀಡಿ ಮಾತನಾಡಿ, ಇಂದು ಅವಿಭಕ್ತ ಕುಟುಂಬದಲ್ಲಿ ಹಿರಿಯರ ಮಾರ್ಗ ದರ್ಶನದಲ್ಲಿ ಕ್ರೀಡಾಕೂಟ ನಡೆಯುತ್ತಿರುವದು ವಿಶೇಷ ಹಾಗೂ ಅರ್ಥಪೂರ್ಣ. ನಾವೆಲ್ಲ ಸನ್ಮಾರ್ಗದಲ್ಲಿ ನಡೆಯಲು ಹಿರಿಯರ ಆಶೀರ್ವಾದ ಅಗತ್ಯ. ಮನೆಯಲ್ಲಿಯೇ ನಮ್ಮ ತಂದೆ ತಾಯಿಯರಿಗೆ ದೊಡ್ಡ ಸ್ಥಾನ ನೀಡಬೇಕು. ಮನೆಗಳಿಗೆ ಗೋಡೆ ಇರಬೇಕೆ ಹೊರತು ಮನಸ್ಸುಗಳಿಗೆ ಗೋಡೆ ಕಟ್ಟಿಕೊಳ್ಳಬಾರದು ಎಂದು ಹೇಳಿದರು.

ಶರೀರಕ್ಕೆ ಅಂತ್ಯವಿದೆ. ಶರೀರ ಶಾಶ್ವತವಲ್ಲ. ನಮ್ಮ ಸಂಪಾದನೆಯೂ ಶಾಶ್ವತವಲ್ಲ. ನಮ್ಮನ್ನು ನಾವು ಅರ್ಥೈಸಿಕೊಂಡು ಭಗವಂತ ರೂಪಿಸಿದ ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಸಲಹೆಯಿತ್ತರು.

ಸಂಸದ ಪ್ರತಾಪ್ ಸಿಂಹ ಮಾತನಾಡಿ, ಭಾಷೆ ಆಧಾರದಲ್ಲಿ ಸಮಾಜದಲ್ಲಿ ಬಿರುಕು ಉಂಟಾಗಬಾರದು. ಎಲ್ಲರೂ ಒಗ್ಗಟ್ಟಾಗಿ ಮುಂದುವರೆಯಬೇಕೆಂದರು.

ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಜನಾಂಗದಲ್ಲಿನ ಕ್ರೀಡಾಪ್ರತಿಭೆಯನ್ನು ಗುರುತಿಸಲು ಇಂತಹ ಕ್ರೀಡಾಕೂಟ ಉತ್ತಮ ವೇದಿಕೆ ಎಂದರು.

ವಿಶ್ವ ಒಕ್ಕಲಿಗರ ಮಹಾ ವೇದಿಕೆ ಅಧ್ಯಕ್ಷ ವೈ.ಡಿ ರವಿಶಂಕರ್ ಮಾತನಾಡಿ, ಸಂಘಟನೆ ಮೂಲಕ ಸಮಾಜಸೇವೆ ಮಾಡಬೇಕು ಎಂದರು.

ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ ಬೋಪಯ್ಯ, ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ,

(ಮೊದಲ ಪುಟದಿಂದ) ಕೊಡಗು ಗೌಡ ಸಮಾಜ ಒಕ್ಕೂಟಗಳ ಅಧ್ಯಕ್ಷ ಸೂರ್ತಲೆ ಸೋಮಣ್ಣ, ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ ಕ್ರೀಡಾಕೂಟಕ್ಕೆ ಶುಭ ಹಾರೈಸಿದರು.

ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷ ಪೈಕೆರ ಮನೋಹರ್ ಮಾದಪ್ಪ ಅಧ್ಯಕ್ಷತೆ ವಹಿಸಿದ್ದರು. ಚೆರಿಯಮನೆ ಕಪ್ ಕ್ರೀಡಾ ಸಮಿತಿ ಅಧ್ಯಕ್ಷ ಚೆರಿಯಮನೆ ರಾಮಚಂದ್ರ ಆಶಯ ನುಡಿಗಳನ್ನಾಡಿದರು.

ಕ್ರೀಡಾ ಜ್ಯೋತಿಯನ್ನು ಕ್ರೀಡಾಪಟುಗಳು ಹೊತ್ತು ತಂದರು.

ಕೊಡಗು ಗೌಡ ವಿದ್ಯಾ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ, ಕೊಡಗು ಗೌಡ ಯುವ ವೇದಿಕೆಯ ಕ್ರೀಡಾ ಸಮಿತಿ ಅಧ್ಯಕ್ಷ ಬಾಳಾಡಿ ಮನೋಜ್ ವೇದಿಕೆಯಲ್ಲಿದ್ದರು. ಚೆರಿಯಮನೆ ಪೆಮ್ಮಯ್ಯ ಸ್ವಾಗತಿಸಿ, ಕಟ್ಟೆಮನೆ ಸೋನಾಜಿತ್ ವಂದಿಸಿದರು.