ಮಡಿಕೇರಿ, ಏ. 10: ಕೊಡಗು ಜಿಲ್ಲಾಡಳಿತ, ಸ್ವೀಪ್ ಸಮಿತಿ, ದಿಶಾ ಫೌಂಡೇಷನ್, ಮೈಸೂರು, ರಾಷ್ಟ್ರೀಯ ಸೇವಾ ಯೋಜನಾ ಘಟಕ, ಸರಕಾರಿ ಪ್ರಥಮ ದರ್ಜೆ ಕಾಲೇಜು, ಮಡಿಕೇರಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಡಿಕೇರಿಯ ಪ್ರ.ದ. ಮಹಿಳಾ ಕಾಲೇಜಿನಲ್ಲಿ ಮತದಾರ ಜಾಗೃತಿ ಅಭಿಯಾನವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನ ಕಾಲೇಜಿನ ಪ್ರಾಂಶುಪಾಲರಾದ ಪ್ರೊ ಚಿತ್ರಾರವರು ವಹಿಸಿಕೊಂಡು ಪ್ರತಿಯೊಬ್ಬರು ತಮ್ಮ ಅಮೂಲ್ಯವಾದ ಮತದಾನವನ್ನು ಮಾಡುವದರ ಮೂಲಕ ತಮ್ಮ ಹಕ್ಕನ್ನು ಚಲಾಯಿಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಸುಂಟಿಕೊಪ್ಪ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾದ ಸೋಮಚಂದ್ರ ಪ್ರಜಾಪ್ರಭುತ್ವದಲ್ಲಿ ಯುವಕರು ಒಳ್ಳೆಯ ಆದರ್ಶ ನಾಯಕನನ್ನು ಚುನಾವಣೆಯ ಮೂಲಕ ಚುನಾಯಿಸಬೇಕು ಎಂದು ಕರೆ ನೀಡಿದರು. ಕಾಲೇಜಿನ ಪ್ರಾಧ್ಯಾಪಕರಾದ ಡಾ ದಯಾನಂದ ಕೆ.ಸಿಯವರು ವಿದ್ಯಾರ್ಥಿಗಳಿಗೆ “ನನಗೆ ಮತದಾನವು ಸಂವಿಧಾನ ದತ್ತವಾಗಿ ಬಂದಿರುವ ಪವಿತ್ರ ಹಕ್ಕು ಹಾಗೂ ಕರ್ತವ್ಯ ನಾನು ಈ ಪವಿತ್ರವಾದ ಮತವನ್ನು ಯಾವದೇ ಆಸೆ ಆಮಿಷಕ್ಕೆ ಒಳಗಾಗದೆ, ಜವಾಬ್ದಾರಿಯುತವಾಗಿ ಅರ್ಹ ಅಭ್ಯರ್ಥಿಗಳಿಗೆ ಮತ ಚಲಾಯಿಸುತ್ತೇನೆ ಎಂಬ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಕಾರ್ಯಕ್ರಮದ ಬಗ್ಗೆ ಮಡಿಕೇರಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಬಿ.ಎಂ.ಬೆಳ್ಯಪ್ಪ ಪ್ರ್ರಾಸ್ತಾವಿಕ ನುಡಿಗಳನ್ನಾಡಿದರು.
ಕೊಡಗು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಯದೇವಯ್ಯ, ಜಿಲ್ಲಾ ಪಂಚಾಯಿತಿಯ ಮುಖ್ಯ ಯೋಜನಾ ಅಧಿಕಾರಿ ಶ್ರೀಕಂಠ ಮೂರ್ತಿ, ದಿಶಾ ಫೌಂಡೇಷನ್ ಪದಾಧಿಕಾರಿ ಹೇಮಂತ್ .ಬಿ.ಎನ್ ಮೊದಲಾದವರು ಉಪಸ್ಥಿತರಿದ್ದರು.