ಮಡಿಕೇರಿ, ಏ. 10: ಕೂರ್ಗ್ ವುಮೆನ್ಸ್ ಸಾಕರ್ ಕ್ಲಬ್ ವತಿಯಿಂದ ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಸಯೋಗದೊಂದಿಗೆ ಮರಗೋಡುವಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಜಿಲ್ಲಾಮಟ್ಟದ ಫುಟ್ಬಾಲ್ ಪಂದ್ಯಾವಳಿಯಲ್ಲಿ ಒಂಟಿಯಂಗಡಿಯ ಸಿವೈಸಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಗೌಡಳ್ಳಿಯ ಗೋಲ್ಡನ್ ಗೈಸ್ ತಂಡ ದ್ವಿತೀಯ ಸ್ಥಾನ ಗಳಿಸಿದೆ.ಇಂದು ನಡೆದ ರೋಚಕ ಫೈನಲ್ ಪಂದ್ಯಾಟದಲ್ಲಿ ಸಿವೈಸಿ ತಂಡ ಗೌಡಳ್ಳಿ ತಂಡವನ್ನು 4-3 ಗೋಲುಗಳಿಂದ ಸೋಲಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ವಿಜೇತ ತಂಡ ಪರ ನವೀನ್ 2, ಸತ್ಯ ಹಾಗೂ ಅಪ್ಪು ತಲಾ ಒಂದು ಗೋಲು ಗಳಿಸಿದರು. ಗೌಡಳ್ಳಿ ಪರ ಯತೀಶ್ 2, ಪ್ರೇಮನಾಥ್ ಒಂದು ಗೋಲು ಬಾರಿಸಿದರು. ಇದಕ್ಕೂ ಮುನ್ನ ನಡೆದ ಸೆಮಿಫೈನಲ್ ಪಂದ್ಯಾಟದಲ್ಲಿ ಗೌಡಳ್ಳಿ ತಂಡ 2-1 ಗೋಲುಗಳ ಅಂತರದಲ್ಲಿ ಸುಂಟಿಕೊಪ್ಪ ಫ್ರಂಡ್ಸ್ ಕ್ಲಬ್ ತಂಡವನ್ನು ಸೋಲಿಸಿದರೆ, ಮತ್ತೊಂದು ಸೆಮಿಫೈನಲ್‍ನಲ್ಲಿ ಸಿವೈಸಿ ತಂಡ ಗೌಡ ಫುಟ್ಬಾಲ್ ಅಕಾಡೆಮಿ ತಂಡವನ್ನು 7-0 ಗೋಲುಗಳ ಭಾರೀ ಅಂತರದಿಂದ ಸೋಲಿಸಿತು. ಈ ಪಂದ್ಯಾವಳಿಯಲ್ಲಿ ಮೊದಲಾರ್ಧದಲ್ಲಿಯೇ ಸಿವೈಸಿ ತಂಡ 7 ಗೋಲು ಬಾರಿಸಿದ್ದರಿಂದ ಗೌಡ ಫುಟ್ಬಾಲ್ ಅಕಾಡೆಮಿ ತಂಡ ಮೊದಲಾರ್ಧದಲ್ಲಿಯೇ ಪಂದ್ಯಾಟವನ್ನು ಮೊಟಕುಗೊಳಿಸಿತು. ಅತ್ಯುತ್ತಮ ಆಟಗಾರ ಪ್ರಶಸ್ತಿಯನ್ನು ಗೌಡಳ್ಳಿಯ ಯತೀಶ್, ಅತ್ಯಧಿಕ ಸ್ಕೋರರ್ ಆಗಿ ಗೌಡಳ್ಳಿಯ ಸತ್ಯ, ರಕ್ಷಣಾತ್ಮಕ ಆಟಗಾರನಾಗಿ ಸಿವೈಸಿಯ ನವೀನ್, ಅತ್ಯುತ್ತಮ ಗೋಲ್ ಕೀಪರಾಗಿ ಗೌಡಳ್ಳಿಯ ಪ್ರಸಾದ್, ಅತ್ಯುತ್ತಮ ತಂಡವಾಗಿ ಸುಂಟಿಕೊಪ್ಪ ಫ್ರೆಂಡ್ಸ್ ತಂಡದವರು ವೈಯಕ್ತಿಕ ಪ್ರಶಸ್ತಿಯನ್ನು ಪಡೆದುಕೊಂಡರು.

ಸಮಾರೋಪ ಸಮಾರಂಭದಲ್ಲಿ ಕೂರ್ಗ್ ವುಮೆನ್ಸ್ ಸಾಕರ್ ಕ್ಲಬ್ ಅಧ್ಯಕ್ಷ ಪಾಣತ್ತಲೆ ಜಗದೀಶ್, ಮರಗೋಡು ಪಂಚಾಯಿತಿ ಅಧ್ಯಕ್ಷ ಬಿದ್ರುಪಣೆ ಮೋಹನ್, ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ. ವಿಜು ಸುಬ್ರಮಣಿ, ಮರೋಡು ಎಸ್‍ಡಿಎಂಸಿ ಅಧ್ಯಕ್ಷ ಶಿವಪ್ಪ, ಬೆಳೆಗಾರ ಮಳ್ಳಂದಿರ ಕೃಷ್ಣರಾಜು, ವಕೀಲ ಮನೋಜ್ ಬೋಪಯ್ಯ, ಕುಂಬುಗೌಡನ ಜಗದೀಪ್ ಬಹುಮಾನ ವಿತರಿಸಿದರು.

ಇದಕ್ಕೂ ಮುನ್ನ ಕೂರ್ಗ್ ವುಮೆನ್ಸ್ ಸಾಕರ್ ಕ್ಲಬ್ ಮಹಿಳಾ ತಂಡಗಳ ನಡುವೆ ಪ್ರದರ್ಶನ ಪಂದ್ಯ ನಡೆದು ಬಿ ತಂಡ 3-0 ಗೋಲುಗಳಿಂದ ಗೆಲುವು ಸಾಧಿಸಿತು. ಪುರುಷರ ಪ್ರದರ್ಶನ ಪಂದ್ಯದಲ್ಲಿ ವೈಷ್ಣವಿ ಕಟ್ಟೆಮಾಡು ಹಾಗೂ ಕಿಕ್ಕರ್ಸ್ ಮರಗೋಡು ತಂಡ ಮಧ್ಯೆ ನಡೆದು 1-1 ಗೋಲುಗಳ ಅಂತರದಲ್ಲಿ ಸಮಾನಾಂತರ ಕಂಡಿತು.