ವೀರಾಜಪೇಟೆ, ಏ. 13: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಅಧಿಕಾರದ ಅವಧಿಯಲ್ಲಿ ನಡೆದ ಜನಪರ ಅಭಿವೃದ್ಧಿ ಕಾರ್ಯಗಳು, ಗ್ರಾಮ ವಾಸ್ತವ್ಯ, ರೈತರಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಹೆಚ್ಚಿನ ಕಾಳಜಿ, ಜ್ವಲಂತ ಸಮಸ್ಯೆಗಳಿಗೆ ನೇರವಾಗಿ ಸ್ಪಂದಿಸಿದ ಜಾತ್ಯತೀತ ಜನತಾದಳದ ಸರಕಾರದ ಮೇಲೆ ಮತದಾರರ ಒಲವಿದೆ.
ಈಗಾಗಲೇ ಅತಿ ದೊಡ್ಡ ವಿಧಾನಸಭಾ ಕ್ಷೇತ್ರವಾದ ವೀರಾಜಪೇಟೆ ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರು ಮೊದಲ ಹಂತದ ಪ್ರಚಾರವನ್ನು ಮುಕ್ತಾಯ ಗೊಳಿಸಿದ್ದಾರೆ ಎಂದು ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಹಾಗೂ ಕ್ಷೇತ್ರದ ಅಭ್ಯರ್ಥಿ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು.
ಇಲ್ಲಿನ ಗಾಂಧಿನಗರದ ಲಯನ್ಸ್ ಕಟ್ಟಡದ ಸಭಾಂಗಣದಲ್ಲಿ ಹಮ್ಮಿ ಕೊಂಡಿದ್ದ ತಾಲೂಕಿನ 23ಗ್ರಾಮ ಪಂಚಾಯಿತಿಗಳ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಸಸಿಗೆ ನೀರೆರದು ಉದ್ಘಾಟಿಸಿ ಮಾತನಾಡಿದ ಸಂಕೇತ್ ಪೂವಯ್ಯ ಜೆಡಿಎಸ್ ಪಕ್ಷ ಚುನಾವಣೆಯ ನಂತರ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯುವದು ಖಚಿತವಾಗಿದೆ.
ಪಕ್ಷದ ಪ್ರಣಾಳಿಕೆ ಯಂತೆ ಮೊದಲು ರೈತರ ಸಾಲ ಮನ್ನಾ ಮಾಡುವದು. ಕಾಡಾನೆ, ಹುಲಿ ಧಾಳಿಗೆ ವೈಜ್ಞಾನಿಕವಾಗಿ ಪರಿಹಾರ ಒದಗಿಸುವದು ಸೇರಿದಂತೆ ಕೊಡಗು ಜಿಲ್ಲೆ ಸೇರಿದಂತೆ ರಾಜ್ಯದ ಎಲ್ಲ ಸಮಸ್ಯೆಗಳಿಗೂ ನೇರವಾಗಿ ಸ್ಪಂದನ. ಆಡಳಿತದಲ್ಲಿ ಪಾರದರ್ಶಕತೆಗೆ ಒತ್ತು ನೀಡುವದಾಗಿದೆ. ಇಂದಿನ ಯುವ ಶಕ್ತಿಯಲ್ಲಿಯೂ ಭಾವನೆಗಳು ಮತವಾಗಿ ಪರಿವರ್ತನೆಗೊಂಡು ಪ್ರಾದೇಶಿಕ ಪಕ್ಷವಾದ ಜನತಾ ದಳವನ್ನು ಬೆಂಬಲಿಸ ಬೇಕಾಗಿದೆ. ಯುವ ಶಕ್ತಿಯೂ ರಾಜ್ಯದ ಆಡಳಿತದ ಬದಲಾವಣೆ ಯನ್ನು ಬಯಸಿದೆ ಎಂದರು.
ಪಕ್ಷದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಅಜ್ಜಮಾಡ ಮುತ್ತಮ್ಮ ಮಾತನಾಡಿ ಕೇವಲ 20 ತಿಂಗಳು ಆಡಳಿತದಲ್ಲಿ ಜನತಾದಳ ಸರಕಾರದ ಸಾಧನೆಗಳನ್ನು ಮತದಾರರಿಗೆ ಪರಿಚಯಿಸಿ ಮತದಾರರ ಬೆಂಬಲ ಕೋರಬೇಕು ಎಂದು ಕಾರ್ಯಕರ್ತ ರಿಗೆ ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಎಸ್.ಹೆಚ್. ಮತೀನ್ ಮಾತನಾಡಿ, ಚುನಾವಣೆಗೆ ಇನ್ನೂ 30 ದಿನಗಳು ಬಾಕಿ ಇದೆ. ಕಾರ್ಯಕರ್ತರು ಎರಡನೇ ಹಂತದ ಪ್ರಚಾರವನ್ನು ಚುರುಕುಗೊಳಿಸಬೇಕು. ತಾ. 17 ರಂದು ಕುಶಾಲನಗರಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಪಕ್ಷದ ವರಿಷ್ಠರಾದ ಹೆಚ್.ಡಿ. ಕುಮಾರಸ್ವಾಮಿ ಆಗಮಿಸಲಿದ್ದಾರೆ. ಅವರನ್ನು ಪಕ್ಷದ ವತಿಯಿಂದ ಸ್ವಾಗತಿಸಲು ಅಧಿಕ ಸಂಖ್ಯೆಯ ಕಾರ್ಯಕರ್ತರು ಕುಶಾಲ ನಗರಕ್ಕೆ ತೆರಳುವಂತೆ ತಿಳಿಸಿದರು.
ಸಭೆಯಲ್ಲಿ ವಿ.ಸಿ.ದೇವರಾಜು, ಮಹಿಳಾ ಘಟಕದ ಫಾತಿಮಾ, ರೇಣು ರೇವತಿ, ಸುಮಾ,ನೂರ್ ಅಹಮ್ಮದ್, ಅಮ್ಮಂಡ ವಿವೇಕ್, ಸಿ.ನಾಸರ್, ಪಿ.ರವಿ, ಇಟ್ಟೀರ ಸಂಪತ್ ಮತ್ತಿತರರು ಹಾಜರಿದ್ದರು. ನಗರ ಸಮಿತಿ ಅಧ್ಯಕ್ಷ ಪಿ.ಎ. ಮಂಜುನಾಥ್ ನಿರೂಪಿಸಿದರು.
ಪ್ರಚಾರ ಯಶಸ್ವಿಗೊಳಿಸಿ
ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿರುವದರಿಂದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವಧಿ ಯಲ್ಲಿನ ಜನಪರ ಕಾರ್ಯಕ್ರಮಗಳು ಗ್ರಾಮವಾಸ್ತವ್ಯದ ಬಗ್ಗೆ ಜನರ ಮನೆ ಬಾಗಿಲಿಗೆ ಕಾರ್ಯಕ್ರಮಗಳನ್ನು ಮುಟ್ಟಿಸುವಂತೆ ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಪಕ್ಷದ ಮುಖಂ ಡರುಗಳಿಗೆ ಮನವಿ ಮಾಡಿದರು.
ತಮ್ಮ ನಿವಾಸದಲ್ಲಿ ಆಯೋಜನೆಗೊಂಡಿದ್ದ ತಾಲೂಕು ಮಟ್ಟದ ಜೆಡಿಎಸ್ ಮುಖಂಡರ ಸಭೆಯಲ್ಲಿ ಚುನಾವಣೆಯ ಪೂರ್ವ ಸಿದ್ಧತೆಯ ಬಗ್ಗೆ ಮಾತನಾಡಿದ ಅವರು ಇರುವ ಕೆಲವೇ ದಿನಗಳನ್ನು ಬೂತ್ ಮಟ್ಟದ ಕಾರ್ಯಕರ್ತರು ಹೆಚ್ಚು ಶ್ರಮ ವಹಿಸಿ ಜನರ ಭಾವನೆಗಳನ್ನು ಮತಗಳಾಗಿ ಪರಿವರ್ತನೆ ಮಾಡಬೇಕೆಂದರು.
ಬಾಳೆಲೆ ಹೋಬಳಿ ಘಟಕದ ಹಿರಿಯ ಅಧ್ಯಕ್ಷ ಅಡ್ಡೆಂಗಡ ಸುಬ್ಬಯ್ಯ ಮಾತನಾಡಿ, ಕ್ಷೇತ್ರದಲ್ಲಿ ಜೆಡಿಎಸ್‍ಗೆ ಉತ್ತಮ ಭವಿಷ್ಯವಿದ್ದು ಕ್ಷೇತ್ರದ ಅಭ್ಯರ್ಥಿ ಸಂಕೇತ್ ಪೂವಯ್ಯ ಮಾಡಿರುವ ಜನಪರ ಕೆಲಸಕ್ಕೆ ಈ ಬಾರಿ ಮತದಾರ ಬೆಂಬಲ ನೀಡಲಿದ್ದಾನೆ ಭವಿಷ್ಯದ ದೃಷ್ಟಿಯಿಂದ ಎಲ್ಲರೂ ಪಕ್ಷಕ್ಕಾಗಿ ಒಗ್ಗಟ್ಟಿನಿಂದ ದುಡಿಯುವಂತೆ ಮನವಿ ಮಾಡಿದರು.
ಬಾಳೆಲೆ ಹೋಬಳಿಯ ಕಾರ್ಯಧ್ಯಕ್ಷ ಗಾಡಂಗಡ ಸಜು ಮೊಣ್ಣಪ್ಪ, ಮುಖಂಡರಾದ ಮಲ್ಚೀರ ದೇವಯ್ಯ, ಬಾನಂಡ ಸಜನ್, ಅಕ್ಬರ್ ಪಾಷ, ವೀರಾಜಪೇಟೆಯ ನಗರ ಅಧ್ಯಕ್ಷ ಮಂಜುನಾಥ್ ಜಿಲ್ಲಾ ಸಾಮಾಜಿಕ ಜಾಲತಾಣದ ಅಧ್ಯಕ್ಷ ಸಿ.ಎ. ನಾಸೀರ್, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಪರಮಾಲೆ ಗಣೇಶ್, ಬೊಳ್ಳುಮಾಡು ವಿನ ತಾಲೂಕು ಉಪಾಧ್ಯಕ್ಷ ಪಂದ್ಯಂಡ ರವಿ ಮಾದಪ್ಪ, ಕೆದಮುಳ್ಳೂರುವಿನ ಧನಂಜಯ್, ಮೈತಾಡಿಯ ಇಟ್ಟಿರ ಸಂಪತ್, ಬೇರೆರ ಅಶೋಕ್, ಬಾಳೆಕುಟ್ಟಿರ ದಿನಿ, ಗುಡ್ಲೂರುವಿನ ಜಿ.ಬಿ. ಸೋಮಯ್ಯ, ಗಣಪತಿ, ಸುರೇಶ್, ಬೋಪಣ್ಣ, ವಿ.ಸಿ. ದೇವರಾಜ್, ಟಿ. ಶೆಟ್ಟಿಗೇರಿಯ ಚೋನಿರ ಸಜನ್ ಉತ್ತಪ್ಪ, ಉಳುವಂಗಡ ದತ್ತ, ಬಿರುನಾಣಿಯ ಕೋಗಿಲೆವಾಡಿ ಕರಣ್, ಚಿಮ್ಮಣಮಾಡ ಸೋಮಣ್ಣ, ವೀರಾಜಪೇಟೆಯ ಮಂಡೇಪಂಡ ಮುತ್ತಪ್ಪ, ಮದನ್, ಸುಮಿತ್ರಾ, ಆಶ್ರಫ್, ಫಾತಿಮಾ, ರೇವತಿ ಮುಂತಾದ ಮುಖಂಡರು ಭಾಗವಹಿಸಿದ್ದರು.