ಸಿದ್ದಾಪುರ, ಏ. 12: ಸಿದ್ದಾಪುರ ಕಾವೇರಿ ನದಿಯು ಕಲುಷಿತಗೊಂಡಿದ್ದು, ಈ ಭಾಗದ ನದಿಯಲ್ಲಿ ತ್ಯಾಜ್ಯಗಳು ಸೇರಿದಂತೆ ಇನ್ನಿತರ ವಸ್ತುಗಳು ತುಂಬಿದ್ದು, ನದಿಯಲ್ಲಿ ಸ್ನಾನ ಮಾಡಿದರೆ ಮನೆಗೆ ತೆರಳಿ ಮತ್ತೊಮ್ಮೆ ಸ್ನಾನ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಯುವ ಬ್ರಿಗೇಡ್ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ವಿಷಾದ ವ್ಯಕ್ತಪಡಿಸಿದರು.

ಜೀವನದಿ ಕಾವೇರಿಯನ್ನು ಕಸಮುಕ್ತ ನದಿಯನ್ನಾಗಿ ಪರಿವರ್ತಿಸುವದರೊಂದಿಗೆ ಕಾವೇರಿ ಉಳಿವಿಗಾಗಿ ಕಾವೇರಿ ಕ್ಷೇತ್ರದಲ್ಲಿ ಸ್ವಚ್ಛತೆಯಲ್ಲಿ ಪಾಲ್ಗೊಂಡು ಬಳಿಕ ಮಾತನಾಡಿದ ಅವರು, ಸಿದ್ದಾಪುರ, ನೆಲ್ಯಹುದಿಕೇರಿ ವ್ಯಾಪ್ತಿಯ ಕಾವೇರಿ ನದಿಯು ಸಂಪೂರ್ಣವಾಗಿ ಕಲುಷಿತಗೊಂಡಿದ್ದು, ನದಿಯಲ್ಲಿ ಸ್ವಚ್ಛತೆಯನ್ನು ಮಾಡುವ ಸಂದರ್ಭ ತ್ಯಾಜ್ಯ ವಸ್ತುಗಳು, ಪ್ಲಾಸ್ಟಿಕ್ ಚೀಲಗಳು ಇನ್ನಿತರ ವಸ್ತುಗಳು ತುಂಬಿದ್ದು ಹಳೇ ಬಟ್ಟೆಗಳು ಕೂಡ ಸಿಕ್ಕಿವೆ. ನೀರಿನ ಬಣ್ಣ ಬದಲಾಗಿದೆ. ಕಾವೇರಿ ನದಿಯ ಸ್ವಚ್ಛತೆಯ ಬಗ್ಗೆ ಶಾಸಕರುಗಳು ಗಮನ ಹರಿಸಬೇಕು. ಈ ನಿಟ್ಟಿನಲ್ಲಿ ಎಲ್ಲಾ ಜನಪ್ರತಿನಿಧಿಗಳು ಕಾವೇರಿ ನದಿಗೆ ತೆರಳಿ ಸ್ನಾನ ಮಾಡಬೇಕೆಂದು ಸೂಲಿಬೆಲೆ ಕರೆ ನೀಡಿದರು.

ಜನಪ್ರತಿನಿಧಿಗಳಿಗೆ ಸ್ವಚ್ಛತೆಯ ಬಗ್ಗೆ ಕಾಳಜಿ ಇರಬೇಕೆಂದರು. ನದಿ ದಡದಲ್ಲಿ ತ್ಯಾಜ್ಯಗಳ ದುರ್ನಾತ ಬೀರುತ್ತಿದ್ದುದನ್ನು ಗಮನಿಸಿದ ಸೂಲಿಬೆಲೆ ಚಕ್ರವರ್ತಿ ಅವರು ಸರಕಾರದ ಹಾಗೂ ಆಡಳಿತ ಅಧಿಕಾರಿಗಳ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶಗೊಂಡರು.

ಅಲ್ಲದೇ ನದಿಯ ಸಮೀಪದಲ್ಲಿರುವ ತ್ಯಾಜ್ಯಗಳು ಕಾವೇರಿ ಒಡಲು ಸೇರುತ್ತಿರುವ ಬಗ್ಗೆ ಅಸಮಾಧಾನಗೊಂಡು ನದಿಯ ಸ್ವಚ್ಛತೆಯ ವಿಚಾರ ಬಂದಾಗ ಒಂದು ಪಂಚಾಯಿತಿ ಇನ್ನೊಂದು ಪಂಚಾಯಿತಿಯ ವಿರುದ್ಧ ಆರೋಪ ಮಾಡುವದು ಸರಿಯಲ್ಲ ಎಂದರು.

ಜೀವನದಿಗೆ ಜೀವ ತುಂಬುವ ಉದ್ದೇಶದಿಂದ 3 ದಿನಗಳ ಕಾಲ ಭಾಗಮಂಡಲದಿಂದ ಶ್ರೀರಂಗಪಟ್ಟಣ ದವರೆಗೆ ಕಾವೇರಿ ನದಿ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗಿದೆ. ಈ ಭಾಗದಲ್ಲಿ ಆಡಳಿತ ನಿಷ್ಕ್ರೀಯವಾಗಿದ್ದು, ಜನರ ಮೇಲೆ ಅನಗತ್ಯವಾಗಿ ಆರೋಪ ಹೊರಿಸಿ ಜಾರಿಗೊಳ್ಳುತ್ತಿರುವದು ಖಂಡನೀಯ ಎಂದರು.

ಇದೇ ಸಂದರ್ಭದಲ್ಲಿ ಸಿದ್ದಾಪುರ ಗ್ರಾ.ಪಂ. ಪಿಡಿಓ ವಿಶ್ವನಾಥ್ ಹಾಗೂ ನೆಲ್ಯಹುದಿಕೇರಿ ಗ್ರಾ.ಪಂ. ಪಿಡಿಓ ನಂಜುಂಡಸ್ವಾಮಿ ಅವರನ್ನು ನದಿ ದಡಕ್ಕೆ ಹಾಗೂ ಕಸದ ರಾಶಿ ತುಂಬಿ ತುಳುಕುತ್ತಿರುವ ಸ್ಥಳಕ್ಕೆ ಕರೆಸಿದ ಸೂಲಿಬೆಲೆ, ಅಧಿಕಾರಿಗಳೊಂದಿಗೆ ಚರ್ಚಿಸಿ ಕಾವೇರಿ ನದಿಯಲ್ಲಿ ತ್ಯಾಜ್ಯ ವಸ್ತುಗಳನ್ನು ಹಾಕುವವರ ವಿರುದ್ಧ ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು.

ಈ ಸಂದರ್ಭ ಪಿಡಿಓಗಳು ಮಾಂಸ ವ್ಯಾಪಾರಿಗಳು ಅನಧಿಕೃತವಾಗಿ ಮಾರಾಟ ಮಾಡಿ ಈ ರೀತಿ ತ್ಯಾಜ್ಯಗಳನ್ನು ಸುರಿಯುತ್ತಿರುವದಾಗಿ ತಿಳಿಸಿದರು.

ಸ್ವಚ್ಛತಾ ಕಾರ್ಯಕ್ರಮ ಬೆಳಿಗ್ಗೆ 6.30 ರಿಂದ ಪ್ರಾರಂಭಗೊಂಡಿತು. ಸ್ವಚ್ಛತೆಯನ್ನು ಕಾಪಾಡಲು 3 ನಾಮಫಲಕಗಳನ್ನು ನದಿ ದಡದಲ್ಲಿ ಅಳವಡಿಸಲಾಯಿತು. ಕಾರ್ಯಕ್ರಮ ದಲ್ಲಿ ಬ್ರಿಗೇಡ್‍ನ ರಾಜ್ಯ ಸಂಚಾಲಕ ಚಂದ್ರಶೇಖರ್, ಕಾವೇರಿ ನದಿ ಸ್ವಚ್ಛತೆ ಆಂದೋಲನದ ಸಂಚಾಲಕ ಎಂ.ಎನ್. ಚಂದ್ರಮೋಹನ್, ಮಹಿಳಾ ಸಂಘಟನೆಯ ಮುಖ್ಯಸ್ಥೆ ವಾರಿಜಾ ಭರತ್, ಮಾಜಿ ತಾ.ಪಂ. ಸದಸ್ಯ ವಿ.ಕೆ. ಲೋಕೇಶ್ ಸೇರಿದಂತೆ ಜಿಲ್ಲೆ, ಹೊರ ಜಿಲ್ಲೆಯ ನೂರಾರು ಮಂದಿ ಪಾಲ್ಗೊಂಡಿದ್ದರು. ನಂತರ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲು ಕರಪತ್ರ ಹಂಚಲಾಯಿತು.