*ಗೋಣಿಕೊಪ್ಪಲು, ಏ. 10: ಮತದಾನ ಎಂಬದು ಸಂವಿಧಾನ ನೀಡಿರುವ ಅಮೂಲ್ಯವಾದ ಹಕ್ಕು. ಇದನ್ನು ಬಳಸಿಕೊಂಡು ಪ್ರಜಾಪ್ರಭುತ್ವ ವನ್ನು ಬಲಪಡಿಸಲು ಮುಂದಾಗಬೇಕು ಎಂದು ವಿಜಯಲಕ್ಷ್ಮಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಕೆ.ಜಿ. ಅಶ್ವಿನಿ ಕುಮಾರ್ ಹೇಳಿದರು.

ಕಾಲೇಜಿನ ವತಿಯಿಂದ ನಡೆದ ಮತದಾನ ಜಾಗೃತಿ ಜಾಥಾದಲ್ಲಿ ಮಾತನಾಡಿದ ಅವರು, ಮತದಾನದಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳಬೇಕು. ತಮಗೆ ಸೂಕ್ತವಾದ ಅಭ್ಯರ್ಥಿಯನ್ನು ಆಯ್ಕೆಮಾಡುವ ಮೂಲಕ ಪ್ರಜಾಪ್ರುಭತ್ವದ ಉಳಿವಿಗೆ ನೆರವಾಗಬೇಕು ಎಂದರು.

ಉಪನ್ಯಾಸಕ ಡಾ. ಜೆ. ಸೋಮಣ್ಣ ಮಾತನಾಡಿ, ಪ್ರಜಾಪ್ರಭುತ್ವ ಅತ್ಯುತ್ತಮವಾದ ವ್ಯವಸ್ಥೆ. ಇದು ಉಳಿಯಬೇಕಾದರೆ ಪ್ರತಿಯೊಬ್ಬರು ಮತದಾನದ ಕಾರ್ಯದಲ್ಲಿ ಪಾಲ್ಗೊಳ್ಳಬೇಕು. ಯಾವದೇ ಆಮಿಷಗಳಿಗೆ ಬಲಿಯಾಗಬಾರದು ಎಂದರು. ಪ್ರಾಂಶುಪಾಲೆ ಕೆ.ಪಿ. ಪೊನ್ನಮ್ಮ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತಲಿನ ಮತದಾರರಿಗೆ ಮತದಾನದ ಬಗ್ಗೆ ಅರಿವು ಮೂಡಿಸಿ ಮತದಾನದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಬೇಕು ಎಂದರು. ಬಾಳೆಲೆ ಸೆಂಟರ್ ಎಜುಕೇಷನ್ ಸೊಸೈಟಿ ಕಾರ್ಯದರ್ಶಿ ಸಿ.ಎಸ್. ಕೃಷ್ಣ ಗಣಪತಿ, ಉಪಾಧ್ಯಕ್ಷ ಕೆ.ಬಿ. ರಾಜ, ನಿವೃತ್ತ ಶಿಕ್ಷಕರಾದ ಎಂ.ಎ. ಪೊನ್ನಪ್ಪ, ಮಹೇಶ್ ಪಾಲ್ಗೊಂಡಿದ್ದರು. ಗ್ರಾಮದ ಮುಖ್ಯ ರಸ್ತೆಯಲ್ಲಿ ಮತದಾನದ ಬಗ್ಗೆ ಘೋಷಣೆ ಕೂಗುತ್ತಾ ಜಾಥಾ ನಡೆಸಲಾಯಿತು.