ಮಡಿಕೇರಿ, ಏ. 11: ದಕ್ಷಿಣ ಕೊಡಗಿನ ಪ್ರಮುಖ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ಶ್ರೀ ಇರ್ಪು ಕ್ಷೇತ್ರ ಪ್ರಸ್ತುತದ ದಿನಗಳಲ್ಲಿ ನಿರ್ಲಕ್ಷ್ಯಕ್ಕೆ ಈಡಾಗುತ್ತಿರುವದು ಕಂಡುಬರುತ್ತಿದೆ.
ಆಕರ್ಷಕ ಜಲಧಾರೆ ಇರುವದು ಇಲ್ಲಿನ ಒಂದು ವಿಶೇಷತೆ. ಹಲವಾರು ಅವ್ಯವಸ್ಥೆಗಳು ಸೇರಿದಂತೆ ಪ್ರವಾಸಿಗರು ಹರಡುವ ತ್ಯಾಜ್ಯ ಮತ್ತಿತರ ಸಮಸ್ಯೆಗಳು ಇಲ್ಲಿ ದಿನನಿತ್ಯ ಕಂಡು ಬರುತ್ತವೆ. ಇದೀಗ ರಜಾ ಸಮಯವಾಗಿದ್ದು, ರಾಜ್ಯದಲ್ಲಿ ಚುನಾವಣೆ ಇದ್ದರೂ ನೆರೆ ರಾಜ್ಯಗಳಿಂದ ಪ್ರವಾಸಿಗರು ಹೆಚ್ಚಾಗಿ ಆಗಮಿಸುತ್ತಿರುತ್ತಾರೆ. ಇದು ಕೇವಲ ಪ್ರವಾಸಿ ತಾಣವಲ್ಲ ಪ್ರಮುಖ ಧಾರ್ಮಿಕ ಕೇಂದ್ರವೂ ಆಗಿದೆ.
ಈ ಕ್ಷೇತ್ರ ಪ್ರವಾಸಿಗರು ಬಿಸಾಡುವ ತ್ಯಾಜ್ಯ ವಸ್ತುಗಳಿಂದಾಗಿ ದುರ್ವಾಸನೆಯಿಂದ ಕೂಡಿದೆ. ಇದರೊಂದಿಗೆ ಜಲಪಾತದ ಸ್ಥಳದಲ್ಲಿ ಮಹಿಳೆಯರಿಗೆ ಬಟ್ಟೆ ಬದಲಾಯಿಸಲು ಸರಿಯಾದ ವ್ಯವಸ್ಥೆ ಇಲ್ಲ. ಮಹಿಳೆಯರು ಬಟ್ಟೆ ಬದಲಾಯಿಸುವದನ್ನು ನೋಡಲು ಕೆಲವು ಕಾಮುಕರು ಬೆಟ್ಟದ ಮೇಲೆ ಹತ್ತಿ ಕುಳಿರುಕೊಳ್ಳುವದು ಸಾಮಾನ್ಯವಾಗಿದೆ. ಇಲ್ಲಿ ಯಾವದೇ ಪೊಲೀಸ್ ಅಥವಾ ಖಾಸಗಿ ರಕ್ಷಕರ ವ್ಯವಸ್ಥೆ ಇಲ್ಲ. ಮಕ್ಕಳು, ಮಹಿಳೆಯರು ಉಪಯೋಗಿಸುವ ಡೈಪರ್, ನ್ಯಾಪ್ಕಿನ್, ಮಲ-ಮೂತ್ರ ವಿಸರ್ಜನೆ ಮಾಡಿರುವ ಪ್ಲಾಸ್ಟಿಕ್ ಪೊಟ್ಟಣಗಳು ಜಲಪಾತದ ಬಂಡೆ ಕಲ್ಲುಗಳ ಮೇಲೆ ಬಿಸಾಡಿದ್ದು, ಇಡೀ ಕ್ಷೇತ್ರ ದುರ್ವಾಸನೆಯಿಂದ ಕೂಡಿದೆ. ಪಾನಮತ್ತರಾಗಿ ನರುವ ಅನೇಕ ಪ್ರವಾಸಿಗರು ಜಲಪಾತದ ಕೆಳಗೆ ಗಂಟೆ ಗಟ್ಟಲೆ ಕುಳಿತು ಮಜಾ ಮಾಡುತ್ತಾ ಪುಣ್ಯ ಸ್ನಾನಕ್ಕೆ ಬಂದವರಿಗೆ ಅಡಚಣೆ ಮಾಡುತ್ತಿರುವದು ಕಂಡು ಬರುತ್ತಿದೆ. ಮದ್ಯಪಾನ ಮಾಡಿದ ಕಪ್ಪುಗಳ ಗಾಜುಗಳು, ಪ್ಲಾಸ್ಟಿಕ್ ಕಪ್ಗಳು ತುಂಬಿದ್ದು ಯಾವದೇ ಸ್ವಚ್ಛತೆ ಇಲ್ಲದಂತಾಗಿದೆ.
ದೇವಸ್ಥಾನ ಮತ್ತು ಅರಣ್ಯ ಇಲಾಖೆ ಪ್ರತೀ ಪ್ರವಾಸಿಗರಿಂದ ಪಡೆದ ಪ್ರತೀ ದಿನದ ಸಾವಿರಾರು ರೂಪಾಯಿ ಹಣವನ್ನು ಏನು ಮಾಡುತ್ತಾರೆ ಎನ್ನುವದು ಎಲ್ಲರ ಪ್ರಶ್ನೆ. ಈ ಕ್ಷೇತ್ರಕ್ಕೆ ಪ್ರತೀ ದಿನ ಕನಿಷ್ಟ 500 ರಿಂದ 2000 ದಷ್ಟು ಜನರು ಆಗಮಿಸುತ್ತಿದ್ದು, ಇಲ್ಲಿ ವಾಹನ ನಿಲುಗಡೆಗೆ ಕೂಡಾ ಶುಲ್ಕ ವಸೂಲು ಮಾಡಲಾಗುತ್ತಿದೆ. ಜನರಿಂದ ಪ್ರತೀ ತಿಂಗಳು ಲಕ್ಷಾಂತರ ಹಣ ವಸೂಲಿ ಮಾಡಿದರೂ ಕೂಡಾ ಇಲ್ಲಿ ಯಾವದೇ ಮೂಲಭೂತ ಸೌಕರ್ಯ, ಸ್ವಚ್ಛತೆ ಇಲ್ಲ. ಈ ಪುಣ್ಯ ಕ್ಷೇತ್ರವನ್ನು ಪ್ರವಾಸಿಗರು ಮೋಜಿನ ತಾಣ ಮಾಡಿ ಇಡೀ ಪ್ರದೇಸವನ್ನು ಹಾಳು ಮಾಡಿದ್ದಾರೆ. ಇದು ಜನರ ಧಾರ್ಮಿಕ ಭಾವನೆಗೂ ಧಕ್ಕೆಯಾಗಿದೆ. ಈ ಜಲಪಾತದ ಸಮೀಪದ ಕಾಡಿನಲ್ಲಿ ಅನೇಕ ಅನೈತಿಕ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಕೂಡಾ ಮಾಹಿತಿ ಕೇಳಿ ಬಂದಿದೆ. ಆದರೆ ಇಲ್ಲಿನ ಸಿಬ್ಬಂದಿಗಳು ಬರೀ ಹಣ ವಸೂಲಾತಿ ಮಾಡುವ ಬಗ್ಗೆ ಮಾತ್ರ ಕಾಳಜಿ ವಹಿಸಿದ್ದು, ಜನರ ಸಮಸ್ಯೆ ಬಗ್ಗೆ ತಲೆ ಕೆಡಿಸಿಕೊಂಡಿರುವದಿಲ್ಲ ಎಂದು ಶ್ರೀಮಂಗಲದ ವಕೀಲ ಎಂ.ಟಿ. ಕಾರ್ಯಪ್ಪ ಆಪಾದಿಸಿದ್ದಾರೆ.
ದೇವಸ್ಥಾನದ ಆಡಳಿತ ಮಂಡಳಿ ಈ ಪುಣ್ಯ ಕ್ಷೇತ್ರದ ಪಾವಿತ್ರ್ಯತೆ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳಬೇಕಿದೆ. ಇರ್ಪು ಜಲಪಾತ ಹಿಂದುಗಳ ಪುಣ್ಯಕ್ಷೇತ್ರ. ಪ್ರವಾಸಿಗರಿಗೆ ಇಲ್ಲಿ ನಿಯಂತ್ರಣವಿರಬೇಕು. ಇಲ್ಲಿ ಮದ್ಯಪಾನ - ಮಾಂಸದ ಊಟ ಪ್ರತೀ ದಿನ ನಡೆಯುತ್ತದೆ. ಕುಡಿದು ದಾಂಧಲೆ ಮಾಡುವದು ಸರ್ವೆ ಸಾಮಾನ್ಯವಾಗಿದ್ದು, ಪ್ರವಾಸಿಗರು ಜಲಪಾತಕ್ಕೆ ಹೋಗುವ ನೆಪದಲ್ಲಿ ರಕ್ಷಿತಾರಣ್ಯಕ್ಕೆ ಅಕ್ರಮ ಪ್ರವೇಶ ಮಾಡಿ ಕಾನೂನು ಬಾಹಿರ ಚಟುವಟಿಕೆ ಮಾಡುತ್ತಿದ್ದಾರೆ.
ಈ ಬಗ್ಗೆ ದೇವಸ್ಥಾನ ಆಡಳಿತ ಮಂಡಳಿ ಮತ್ತು ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಸಾರ್ವಜನಿಕರು ಪ್ರತಿಭಟನೆ ಮಾಡಬೇಕಾಗಿತ್ತದೆ. ದೇವಸ್ಥಾನದ ಮುಂದೆ ಅನೇಕ ಅಂಗಡಿ ಮಳಿಗೆಯನ್ನು ಹೊರ ರಾಜ್ಯದವರಿಗೆ ನೀಡಿ ಸ್ಥಳೀಯರಿಗೆ ಅನ್ಯಾಯ ಮಾಡಿದ್ದಾರೆ. ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಯಂ.ಟಿ. ಕಾರ್ಯಪ್ಪ ಆಗ್ರಹಿಸಿದ್ದಾರೆ.