ವೀರಾಜಪೇಟೆ, ಏ. 11: ನ್ಯಾಯಾಲಯದ ತೀರ್ಪಿಗೆ ತಲೆ ಬಾಗದೆ, ಹತ್ತು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಇಲ್ಲಿನ ಗಾಂಧಿನಗರದ ಪಿ.ಕೆ.ಮುನೀರ್ ಎಂಬಾತನನ್ನು ಇಂದು ಕೇರಳದ ಮಟ್ಟನೂರಿನಲ್ಲಿ ಇಲ್ಲಿನ ನಗರ ಪೊಲೀಸರು ಬಂಧಿಸಿ ಎರಡನೇ ಅಪರ ಮತ್ತು ಸೆಷನ್ಸ್ ನ್ಯಾಯಾಲಯದ ಮುಂದೆ ಹಾಜರು ಪಡಿಸಿದಾಗ ಆತ ಹಿಂದಿನ ತೀರ್ಪಿನಂತೆ ಕಾರಾಗೃಹ ಶಿಕ್ಷೆ ಅನುಭವಿಸುವಂತೆ ನ್ಯಾಯಾಧೀಶರಾದ ಮೋಹನ್ ಪ್ರಭು ಅವರು ಆದೇಶಿಸಿದ್ದಾರೆ.
ಕಳೆದ 2000ರ ಅವಧಿಯಲ್ಲಿ ಮುನೀರ್ ಎಂಬಾತ ಖೋಟಾ ನೋಟು ಚಲಾವಣೆ ಸಂಬಂಧದಲ್ಲಿ ನಗರ ಪೊಲೀಸರು ರೂ. 50 ಮೌಲ್ಯದ ಸುಮಾರು 13 ಖೋಟಾ ನೋಟುಗಳ ಸಮೇತ ಬಂಧಿಸಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ತಾ:26-2-2008ರಲ್ಲಿ ಆಗಿನ ಫಾಸ್ಟ್ ಟ್ರ್ಯಾಕ್ ನ್ಯಾಯಾಧೀಶರು ಮುನೀರ್‍ಗೆ ಐದು ವರ್ಷ ಸಜೆ ವಿಧಿಸಿ ರೂ. 1000 ದಂಡ ವಿಧಿಸಿ ತೀರ್ಪಿನಲ್ಲಿ ಮೇಲ್ಮನವಿಗೆ ಅವಕಾಶ ನೀಡಿದ್ದರು.
ಆರೋಪಿ ಮುನೀರ್ ತೀರ್ಪಿನ ವಿರುದ್ಧ ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿ ತಿರಸ್ಕøತಗೊಂಡಾಗ ಸುಪ್ರೀಂ ಕೋರ್ಟ್‍ಗೂ ಅರ್ಜಿ ಸಲ್ಲಿಸಿದಾಗ ತೀರ್ಪು ನೀಡಿದ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸುಪ್ರೀಂ ಕೋರ್ಟ್‍ನ ನ್ಯಾಯಾಧೀಶರು ಆದೇಶಿಸಿದ್ದರು. ಈ ಆದೇಶದ ನಂತರ ಮುನೀರ್ ತಲೆ ಮರೆಸಿಕೊಂಡಿದ್ದು ಅನೇಕ ವರ್ಷಗಳಿಂದ ಕೇರಳ ರಾಜ್ಯದ ಮಟ್ಟನೂರು ಎಂಬಲ್ಲಿ ಕಾರು ಬ್ರೋಕರ್ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡಿದ್ದ. ಸುಳಿವರಿತ ಪೊಲೀಸರು ಕೇರಳ ಪೊಲೀಸರ ಸಹಕಾರದಿಂದ ಇಂದು ಮುನೀರ್‍ನನ್ನು ವಶ ಪಡಿಸಿಕೊಂಡರು. ವೀರಾಜಪೇಟೆ ನಗರ ಪೊಲೀಸ್ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಸಂತೋಷ್ ಕಶ್ಯಪ್, ಸಿಬ್ಬಂದಿಗಳಾದ ಸುನಿಲ್, ಮುನೀರ್, ಸತೀಶ್, ರಜನ್ ಕುಮಾರ್ ಆರೋಪಿ ಬಂಧನಕ್ಕೆ ಕಾರ್ಯಾಚರಣೆ ನಡೆಸಿದರು.
ಮುನೀರ್‍ನ ಮೇಲೆ 2007ರಲ್ಲಿ ಕೋಮು ಗಲಭೆಯ ಎರಡು ಪ್ರಕರಣಗಳು ಹಾಗೂ 2010ರಲ್ಲಿ ಮಹಿಳೆಯ ಮಾನಭಂಗಕ್ಕೆ ಸಂಬಂಧಿಸಿದಂತೆ ಒಂದು ಪ್ರಕರಣ ವಿಚಾರಣೆಗಾಗಿ ನ್ಯಾಯಾಲಯದ ಮುಂದಿದೆ.