ಒಡೆಯನಪುರ: ಗೋಪಾಲಪುರ ಶ್ರೀ ಬನಶಂಕರಿ ಅಮ್ಮನವರ ದೇವಾಲಯದ 20ನೇ ವರ್ಷದ ವಾರ್ಷಿಕ ಮಹೋತ್ಸವ ಮಂಗಳವಾರ ಭಕ್ತಿ ಪೂರ್ವಕವಾಗಿ ನೆರವೇರಿತು. ಎರಡು ದಿನಗಳವರೆಗೆ ನಡೆಯಲಿರುವ ವಾರ್ಷಿಕ ಮಹೋತ್ಸವದ ಅಂಗವಾಗಿ ಮಂಗಳವಾರ ಬೆಳಿಗ್ಗೆ 8 ಗಂಟೆಯಿಂದ ದೇವಾಲಯದ ಪ್ರಧಾನ ಅರ್ಚಕ ಎನ್.ಕೆ. ನಾಗೇಶ್ ನೇತೃತ್ವದಲ್ಲಿ ಅರ್ಚಕರ ತಂಡದವರು ವಿವಿಧ ಪೂಜಾ ವಿದಿ ವಿಧಾನಗಳನ್ನು ನಡೆಸಿಕೊಟ್ಟರು. ಮಹಾಗಣಪತಿ ಪೂಜೆ, ಶ್ರೀ ವೀರಭದ್ರೇಶ್ವರ ಪೂಜಾ ಪೂರ್ವಕವಾಗಿ ಶ್ರೀ ಅಮ್ಮನವರಿಗೆ ಫಲ ಪಂಚಾಮೃತ ಅಭಿಷೇಕ, ದುರ್ಗಾಸೂಕ್ತ, ಶ್ರೀಸೂಕ್ತ, ಅಭಿಷೇಕ, ಅಲಂಕಾರ ಸೇವೆಯೊಂದಿಗೆ ಮಹಾಮಂಗಳಾರತಿ ಸಲ್ಲಿಸಲಾಯಿತು.

ನವಗ್ರಹ ಮೃತ್ಯುಂಜಯ ದುರ್ಗಾ ವಾಸ್ತು ಪೂಜೆ ಮತ್ತು ಹೋಮ ಹವನವನ್ನು ನೆರವೇರಿಸಲಾಯಿತು. ಮಧ್ಯಾಹ್ನ ಪೂರ್ಣಾಹುತಿ ಪೂಜಾ ವಿಧಾನದೊಂದಿಗೆ ದೇವರಿಗೆ ಮಹಾಮಂಗಳಾರತಿ ನೆರವೇರಿಸಲಾಯಿತು ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಆಡಳಿತ ಸಮಿತಿಯಿಂದ ಅನ್ನದಾನ ಏರ್ಪಡಿಸಲಾಯಿತು. ಗ್ರಾಮಸ್ಥರಿಗಾಗಿ ವಿವಿಧ ಆಟೋಟ ಸ್ಪರ್ಧೆ ನಡೆದವು.

ವಾರ್ಷಿಕ ಆರಾಧನೋತ್ಸವ

ಮಡಿಕೇರಿ: ಮಂಗಳಾದೇವಿ ನಗರದ ಶ್ರೀ ಆದಿಪರಾಶಕ್ತಿ ದೇವಿಯ ವಾರ್ಷಿಕ ಆರಾಧನೋತ್ಸವ ಮೇ 17 ರಿಂದ 23 ರವರೆಗೆ ನಡೆಯಲಿದೆ. ತಾ. 17 ರಂದು ರಾತ್ರಿ 10 ಗಂಟೆಗೆ ಹೂ ವರ ಕೇಳುವದು, 12 ಗಂಟೆಗೆ ಶ್ರೀ ಮುನೀಶ್ವರ ದೇವರ ಪೂಜೆ, ಅಗ್ನಿಕರಗಕ್ಕೆ ಕೆಂಡ ಹಾಕುವದು ನಂತರ ದೈವಗಣಗಳಿಗೆ ಆಹಾರತರ್ಪಣೆ ಸಲ್ಲಿಕೆ ನಡೆಯಲಿದೆ.

ತಾ. 18 ರಂದು ಬೆಳಿಗ್ಗೆ 9 ಗಂಟೆಗೆ ಶ್ರೀ ಗಣಪತಿ ಹೋಮ-ಹವನ, ಶ್ರೀ ದೇವಿಯ ಧ್ವಜಾರೋಹಣ, ವಿಶೇಷ ಪೂಜೆ ಮತ್ತು ಅಗ್ನಿಕರಗದ ಪೂಜೆ ನೆರವೇರಲಿದೆ. ತಾ. 19 ರಂದು ಶ್ರೀ ದೇವಿಗೆ ಅಲಂಕೃತ ಪೂಜೆ ಮತ್ತು ಅಗ್ನಿಕರಗದ ನಗರ ಪ್ರದಕ್ಷಿಣೆ ನಡೆಯಲಿದೆ. ತಾ. 20 ರಂದು ಶ್ರೀ ದೇವಿಯ ವಿಶೇಷ ಪೂಜೆ ಮತ್ತು ಅಗ್ನಿಕರಗದ ನಗರ ಪ್ರದಕ್ಷಿಣೆ ನಡೆಯಲಿದೆ. ತಾ. 21 ರಂದು ಸಂಜೆ 7 ಗಂಟೆಗೆ ಪಂಪು ಕೆರೆಯಿಂದ ಮುಖ್ಯ ಬೀದಿಗಾಗಿ ಶ್ರೀ ಆದಿಪರಾಶಕ್ತಿ ದೇವಾಲಯಕ್ಕೆ ಶ್ರೀ ದೇವಿಯ ಕಲಶ ತೀರ್ಥ, ಪಡಕಲಂ, ಹೂವಿನ ಕರಗ, ಅಗ್ನಿಕರಗ ಮತ್ತು ವಿದ್ಯುತ್ ಅಲಂಕೃತ ಮಂಟಪ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ತೆರಳಲಿದೆ. ತಾ. 22 ರಂದು ಬೆಳಿಗ್ಗೆ ಶ್ರೀ ದೇವಿಯ ಸನ್ನಿಧಿಯಲ್ಲಿ ಪೊಂಗಲ್ ಹಾಗೂ ತಂಬಿಟ್ಟು, ದೀಪಕಲಶಗಳ ಉತ್ಸವ, 12 ಗಂಟೆಗೆ ಮಹಾಪೂಜೆ, ನಂತರ ಭಕ್ತಾದಿಗಳಿಗೆ ಪ್ರಸಾದ ಹಾಗೂ ಅನ್ನಸಂತರ್ಪಣೆ ನೆರವೇರಲಿದೆ. ತಾ. 23 ರಂದು ಅಪರಾಹ್ನ 3 ಗಂಟೆಗೆ ಓಕುಳಿ, ಸಂಜೆ 7 ಗಂಟೆಗೆ ಶ್ರೀ ದೇವಿಯ ಶಾಂತಿ ಪೂಜೆಯೊಂದಿಗೆ ಶ್ರೀ ದೇವಿಯ ಧ್ವಜಾವರೋಹಣ ನೆರವೇರಲಿದೆ ಎಂದು ದೇವಾಲಯ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.

ಕಗ್ಗೋಡ್ಲು ಭಗವತಿ ದೇವಿ ಉತ್ಸವ

ಮಡಿಕೇರಿ: ಕಗ್ಗೋಡ್ಲು ಶ್ರೀ ಭಗವತಿ ದೇವಸ್ಥಾನದ ವಾರ್ಷಿಕೋತ್ಸವ ತಾ. 14 ರಿಂದ 18 ರವರೆಗೆ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ನೆರವೇರಲಿದೆ. ದೇವರ ಉತ್ಸವಕ್ಕೆ ತಾ. 10 ರಂದು ಕಟ್ಟುಬಿದ್ದಿದ್ದು, ತಾ. 14 ರಂದು ಬೆಳಿಗ್ಗೆ 9.30 ಕ್ಕೆ ಮಹಾಪೂಜೆ, 10.30 ಕ್ಕೆ ಪಂಚಗವ್ಯಯೋಜನೆ, ಪ್ರೋಕ್ಷಣಿ ಪುಣ್ಯಾಹ ವಾಚನ ನಡೆಯಲಿದೆ. ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 6 ಗಂಟೆಗೆ ಸಾಮೂಹಿಕ ಪ್ರಾರ್ಥನೆಯೊಂದಿಗೆ ಉತ್ಸವ ಆರಂಭಗೊಳ್ಳಲಿದೆ. ಕೊಡಿಮರ ಏರಿಸುವದು, ಪರಿವಾರ ದೇವತಾ ಬಲಿ, ಮಹಾಪೂಜೆ ಬಳಿಕ ಅನ್ನಸಂತರ್ಪಣೆಯಿದೆ. ತಾ. 15 ರಂದು ಬೆಳಿಗ್ಗೆ 5 ಗಂಟೆಗೆ ನವಗ್ರಹ ವೃಕ್ಷಪೂಜೆ, 12.30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ 6 ರಿಂದ ನೆರುಪ್ಪು ನೃತ್ಯ, ಬಲಿ, ಪರಿವಾರ ದೇವತಾ ಬಲಿ, ಅನ್ನಸಂತರ್ಪಣೆ ನಡೆಯಲಿದೆ.

ತಾ. 16 ರಂದು ಬೆಳಿಗ್ಗೆ 7 ಗಂಟೆಗೆ ಏಕಾದಶ ರುದ್ರಾಭಿಷೇಕ, 9.30 ಕ್ಕೆ ಮಹಾಪೂಜೆ, 10.30 ಕ್ಕೆ ಆಶ್ಲೇಷಬಲಿ, ದೇವರ ಅವಭೃತ ಸ್ನಾನ, ಅಲಂಕಾರ ಪೂಜೆ, ಅನ್ನಸಂತರ್ಪಣೆ ಇದೆ. ತಾ. 17 ರಂದು ನವಕ ಕಲಶ ಪೂಜೆ, ಕೊಡಿಮರ ಇಳಿಸುವರು, 12 ಗಂಟೆಗೆ ಕಲಶಾಭಿಷೇಕ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ತಾ. 18 ರಂದು ಅಪರಾಹ್ನ 2 ರಿಂದ ಸಂಜೆ 6 ರವರೆಗೆ ಬೇಟೆ ಅಯ್ಯಪ್ಪ ಬನದಲ್ಲಿ ಅಯ್ಯಪ್ಪ ದೇವರ ತೆರೆ ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.

ಪ್ರತಿಷ್ಠಾಪನಾ ಕಾರ್ಯ

ಶ್ರೀಮಂಗಲ: ಪೊನ್ನಂಪೇಟೆ ಸಮೀಪ ಬಲ್ಯಮುಂಡೂರು ಗ್ರಾಮದ ಶ್ರೀ ಮಾರಮ್ಮ ದೇವಸ್ಥಾನದ ಪುನರ್ ಪ್ರತಿಷ್ಠಾಪನಾ ಬ್ರಹ್ಮಕಲಶಾಭಿಷೇಕ ಮಂಗಳವಾರದಿಂದ ಆರಂಭವಾಗಿದೆ. ತಾ. 12 ರಂದು (ಇಂದು) ದೇವಿಯ ಪುನರ್ ಪ್ರತಿಷ್ಠಾಪನೆಯ ಕಾರ್ಯಕ್ರಮ ನಡೆಯಲಿದೆ

ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಪಸುದಾನ ಪುಣ್ಯ, ದೀಪಾರಾದನೆ, ಪ್ರಸಾದ ಶುದ್ಧಿ, ರಕ್ಷ ಕಲಾಸ ಪೂಜೆ, ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಕಲಶ ಪೂಜೆ, ವಾಸ್ತು ಬಲಿ ಹಾಗೂ ಮಹಾಪೂಜೆ ನಡೆಯಿತು.

ಬೆಳಿಗ್ಗೆ 7 ಗಂಟೆಗೆ ಗಣಪತಿ ಹೋಮ, ಉಷಾ ಪೂಜೆ, 108 ಕಲಶಾಭಿಷೇಕ ಪೂಜೆ, 8.30 ರಿಂದ 10.30 ರವರೆಗೆ ಬ್ರಹ್ಮಕಲಶಾಭಿಷೇಕ ನಡೆಯಲಿದೆ. ಕೇರಳದ ಪಳ್ಳಿಪರಂಬಿನ ಪಾಂಡುರಂಗನ್ ನಂಬೂದರಿ ತಂತ್ರಿಗಳಿಂದ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.ದೊಡ್ಡಪುಲಿಕೋಟು: ಕೋಟೆ ಭಗವತಿ ದೇವರ ಉತ್ಸವ ವಿಜೃಂಭಣೆಯಿಂದ ನಡೆಯಿತು. 3 ದಿನ ನಡೆಯುವ ಉತ್ಸವದಲ್ಲಿ ತಾ. 7 ರಂದು ಅಂದಿಬೊಳಕು, ತಾ. 8 ರಂದು ಎತ್ತು ಪೋರಾಟ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮ, ದೇವರ ನೃತ್ಯ ಮಳೆಯ ನಡುವೆಯೇ ನಡೆಯಿತು ಮತ್ತು ತಾ. 9 ರಂದು ತೆಂಗಿನಕಾಯಿಗೆ ಗುಂಡು ಹೊಡೆಯುವದು, ಬೊಳಕಾಟ್, ದೇವರ ಜಳಕ ಮತ್ತು ದೇವರ ನೃತ್ಯ ಬಲಿ ಕಾರ್ಯಕ್ರಮ ನಡೆಯಿತು.

ಅಡ್ಡಪಲ್ಲಕ್ಕಿ ಮೆರವಣಿಗೆ ಶನಿವಾರಸಂತೆ: ವಾರ್ಷಿಕೋತ್ಸವದ ಪ್ರಯುಕ್ತ ಬನಶಂಕರಿ ಅಮ್ಮನವರನ್ನು ಗಂಗಾ ಸ್ನಾನದ ಬಳಿಕ ಅಡ್ಡಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ, ಪಂಚಕಲಶ ಹೊತ್ತ ಮಹಿಳೆಯರು ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆಯಲ್ಲಿ ಸಾಗಿ ದೇವಾಲಯಕ್ಕೆ ತರಲಾಯಿತು.

ದೇವಾಲಯದ ಮುಂಭಾಗ ಏರ್ಪಡಿಸಿದ್ದ ಕೆಂಡಕೊಂಡವನ್ನು ಭಕ್ತರು ಶ್ರದ್ಧಾಭಕ್ತಿಯಿಂದ ಹಾಯ್ದು ದೇವಿ ಕೃಪೆಗೆ ಪಾತ್ರರಾದರು. ನಂತರ ಬನಶಂಕರಿ ಅಮ್ಮನವರಿಗೆ ವಿಶೇಷ ಪೂಜೆ, ಕುಂಕುಮಾರ್ಚನೆ, ಮಹಾಮಂಗಳಾರತಿ ಮಾಡಲಾಯಿತು. ಪ್ರಸಾದ ವಿನಿಯೋಗದೊಂದಿಗೆ 2 ದಿನಗಳ ವಾರ್ಷಿಕೋತ್ಸವ ಸಂಪನ್ನವಾಯಿತು.

ಅರ್ಚಕ ಎನ್. ನಾಗೇಶ್ ಭಟ್ ಪೂಜಾ ವಿಧಿಗಳನ್ನು ನೆರವೇರಿಸಿದರು. ಮೆರವಣಿಗೆ ಹಾಗೂ ಪೂಜಾ ಸಂದರ್ಭ ನೂರಾರು ಮಂದಿ ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು. ದೇವಾಲಯ ಸಮಿತಿ ಹಾಗೂ ದೇವಾಂಗ ಸಂಘದ ಪದಾಧಿಕಾರಿಗಳು ಹಾಜರಿದ್ದರು.