*ಗೋಣಿಕೊಪ್ಪಲು: ಜಾನುವಾರುಗಳ ಮೇಲೆ ನಿರಂತರ ಧಾಳಿ ನಡೆಸುತ್ತಿರುವ ಹುಲಿಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಶತಾಯ ಗತಾಯ ಪ್ರಯತ್ನ ಪಡುತ್ತಿದೆ. ಆದರೆ ಹುಲಿ ಮಾತ್ರ ಅರಣ್ಯ ಇಲಾಖೆಗೆ ಚಳ್ಳೆ ಹಣ್ಣು ತಿನ್ನಿಸುತ್ತಿದೆ.

ಕೊಟ್ಟಗೇರಿ ವ್ಯಾಪ್ತಿಯಲ್ಲಿ ಒಂದು ವಾರದಿಂದ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಸ್ಥಳದಲ್ಲಿಯೇ ತಂಗಿದ್ದಾರೆ. ಆದರೆ ಹುಲಿ ಅರಣ್ಯ ಇಲಾಖೆಯ ಎಲ್ಲಾ ಕಾರ್ಯತಂತ್ರಗಳನ್ನು ವಿಫಲ ಗೊಳಿಸಿ ಸೆರೆಯಾಗದೆ ಪಾರಾಗುತ್ತಿದೆ. ಆದರೂ ಪಟ್ಟು ಬಿಡದ ಅರಣ್ಯಾಧಿಕಾರಿಗಳು ಕಾರ್ಯಾಚರಣೆಯನ್ನು ಎಡೆಬಿಡದೆ ಮುಂದುವರಿಸಿದ್ದಾರೆ.

ದಟ್ಟ ಮರಗಳಿಂದ ಕೂಡಿರುವ ವಿಶಾಲವಾದ ಜಾಗದಲ್ಲಿ ದಟ್ಟ ಗಿಡಮರಗಳು ಬೆಳೆದಿದ್ದು ಅದರ ಮಧ್ಯಭಾಗದಲ್ಲಿ ಹುಲಿ ಅಡಗಿರ ಬಹುದು ಎಂದು ಹೇಳಲಾಗುತ್ತಿದೆ. ಇಲ್ಲಿರುವ ಕೊಲ್ಲಿ ಎರಡು ಭಾಗಗಳಲ್ಲಿ ದಟ್ಟ ಪೊದೆಯಿದೆ. ಅದರೊಳಗೆ ವ್ಯಾಘ್ರ ತಂಗಿರಬಹುದು ಎಂದು ಶಂಕಿಸಲಾಗಿದೆ. ಈ ವ್ಯಾಪ್ತಿಯಲ್ಲಿ ಅರಣ್ಯ ಸಿಬ್ಬಂದಿಗಳು ಸುತ್ತಲೂ ಮರದ ಮೇಲೆ ಅಟ್ಟಣಿಗೆ ನಿರ್ಮಿಸಿಕೊಂಡು ಕುಳಿತಿದ್ದಾರೆ.

ಗುರುವಾರ ಸ್ಥಳಕ್ಕೆ ಭೇಟಿ ನೀಡಿದ್ದ ಡಿಎಫ್‍ಒ ಮರಿಯಾ ಕ್ರಿಸ್ತುರಾಜ್ ಕಾರ್ಯಾಚರಣೆಯ ತಂತ್ರವನ್ನು ಬದಲಾಯಿಸಲು ಸೂಚಿಸಿದ್ದಾರೆ. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಕಾರ್ಯಾಚರಣೆ ನಡೆಸಲು ಮಾರ್ಗದರ್ಶನ ಮಾಡಿದ್ದಾರೆ. ತಮ್ಮ ಕಚೇರಿಯನ್ನೇ ಕೊಟ್ಟಗೇರಿ ಕಾಫಿ ತೋಟಕ್ಕೆ ಬದಲಾಯಿಸಿ ಕೊಂಡಂತಿರುವ ತಿತಿಮತಿ ಎಸಿಎಫ್ ಶ್ರೀಪತಿ, ನಾಗರಹೊಳೆ ಎಸಿಎಫ್ ಪೌಲ್ ಆಂಟೋನಿ, ಆರ್‍ಎಫ್‍ಓಗಳಾದ ಅಶೋಕ್ ಹುನುಗುಂದ, ಕಿರಣ್ ಕುಮಾರ್, ಗಂಗಾಧರ್ ವನ್ಯ ಜೀವಿ ವಿಭಾಗದ ವೈದ್ಯಾಧಿಕಾರಿ ಮಜೀದ್ ಖಾನ್, ತಜ್ಞ ವೆಂಕಟೇಶ್ ಕಾರ್ಯಾಚರಣೆ ಯನ್ನು ಸಫಲಗೊಳಿಸಲು ಹರಸಾಹಸ ಪಡುತ್ತಿದ್ದಾರೆ. ತಂಡಕ್ಕೆ ಸ್ಥಳೀಯವಾಗಿ ಮಾಪಂಗಡ ಅಜಯ್, ಮಾಪಂಗಡ ಸಜನ್ ದೇವಯ್ಯ ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದಾರೆ.

- ಎನ್.ಎನ್. ದಿನೇಶ್‍ಗುರುವಾರ ರಾತ್ರಿಯ ವೇಳೆಯಲ್ಲಿ ಹಾಗೂ ಶುಕ್ರವಾರ ಮುಂಜಾನೆ ಹುಲಿ ಸೆರೆಗೆ ಹೊಸತಂತ್ರಗಾರಿಕೆ ಮಾಡಿದ್ದು ಸುಮಾರು 300 ಮೀ.ಸುತ್ತಳತೆಯಲ್ಲಿ 200ಕ್ಕೂ ಅಧಿಕ ಸಿಬ್ಬಂದಿ ಕಾರ್ಯನಿರ್ವಹಿಸುವ ಸಾಧ್ಯತೆಯಿದ್ದು, ಹುಲಿ ಸಂಚಾರದ ಮಾರ್ಗದಲ್ಲಿ ಜೀವಂತ ಹಸುವನ್ನು ಕಟ್ಟಿಹಾಕಿ 300 ಮೀ. ಸುತ್ತಳತೆಯಲ್ಲಿ ಬಿಳಿ ಬಟ್ಟೆಯಿಂದ ಪಟ್ಟಿಯನ್ನು ಕಟ್ಟುವ ಮೂಲಕ ಹುಲಿಯ ಆಗಮನವನ್ನು ನಿರೀಕ್ಷಿಸಲಾಗಿದೆ. ಇದರ ಚಲನ ವಲನಗಳನ್ನು ಕ್ಯಾಮೆರಾದಲ್ಲಿ ಹಾಗೂ ಸಮೀಪದಲ್ಲಿ ಮರದ ಮೇಲೆ ನಿರ್ಮಿಸಿರುವ ಅಟ್ಟಣಗೆÉಯಿಂದ ವೀಕ್ಷಣೆ ಮಾಡಲಾಗುವದು. ಸುಮಾರು 25 ಮೀ. ದೂರದಲ್ಲಿ ಅರವಳಿಕೆ ತಜ್ಞರು ಹುಲಿಯ ಮೇಲೆ ನಿಗಾವಹಿಸಲಿದ್ದಾರೆ. ಒಂದು ವೇಳೆ ರಾತ್ರಿಯಲ್ಲಿ ಹುಲಿ ಹಸುವಿನ ಮೇಲೆ ಎರಗಲು ಆಗಮಿಸಿದಲ್ಲಿ ಅನತಿ ದೂರದಲ್ಲಿರುವ ಅರವಳಿಕೆ ತಜ್ಞರು ಹುಲಿಯ ಮೇಲೆ ಅರವಳಿಗೆ ಪ್ರಯೋಗ ಮಾಡಲಿದ್ದಾರೆ. ಅಧಿಕಾರಿಗಳ, ಸಿಬ್ಬಂದಿಗಳ, ವೈದ್ಯರ ನಿರೀಕ್ಷೆಯಂತೆ ಹುಲಿ ಸೆರೆಯಾದಲ್ಲಿ ಸುತ್ತಲು ಪಹರೆ ನಡೆಸುತ್ತಿರುವ ಸಿಬ್ಬಂದಿಗಳು ಕ್ಷಣಾರ್ಧದಲ್ಲಿ ಘಟನಾ ಸ್ಥಳಕ್ಕೆ ಆಗಮಿಸಿ ಹುಲಿಯನ್ನು ಬೋನಿಗೆ ಸ್ಥಳಾಂತರ ಮಾಡಲು ಸಕಲ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದಾರೆ. ಈಗಾಗಲೇ 60ಕ್ಕೂ ಹೆಚ್ಚಿನ ಅರಣ್ಯ ಸಿಬ್ಬಂದಿ ಹುಲಿ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿದ್ದು, ಹುಲಿಯನ್ನು ಸೆರೆ ಹಿಡಿದೇ ತೀರುವ ಪ್ರಯತ್ನದಲ್ಲಿದ್ದಾರೆ.

ಕಳೆದ ಆರು ದಿನಗಳಿಂದ ಮುಂಜಾನೆ ವೇಳೆಯಲ್ಲಿ ಕೊಟ್ಟಗೇರಿಯ ಮಾಪಂಗಡ ಸಜನ್ ದೇವಯ್ಯ ಅವರ ತೋಟದ ಸಮೀಪಕ್ಕೆ ಭೇಟಿ ನೀಡುತ್ತಿರುವ ಜೆಡಿಎಸ್ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಕಾರ್ಯಾ ಚರಣೆಯ ಸಮಗ್ರ ಮಾಹಿತಿ ಗಳನ್ನು ಅರಣ್ಯ ಇಲಾಖಾಧಿಕಾರಿ ಗಳಾದ ಎಸಿಎಫ್ ಶ್ರೀಪತಿ ಹಾಗೂ ಆರ್‍ಎಫ್‍ಓ ಗಂಗಾಧರ್ ಮತ್ತು ಸಿಬ್ಬಂದಿಗಳಿಂದ ಪಡೆಯುತ್ತಿದ್ದಾರೆ. ನಾಗರಹೊಳೆ, ತಿತಿಮತಿ,ಭಾಗದ ಅರಣ್ಯ ಅಧಿಕಾರಿಗಳು, ರ್ಯಾಪಿಡ್ ಪೋರ್ಸ್ ಸಿಬ್ಬಂದಿಗಳು, ಹುಲಿ ಸೆರೆಗೆ ಸತತ ಪ್ರಯತ್ನ ನಡೆಸುತ್ತಿದ್ದಾರೆ. ಹಿರಿಯ ಅಧಿಕಾರಿಗಳಾದ ಡಿಎಫ್‍ಓ ಕೃಸ್ತರಾಜ್,ಎಸಿಎಫ್ ಪೌಲ್ ಆ್ಯಂಟೋನಿ,ಶ್ರೀಪತಿ,ಆರ್.ಎಫ್.ಓ. ಗಂಗಾಧರ್, ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಉಪವಾಸ ಸತ್ಯಾಗ್ರಹ : ಒಂದು ವಾರದ ಹಿಂದೆ ಹುಲಿ ಸೆರೆಗೆ ಪ್ರತಿಭಟನೆ ನಡೆಸಿ ಆಗ್ರಹಿಸಲಾಗಿತ್ತು. ಇದೀಗ 7 ದಿನಗಳು ಮುಗಿಯುತ್ತಾ ಬಂದರು ಹುಲಿ ಸೆರೆ ಆಗಲಿಲ್ಲ. ಇರುವ ಸಿಬ್ಬಂದಿಗಳು ಶಕ್ತಿ ಮೀರಿ ಶ್ರಮಿಸುತ್ತಿದ್ದಾರೆ. ಈ ಘಟನೆಯ ವಿಚಾರವನ್ನು ಹಿರಿಯ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಸ್ಥಳಕ್ಕಾಗಮಿಸಿ ಕೆಲಸ ನಿರ್ವಹಿಸ ಬೇಕು. ಆಧುನಿಕ ತಂತ್ರಜ್ಞಾನ ಬಳಸಿ ಹುಲಿ ಸೆರೆಗೆ ಮುಂದಾಗಬೇಕು. ಹುಲಿ ಆನೆ ಮಾನವ ಸಂಘರ್ಷಕ್ಕೆ ವಿಶೇಷ ಘಟಕ ರಚಿಸಿ ಉನ್ನತ ಅಧಿಕಾರಿ ಗಳನ್ನು ನೇಮಿಸಬೇಕು. ಹುಲಿ ಸೆರೆ ಆಗದಿದ್ದಲ್ಲಿ ಕೊಟ್ಟಗೇರಿ ರೈತನ ಕೊಟ್ಟಿಗೆಯಲ್ಲಿ ಉಪವಾಸ ಸತ್ಯಾಗ್ರಹ ಮಾಡುವ ಮೂಲಕ ಸರ್ಕಾರವನ್ನು ಎಚ್ಚರಿಸಲಾಗುವದು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ತಿಳಿಸಿದ್ದಾರೆ.