ಕೂಡಿಗೆ, ಏ. 10: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಹಾಗೂ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಹಳ್ಳಿ ಯಲ್ಲಿರುವ ದಿಡ್ಡಳ್ಳಿ ನಿರಾಶ್ರಿತರ ಪುನರ್ವಸತಿ ಕೇಂದ್ರದಲ್ಲಿ ಸ್ಥಗಿತಗೊಂಡಿದ್ದ ಮನೆ ನಿರ್ಮಾಣ ಕಾಮಗಾರಿಗೆ ಚಾಲನೆ ದೊರೆತು ಇದೀಗ ಶೇ. 75 ರಷ್ಟು ಕಾಮಗಾರಿಗಳು ಮುಗಿದಿದ್ದು, ಇನ್ನುಳಿದ ಕಾಮಗಾರಿ ನಡೆಯಬೇಕಾಗಿದೆ.
ಆದರೆ, ಕೆಲವು ಆದಿವಾಸಿ ಮುಖಂಡರು ಬ್ಯಾಡಗೊಟ್ಟ ಮತ್ತು ಬಸವನಹಳ್ಳಿ ಕೇಂದ್ರಗಳಿಗೆ ತೆರಳಿ ಕಾಮಗಾರಿಯನ್ನು ಪರಿಶೀಲಿಸದೆ, ಗುಣಮಟ್ಟದ ಕಾಮಗಾರಿ ನಡೆಯುತ್ತಿಲ್ಲ ಎಂದು ಮನಬಂದಂತೆ ಹೇಳಿಕೆ ನೀಡುತ್ತಿರುವದರ ವಿರುದ್ಧ ಬ್ಯಾಡಗೊಟ್ಟ ಹಾಗೂ ಬಸವನಹಳ್ಳಿ ಆದಿವಾಸಿ ಕೇಂದ್ರದ ಗಿರಿಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
2016ರಲ್ಲಿ ದಿಡ್ಡಳ್ಳಿಯಲ್ಲಿ ವಸತಿಗಾಗಿ ಹೋರಾಟ ಮಾಡಿದ ಹಿನ್ನೆಲೆ 576 ಕುಟುಂಬಗಳಿಗೆ ವಾಸಿಸಲು ಬ್ಯಾಡಗೊಟ್ಟ ಹಾಗೂ ಬಸವನಹಳ್ಳಿಯಲ್ಲಿ ಸರ್ಕಾರ ನಮಗೆ ಜಾಗವನ್ನು ಕಲ್ಪಿಸಿ, ತಾತ್ಕಾಲಿಕ ಶೆಡ್ಗಳನ್ನು ನೀಡಿ, ಇದೀಗ ಖಾಯಂ ವಾಸದ ಮನೆಗಳನ್ನು ನಿರ್ಮಿಸಿ ಕೊಡುತ್ತಿದೆ. ನಮಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಹಾಗೂ ಆಹಾರ ಸಾಮಗ್ರಿಗಳನ್ನು ಒದಗಿಸುತ್ತಾ ಬಂದಿದೆ. ಕೆಲವು ತೊಂದರೆಗಳು ಬಂದಾಗ ಜಿಲ್ಲಾಡಳಿತ ಮತ್ತು ಸ್ಥಳೀಯ ಸಂಸ್ಥೆಗಳು ಸ್ಪಂದಿಸಿ ಸಮಸ್ಯೆಗಳನ್ನು ಪರಿಹರಿಸಿರುತ್ತಾರೆ. ಆದರೆ, ನಮ್ಮ ಕೇಂದ್ರದಲ್ಲಿಲ್ಲದ ಆದಿವಾಸಿ ಜನಾಂಗದ ಕೆಲವು ವ್ಯಕ್ತಿಗಳು ಮನಬಂದಂತೆ ಹೇಳಿಕೆ ನೀಡುತ್ತಿರುವದು ಸರಿಯಲ್ಲ ಎಂದು ಬ್ಯಾಡಗೊಟ್ಟ ಮತ್ತು ಬಸವನಹಳ್ಳಿ ಕೇಂದ್ರದ ಮುಖಂಡರಾದ ಮಲ್ಲಪ್ಪ, ಸ್ವಾಮಿ, ಸುಬ್ರಮಣಿ, ಅಪ್ಪು ಅವರು ಸ್ಥಳಕ್ಕೆ ತೆರಳಿದ ಸುದ್ದಿಗಾರರೊಂದಿಗೆ ಆಕ್ರೋಶ ವ್ಯಕ್ತಪಡಿಸಿದರು.
ಹಣ ಬಿಡುಗಡೆಗೆ ಒತ್ತಾಯ: 552 ಕುಟುಂಬಗಳು ವಾಸಿಸುತ್ತಿರುವ ಈ ಕೇಂದ್ರಗಳಲ್ಲಿ ಕಳೆದ ಎರಡು ತಿಂಗಳ ಹಿಂದೆ ಸರಕಾರದಿಂದ ಶೇ. 50 ರಷ್ಟು ಹಣ ಮಂಜೂರಾಗಿದ್ದು, ಇನ್ನೂ ಶೇ. 50 ರಷ್ಟು ಹಣ ಬಿಡುಗಡೆಯಾಗ ಬೇಕಿದ್ದು, ಇದರಿಂದ ಮೇಲ್ಛಾವಣಿ ಕಾಮಗಾರಿಯು ನಿಧಾನವಾಗಿ ನಡೆಯುತ್ತಿದೆ. ಇದೀಗ ಪೂರ್ಣ ಗೊಂಡಿರುವ 240 ಮನೆಗಳನ್ನಾದರು ಆದಿವಾಸಿಗಳಿಗೆ ನೀಡಿ ಮುಂದಿನ ದಿನಗಳಲ್ಲಿ ತುರ್ತಾಗಿ ಮನೆ ನಿರ್ಮಿಸಿದರೆ ಅನುಕೂಲ ವಾಗುತ್ತದೆ ಎಂಬದು ಆದಿವಾಸಿಗಳ ಅಭಿಪ್ರಾಯವಾಗಿದೆ. ಈಗಾಗಲೇ ಒಂದು ಮನೆ ನಿರ್ಮಾಣದ ವೆಚ್ಚ ರೂ. 3.91 ಲಕ್ಷ ಆಗಿದ್ದು, ಸರ್ಕಾರದಿಂದ ಅರ್ಧ ಭಾಗದಷ್ಟು ಹಣ ಬಿಡುಗಡೆಯಾಗಿ ಜಿಲ್ಲಾಧಿಕಾರಿ ಮತ್ತು ಐಡಿಡಿಪಿ ಅವರ ಖಾತೆಯಲ್ಲಿ ಸೇರಿದ್ದು, ಇನ್ನೂ ಅರ್ಧ ಭಾಗದಷ್ಟು ಮನೆಗಳ ಕಾಮಗಾರಿ ನಡೆಸಲು ಕಚ್ಛಾವಸ್ತು ಮತ್ತು ಹಣ ಕೊರತೆಯಿಂದ ಗುತ್ತಿಗೆದಾರರು ಕಾಮಗಾರಿಯನ್ನು ನಿಧಾನಗತಿಯಲ್ಲಿ ನಡೆಸುತ್ತಿದ್ದಾರೆ.
ಈಗ ರಾಜ್ಯ ಸರ್ಕಾರ ಸಮಾಜ ಕಲ್ಯಾಣ ಇಲಾಖೆಯ ಮೂಲಕ ರೂ. 3.91 ಲಕ್ಷ ನೀಡಿದರೂ ಈಗಾಗಲೇ ಜಿಎಸ್ಟಿ ಪರಿಣಾಮ ಮನೆಯ ಫಲಾನುಭವಿಗೆ ರೂ. 3.91 ಲಕ್ಷದಲ್ಲಿ ರೂ. 24,000 ಜಿಎಸ್ಟಿಗೆ ಹೋಗುತ್ತಿದ್ದು, ಇನ್ನುಳಿದ ಹಣದಲ್ಲಿ ಕಾಮಗಾರಿ ನಡೆಸಬೇಕಾಗುತ್ತದೆ. ಈ ವಿಷಯವಾಗಿ ಜಿಲ್ಲಾಧಿಕಾರಿಗಳ ಮುಖೇನ ಸಮಾಜ ಕಲ್ಯಾಣ ಇಲಾಖೆ ಸರಕಾರಕ್ಕೆ ಇನ್ನು ಹೆಚ್ಚುವರಿಯಾಗಿ ಒಂದು ಮನೆಗೆ ರೂ. 34,000 ನೀಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಇದರನುಗುಣವಾಗಿ ಬಹುದಿನಗಳ ಬೇಡಿಕೆಯಾಗಿದ್ದ ಆದಿವಾಸಿಗಳ ಪುನರ್ವತಿ ಕೇಂದ್ರಕ್ಕೆ ಮನೆ ನಿರ್ಮಾಣದ ಭಾಗ್ಯ ದೊರೆತು ಇನ್ನೂ ಪೂರ್ಣಗೊಳಿಸಲು ಸರಕಾರದಿಂದ ಹೆಚ್ಚುವರಿ ಪ್ರಸ್ತಾವನೆಯ ಸ್ಪಂದನ ಜಿಲ್ಲಾಧಿಕಾರಿಗಳಿಗೆ ಬರಬೇಕಾಗಿದೆ.
ನಿಧಾನಗತಿಯಲ್ಲಿನ ಹಣದ ಬಿಡುಗಡೆಯಿಂದಾಗಿ ಇದುವರೆಗೂ ಮನೆಗಳು ಪೂರ್ಣಸ್ಥಿತಿಗೆ ಬರಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಬ್ಯಾಡಗೊಟ್ಟ ಮತ್ತು ಬಸವನಹಳ್ಳಿ ಪುನರ್ವಸತಿ ಕೇಂದ್ರಲ್ಲಿ 8 ಕ್ಕೂ ಹೆಚ್ಚು ಗುತ್ತಿಗೆದಾರರು ಮನೆಗಳ ಕಾಮಗಾರಿಯನ್ನು ನಿರ್ವಹಿಸುತ್ತಿದ್ದು, ಅರ್ಧ ಹಣ ಬಿಡುಗಡೆಯಾಗದ ಹಿನ್ನೆಲೆ ನಿಧಾನಗತಿಯ ಕಾಮಗಾರಿ ನಡೆಸುತ್ತಿರುವದು ಕಂಡುಬರುತ್ತಿದೆ.
ಈಗ 180 ಮನೆಗಳ ಕಾಮಗಾರಿ ಪೂರ್ಣಗೊಂಡಿದ್ದು, 80 ಮನೆಗಳ ಮೇಲ್ಛಾವಣಿ ಕಾಮಗಾರಿ ನಡೆಯುತ್ತಿದೆ. 250 ಮನೆಗಳ ಕಾಮಗಾರಿ ಹಂತ ಹಂತವಾಗಿ ನಡೆದು ಮುಂದಿನ ನವೆಂಬರ್ ಒಳಗೆ ಆದಿವಾಸಿಗಳಿಗೆ ಮನೆಗಳನ್ನು ವಾಸಿಸಲು ಹಸ್ತಾಂತರಿಸುವ ಯೋಜನೆಯಿದೆ. ಆದರೆ, ಈ ಎರಡು ಕೇಂದ್ರಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಡಳಿತ ಭೇಟಿ ನೀಡಿದ ಸಂದರ್ಭಗಳಲ್ಲಿ ಜುಲೈ ಅಂತ್ಯದೊಳಗೆ ಭರವಸೆ ನೀಡಿದರೂ ಮುಂದಿನ ತಿಂಗಳಲ್ಲಿ ಮಳೆ ಪ್ರಾರಂಭವಾಗುವ ಸಂಭವವಿರು ವದರಿಂದ ಕಾಮಗಾರಿ ಯನ್ನು ಶೀಘ್ರವಾಗಿ ಪೂರ್ಣಗೊಳಿಸಿ ಆದಿವಾಸಿಗಳಿಗೆ ವಾಸಿಸಲು ನೀಡ ಬೇಕೆಂಬದು ಆದಿವಾಸಿಗಳ ಒತ್ತಾಯವಾಗಿದೆ.
- ಕೆ.ಕೆ. ನಾಗರಾಜ ಶೆಟ್ಟಿ.