ಚೆಟ್ಟಳ್ಳಿ, ಏ. 10: ವೀರಾಜಪೇಟೆ ತಾಲೂಕಿನ ತೋರ ಗ್ರಾಮದಲ್ಲಿ ತೀರಾ ಬಡತನದ, ವಯಸ್ಸಾದ ಮೀನಾಕ್ಷಿ, ಬುದ್ದಿಮಾಂಧ್ಯ ಹಾಗೂ ಅಂಗವಿಕಲ ಮಗವಿನೋಜ್ ನೊಂದಿಗೆ ಬದುಕು ಸಾಗಿಸುತ್ತಿದ್ದು, ಆಶ್ರಯಿಸಲು ಯಾರಿರದೆ ಮನೆಯಿಂದ ತನ್ನ ಮಗನನ್ನು ಹೊರಹೋಗದಂತೆ ಮನೆಯಲ್ಲೆ ಬೀಗ ಹಾಕಿ ಅಕ್ಕಪಕ್ಕದಲ್ಲಿ ಕೂಲಿ ಮಾಡಿ ಬಂದ ಹಣ ಹಾಗೂ ಸರಕಾರದ ಮಾಸಿಕ ವೇತನ ರೂ.500 ನಂಬಿ ತೀರಾಕಷ್ಟಕರ ಜೀವನ ಸಾಗಿಸುತ್ತಿದ್ದಾರೆ. ವೀರಾಜಪೇಟೆಯ ಜೀವನ ಜ್ಯೋತಿ ಟ್ರಸ್ಟ್ನವರು ಮೀನಾಕ್ಷಿಯವರ ಮನೆಗೆ ಭೇಟಿ ನೀಡಿ ಮಡಿಕೇರಿಯ ತನಲ್ ಸಂಸ್ಥೆಯ ಸಹಾಯಹಸ್ತದೊಂದಿಗೆ ಮೀನಾಕ್ಷಿಯವರ ಒಂದು ತಿಂಗಳಿಗಾಗುವಷ್ಟು ತರಕಾರಿ, ಆಹಾರ ದಾನ್ಯವನ್ನು ನೀಡಿದ್ದಾರೆ. ಪ್ರತೀ ವಾರದ ತರಕಾರಿ ನೀಡುವ ಬಗ್ಗೆ ಅಧ್ಯಕ್ಷ ಎಂ.ಎನ್. ಅಜಯ್ ರಾವ್ ಭರವಸೆ ನೀಡಿದ್ದಾರೆ.
ಸರಕಾರದ ಯೋಜನೆಗಳು ಇಂತಹ ಸಂಕಷ್ಟದಲ್ಲಿರುವವರಿಗೆ ದೊರಕುತ್ತಿಲ್ಲ; ಸರಕಾರ ಜನಪ್ರತಿನಿಧಿಗಳು ಇತ್ತ ಗಮನಹರಿಸಬೇಕೆಂದು ಅಧ್ಯಕ್ಷ ಎಂ.ಎನ್. ಅಜಯ್ ರಾವ್ ಹೇಳಿದರು. ಸಾರ್ವಜನಿಕರು ಕೂಡ ಕೈಜೋಡಿಸ ಬೇಕೆಂದು ಕಾರ್ಯದರ್ಶಿ ಬಿ.ಎನ್.ಸೋಮಪ್ಪ, ಯುವರಾಜ್ ಕೃಷ್ಣ ಕೋರಿದ್ದಾರೆ. ಉಪಾಧ್ಯಕ್ಷ ಬಿ.ಎನ್ ಬಿದ್ದಪ್ಪ, ಜೆ.ಎನ್.ಸಂಪತ್ ಕುಮಾರ್, ಸಂಘದ ಸದಸ್ಯರುಗಳಾದ ಶರತ್ಬಾಲಚಂದ್ರ, ವೆಂಕಟೇಶ್, ಕೋಮಲ.ವಿ.ಕೆ, ಎಂ.ಟಿ ದೇವಯ್ಯ ಈ ಸಂದರ್ಭ ಹಾಜರಿದ್ದರು. -ಕರುಣ್ ಕಾಳಯ್ಯ