ಮಡಿಕೇರಿ, ಏ. 12 : ಬರುವ ಮೇ 12ರಂದು ಕರ್ನಾಟಕ ವಿಧಾನಸಭೆಗೆ ನಡೆಯಲಿರುವ ಚುನಾವಣೆ ವೇಳೆ, ಸಮಾಜದ ಎಲ್ಲ ವರ್ಗದ ಜನತೆ ಹಾಗೂ ಮಹಿಳೆಯರು ವಿಶೇಷವಾಗಿ ನಿರ್ಭಯದಿಂದ ಮತದಾನದಲ್ಲಿ ಪಾಲ್ಗೊಳ್ಳುವ ಭರವಸೆಯೊಂದಿಗೆ ಪೊಲೀಸ್ ರಕ್ಷಣಾ ಘಟಕ ವ್ಯಾಪಕ ನಡಿಗೆ ಆರಂಭಿಸಿದೆ.

ನಿನ್ನೆಯಿಂದ ನಗರದ ವಿವಿಧ ಬಡಾವಣೆಯಲ್ಲಿ ಈ ನಡಿಗೆ ಆರಂಭಗೊಂಡಿದೆ ಎಂದು ಕೊಡಗು ಪೊಲೀಸ್ ಚುನಾವಣಾ ನೋಡಲ್ ಅಧಿಕಾರಿ ಕೆ.ಎಸ್. ಸುಂದರರಾಜ್ ಖಚಿತಪಡಿಸಿದ್ದಾರೆ. ಈಗಾಗಲೇ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳ ಚುನಾವಣಾ ಸುರಕ್ಷತೆಗಾಗಿ ಒಡಿಸ್ಸಾದಿಂದ ಆಗಮಿಸಿರುವ ಎರಡು ಕೇಂದ್ರ ಶಸಸ್ತ್ರ ಮೀಸಲು ಪಡೆ ತುಕಡಿಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.

ನಿನ್ನೆ ಸಂಜೆ ಮಳೆ ಬಿಡುವು ನೀಡಿದ ಬೆನ್ನಲ್ಲೆ ನಗರದಲ್ಲಿ ಪಥ ಸಂಚಲನ ನಡೆಸಿದ್ದು, ಇಂದು ಕೂಡ ಶ್ರೀ ಓಂಕಾರೇಶ್ವರ ದೇವಾಲಯ ಸುತ್ತಮುತ್ತಲಿನ ದೇಚೂರು, ಪುಟಾಣಿನಗರ ವ್ಯಾಪ್ತಿಯಲ್ಲಿ ಸಂಚಲನದೊಂದಿಗೆ ಜನರಲ್ಲಿ ಭರವಸೆ ಮೂಡಿಸಲಾಗುತ್ತಿದೆ ಎಂದು ಅವರು ತಿಳಿಸಿದರು. ಅಲ್ಲದೆ ಬರುವ ಮೇ 12ರ ಒಳಗಾಗಿ ಜಿಲ್ಲೆಯ ಎಲ್ಲೆಡೆ ಈ ರೀತಿ ನಿರಂತರ ಪಥ ಸಂಚಲನದೊಂದಿಗೆ ಜನರು ನಿರ್ಭಯದಿಂದ ಮತದಾನದಲ್ಲಿ ಪಾಲ್ಗೊಳ್ಳುವಂತೆ ಹುರಿದುಂಬಿಸುವ ಕೆಲಸ ಸಾಗಲಿದೆ ಎಂದರು.