ಮಡಿಕೇರಿ, ಏ. 12 : ಮಡಿಕೇರಿಯಲ್ಲಿ ಹಲವಾರು ವರ್ಷಗಳ ಕಾಲ ನಾಟ್ಯನಿಕೇತನ ಸಂಸ್ಥೆಯ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ನೃತ್ಯಶಿಕ್ಷಣ ನೀಡಿದ ವಿನಯ ಕೃಷ್ಣಮೂರ್ತಿ ಅವರಿಗೆ ಸಂಸ್ಥೆಯ ವಿದ್ಯಾರ್ಥಿ ವೃಂದ ಭಾವಪೂರ್ಣ ಗುರುವಂದನೆ ಸಲ್ಲಿಸಿತು.

ಗುರುವಂದನೆ ಸ್ವೀಕರಿಸಿ ಮಾತನಾಡಿದ ವಿನಯ ಕೃಷ್ಣಮೂರ್ತಿ , ಅನಿವಾರ್ಯ ಕಾರಣಗಳಿಂದಾಗಿ ಮೈಸೂರಿಗೆ ಸ್ಥಳಾಂತರಗೊಳ್ಳಬೇಕಾಗಿದ್ದು, ಮಡಿಕೇರಿಯಲ್ಲಿ ಕಲಾಸೇವೆಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಕಾವೇರಮ್ಮನ ನಾಡಿನಲ್ಲಿ ಕಲೆ ಸಮೃದ್ದಿಯಾಗಿರಲೆಂದು ಪ್ರಾರ್ಥಿಸಿದರು.

ಇದೇ ಸಂದರ್ಭ ಸಂಸ್ಥೆಯ ವಿದ್ಯಾರ್ಥಿಗಳು ತಮ್ಮ ನೃತ್ಯ ಗುರುವಿಗಾಗಿ ನೃತ್ಯ, ಸಂಗೀತ ಕಾರ್ಯಕ್ರಮವನ್ನು ಸಮರ್ಪಿಸಿದರು. ನಾಟ್ಯನಿಕೇತನ ಸಂಸ್ಥೆಯ ಮುಂದಿನ ನೃತ್ಯ ಶಿಕ್ಷಕಿಯಾಗಿರುವ ವಿದುಷಿ ಪೂರ್ಣಿಮಾ ಅವರನ್ನು ವಿನಯ ಪರಿಚಯಿಸಿದರು.