ಕೂಡಿಗೆ, ಏ. 11: ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಮುಳ್ಳುಸೋಗೆ ಗ್ರಾ.ಪಂ. ವತಿಯಿಂದ ಕಾವೇರಿ ನದಿಯಿಂದ ಪೈಪ್‍ಲೈನ್ ಅಳವಡಿಸಿ ನೀರೊದಗಿಸಲಾಗಿದೆ.

ಶುದ್ಧ ಕುಡಿಯುವ ನೀರಿನ ಘಟಕಕ್ಕೆ ತೆಗೆದ ಬೋರ್‍ವೆಲ್‍ನಲ್ಲಿ ಗಡಸು ನೀರು (ಶುದ್ಧೀಕರಣ ವಾಗದಂತಹ ನೀರು) ಬರುತ್ತಿದ್ದರಿಂದ ನೀರಿನ ಘಟಕದಲ್ಲಿ ಶುದ್ಧೀಕರಣಗೊಳ್ಳದೆ ನೇರವಾಗಿ ಗಡಸು ನೀರು ಸಾರ್ವಜನಿಕರಿಗೆ ಸರಬರಾಜಾಗುತ್ತಿತ್ತು. ಈ ನೀರಿನ ಶುದ್ಧೀಕರಣ ಕಾರ್ಯ ಪ್ರಾರಂಭವಾದಾಗ ಶುದ್ಧೀಕರಣ ಯಂತ್ರಗಳು ನಿಂತು ಹೋಗುತ್ತಿದ್ದವು.

ಇತ್ತೀಚೆಗೆ ಈ ವ್ಯಾಪ್ತಿಗಳಲ್ಲಿ ನೀರಿನ ಬವಣೆ ಹೆಚ್ಚಾಗಿದ್ದು, ಈ ಶುದ್ಧೀಕರಣ ಘಟಕದಿಂದಲೂ ನೀರು ಒದಗದೆ ಈ ವ್ಯಾಪ್ತಿಯ ಜನರು ನೀರಿಗಾಗಿ ಪರದಾಡುವಂತಾಗಿತ್ತು. ಇದರಿಂದ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವತಿಯಿಂದ ರೂ. 2 ಲಕ್ಷ ವೆಚ್ಚದಲ್ಲಿ ಕಾವೇರಿ ನದಿಯಿಂದ ಪೈಪ್‍ಲೈನ್ ಅಳವಡಿಸಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ನೀರೊದಗಿಸಲಾಗಿದೆ ಎಂದು ಮುಳ್ಳುಸೋಗೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರಾಜಶೇಖರ್ ತಿಳಿಸಿದ್ದಾರೆ.