ಮಡಿಕೇರಿ, ಏ. 11: ಬರುವ ಮೇ 12 ರಂದು ಕರ್ನಾಟಕ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಶಾಂತಿ ಪಾಲನೆಯೊಂದಿಗೆ ಕಾನೂನು ಸುವ್ಯವಸ್ಥೆ ಕಾಪಾಡುವ ದಿಸೆಯಲ್ಲಿ ಜಿಲ್ಲಾಡಳಿತ ವ್ಯಾಪಕ ಕಣ್ಗಾವಲು ಇರಿಸುವದರೊಂದಿಗೆ ಈಗಿನಿಂದಲೇ ಮುಂಜಾಗ್ರತೆ ವಹಿಸತೊಡಗಿದೆ.ಅಂತರ್ರಾಜ್ಯ ಗಡಿ ಜಿಲ್ಲೆಗಳಾದ ಕಾಸರಗೋಡು, ಕಣ್ಣನೂರು ಹಾಗೂ ವಯನಾಡು ಜಿಲ್ಲೆಗಳ ಆಯಾ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಇಂದು ಕೊಡಗು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ಪೊಲೀಸ್ ಅಧೀಕ್ಷಕ ರಾಜೇಂದ್ರ ಪ್ರಸಾದ್ ಅವರುಗಳು ಜಂಟಿ ಸಭೆ ನಡೆಸುವ ಮುಖಾಂತರ ಗಡಿಗಳಲ್ಲಿ ಶಾಂತಿ ಪಾಲನೆ, ಸಮಾಜಘಾತುಕ ಚಟುವಟಿಕೆಗಳನ್ನು ಹತ್ತಿಕ್ಕುವಲ್ಲಿ ಪರಸ್ಪರ ಸಮನ್ವಯತೆ ಕಾಪಾಡುವ ದಿಸೆಯಲ್ಲಿ ಮಾತುಕತೆ ನಡೆಸಿದರು.ಪ್ರಸಕ್ತ ಚುನಾವಣೆಯೂ ಸೇರಿದಂತೆ ಇತರ ಸಂದರ್ಭಗಳಲ್ಲಿ ಅಪರಾಧಗಳನ್ನು ತಡೆಗಟ್ಟುವ ದಿಕ್ಕಿನಲ್ಲಿ ಪರಸ್ಪರ ಸಹಕಾರದೊಂದಿಗೆ, ಗಡಿ ಪ್ರದೇಶಗಳ ಅಪರಾಧ ತಡೆಗೆ ಎಲ್ಲ ರೀತಿ ಸಹಕಾರದ ಬಗ್ಗೆ ಇಂದಿನ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಲಾಯಿತು ಎಂದು ಗೊತ್ತಾಗಿದೆ.
ಸಭೆಯು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು.
ಸಭೆಯಲ್ಲಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್, ವೈನಾಡು ಜಿಲ್ಲಾಧಿಕಾರಿ ಎಸ್. ಸುಹಾಸ್, ಕಾಸರಗೋಡು ಜಿಲ್ಲಾಧಿಕಾರಿ ಜೀವನ್ ಬಾಬು, ಕಣ್ಣೂರು ಜಿಲ್ಲೆಯ ಸಬ್ ಕಲೆಕ್ಟರ್ ಚಂದ್ರಶೇಖರ್ ಮತ್ತು ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿಮೋನ್, ಜಿ.ಪಂ. ಸಿಇಓ ಪ್ರಶಾಂತ್ ಕುಮಾರ್ ಮಿಶ್ರ, ಹೆಚ್ಚುವರಿ ಜಿಲ್ಲಾಧಿಕಾರಿ ಡಿ.ಎಂ. ಸತೀಶ್ ಕುಮಾರ್ ಇತರರು ಇದ್ದರು.
ಆರಂಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು ಕೊಡಗು ಜಿಲ್ಲೆಗೆ ಹೊಂದಿಕೊಂಡಿರುವ
(ಮೊದಲ ಪುಟದಿಂದ) ನೆರೆ ರಾಜ್ಯದ ಜಿಲ್ಲೆಗಳಾದ ಕಣ್ಣೂರು, ವೈನಾಡು ಮತ್ತು ಕಾಸರಗೋಡು ಜಿಲ್ಲೆಯ ಜನರು ಒಂದಲ್ಲ ಒಂದು ರೀತಿಯಲ್ಲಿ ವ್ಯಾಪಾರ, ವಹಿವಾಟು ಮತ್ತು ಆರ್ಥಿಕ ಚಟುವಟಿಕೆಗೆ ಜಿಲ್ಲೆಯನ್ನು ಅವಲಂಬಿಸಿದ್ದಾರೆ. ಆದ್ದರಿಂದ ಯಾವದೇ ರೀತಿಯಲ್ಲಿ ಚುನಾವಣೆಗೆ ಭಂಗ ಉಂಟಾಗದಂತೆ ಶಾಂತಿಯುವಾಗಿ ಮತ್ತು ನ್ಯಾಯ ಸಮ್ಮತವಾಗಿ ಚುನಾವಣೆ ನಡೆಸುವ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೋರಿದರು.
ಜಿಲ್ಲೆಯ ಕುಟ್ಟ, ಮಾಕುಟ್ಟ ಹಾಗೂ ಕರಿಕೆಗಳಲ್ಲಿ ಅಂತರ ರಾಜ್ಯ ಚೆಕ್ ಪೋಸ್ಟ್‍ಗಳನ್ನು ಸ್ಥಾಪಿಸಲಾಗಿದ್ದು, ಯಾವದೇ ರೀತಿಯ ಅಕ್ರಮ ಚಟುವಟಿಗಳಿಗೆ ಅವಕಾಶವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಆ ನಿಟ್ಟಿನಲ್ಲಿ ಶಾಂತಿಯುತವಾಗಿ ಚುನಾವಣೆ ನಡೆಸಲು ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ನೆರೆ ರಾಜ್ಯದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಲ್ಲಿ ಪಿ.ಐ. ಶ್ರೀವಿದ್ಯಾ ಮನವಿ ಮಾಡಿದರು.
ಪ್ರಯಾಣಿಕರು ಐವತ್ತು ಸಾವಿರ ರೂ. ವರೆಗೆ ನಗದು ಹಣ ತೆಗೆದುಕೊಂಡು ಹೋಗಬಹುದಾಗಿದೆ. ಆದರೆ ಐವತ್ತು ಸಾವಿರ ರೂ.ಗಿಂತ ನಗದು ತೆಗೆದುಕೊಂಡು ಹೋಗುವದು ಕಂಡುಬಂದಲ್ಲಿ ದಾಖಲೆಗಳನ್ನು ಪರಿಶೀಲಿಸಬೇಕಿದೆ. ಜೊತೆಗೆ ಸಾಮಗ್ರಿಗಳನ್ನು ಕೊಂಡೊಯ್ಯುವದು ಕಂಡು ಬಂದರೆ ತಪಾಸಣೆ ಮಾಡಬೇಕಿದೆ. ಈ ಸಂಬಂಧ ಆಯಾಯ ಜಿಲ್ಲೆಗಳಲ್ಲಿ ಪತ್ರಿಕಾ ಪ್ರಕಟಣೆ ನೀಡುವಂತೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಸಲಹೆ ಮಾಡಿದರು.
ಸದ್ಯದಲ್ಲಿಯೇ ವೈದ್ಯಕೀಯ, ಇಂಜಿನಿಯರಿಂಗ್ ಮತ್ತಿತರ ವೃತ್ತಿಪರ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳು ಮತ್ತು ಕುಟುಂಬದವರು ರಾಜ್ಯಕ್ಕೆ ಆಗಮಿಸಲಿದ್ದಾರೆ. ಅಂತಹ ಸಮಯದಲ್ಲಿ ನಗದು ತೆಗೆದುಕೊಂಡು ಬರುವವರು ಕಂಡುಬಂದರೆ ದಾಖಲೆಗಳನ್ನು ಪರಿಶೀಲಿಸಬೇಕಿದೆ. ಆದ್ದರಿಂದ ಸಾಧ್ಯವಾದಷ್ಟು ಹಣಕಾಸಿನ ವ್ಯವಹಾರವನ್ನು ಬ್ಯಾಂಕಿನ ಮೂಲಕ ವ್ಯವಹರಿಸುವದು ಸೂಕ್ತ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಮಾತನಾಡಿ ಕುಟ್ಟ, ಮಾಕುಟ್ಟ, ಕರಿಕೆ ಭಾಗಗಳನ್ನು ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿದೆ. ಈ ಪ್ರದೇಶಗಳಲ್ಲಿ ಚುನಾವಣೆಯಲ್ಲಿ ಯಾವದೇ ರೀತಿ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ, ಶಾಂತಿಯುತವಾಗಿ ಚುನಾವಣೆ ನಡೆಸಲು ಸಹಕರಿಸುವಂತೆ ಅವರು ಕೋರಿದರು. ಗಡಿಭಾಗಗಳಲ್ಲಿ ಅಂತರ ರಾಜ್ಯ ಚೆಕ್‍ಪೋಸ್ಟ್‍ಗಳÀನ್ನು ತೆರೆಯಲಾಗಿದೆ. ಈ ಪ್ರದೇಶದಲ್ಲಿ ಅಗತ್ಯ ನಾಮಫಲಕ ಅಳವಡಿಸಲಾಗಿದೆ ಎಂದು ‘ಪವರ್ ಪಾಯಿಂಟ್ ಪ್ರೆಸೆಂಟೇಷನ್’ ಮೂಲಕ ಮಾಹಿತಿ ನೀಡಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಕೇರಳ ರಾಜ್ಯದ ಅಧಿಕಾರಿಗಳು, ವಿಧಾನಸಭಾ ಹಿನ್ನೆಲೆ ಕೇರಳ ರಾಜ್ಯದ ಗಡಿಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗುವದು. ಜೊತೆಗೆ ಶಾಂತಿಯುತ ಚುನಾವಣೆ ಎಲ್ಲಾ ರೀತಿಯ ಸಹಕಾರ ನೀಡಲಾಗುವದು ಎಂದು ಭರವಸೆಯಿತ್ತರು. ಡಿವೈಎಸ್.ಪಿ.ಗಳಾದ ಸುಂದರ ರಾಜ್, ನಾಗಪ್ಪ, ಚುನಾವಣಾ ಶಿರಸ್ತೇದಾರರಾದ ಪ್ರಕಾಶ್, ಅರುಣ್ ಸಾಗರ್, ಅನಿಲ್ ಕುಮಾರ್ ಇತರರು ಇದ್ದರು.
ಡಿಸಿ ಪರಿಶೀಲನೆ: ಕೊಡಗು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಚುನಾವಣಾ ಸಿಬ್ಬಂದಿಗಳೊಂದಿಗೆ ಗಡಿ ತಪಾಸಣಾ ಕೇಂದ್ರಗಳಾದ, ನೆರೆ ರಾಜ್ಯಕ್ಕೆ ಹೊಂದಿಕೊಂಡಿರುವ ಕರಿಕೆ, ಮುಂಡ್ರೋಟು, ಮಾಕುಟ್ಟ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸುವ ಮೂಲಕ, ಈಗಾಗಲೇ ಸಂಬಂಧಿಸಿದ ಕೆಳ ಹಂತದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಗಡಿಗಳಲ್ಲಿ ಯಾವದೇ ಕಾನೂನು ಬಾಹಿರ ಚಟುವಟಿಕೆಗಳಿಗೆ ಎಡೆ ಮಾಡಿಕೊಡದಂತೆ ನಿಗಾ ಇರಿಸಲು ಸೂಚಿಸಿರುವ ಅವರು, ಗಡಿ ಭಾಗದ ಮತಗಟ್ಟೆ ಕೇಂದ್ರಗಳ ಸುರಕ್ಷತೆ ಕುರಿತಾಗಿಯೂ ಖುದ್ದು ವೀಕ್ಷಿಸಿದ್ದಾರೆ.
ತುಕಡಿ ಆಗಮನ: ಇನ್ನು ಚುನಾವಣಾ ಸುರಕ್ಷತಾ ಕ್ರಮಗಳಿಗಾಗಿ ಕೊಡಗು ಪೊಲೀಸರೊಂದಿಗೆ ಕೈಜೋಡಿಸಲು ಈಗಾಗಲೇ ಕೇಂದ್ರ ಮೀಸಲು ಸಶಶ್ತ್ರ ಪಡೆಯ ಎರಡು ತುಕಡಿಗಳು ಜಿಲ್ಲೆಗೆ ಆಗಮಿಸಿವೆ. ಒಡಿಸ್ಸಾದಿಂದ ಆಗಮಿಸಿರುವ ಈ ತುಕಡಿ ಒಂದನ್ನು ಗಾಳಿಬೀಡು ನವೋದಯ ಶಾಲಾ ಆವರಣದಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿದೆ. ಮತ್ತೊಂದು ತುಕಡಿಯು ಕೊಡಗು ಪೊಲೀಸ್ ನಕ್ಸಲ್ ನಿಗ್ರಹದಳದೊಂದಿಗೆ ಆರ್ಜಿ ಗ್ರಾಮದ ಮೊರಾರ್ಜಿ ವಸತಿ ಶಾಲೆ ವ್ಯಾಪ್ತಿಯಲ್ಲಿ ನಿಯೋಜಿಸಿದ್ದು, ಈ ಎರಡು ತುಕಡಿಗಳು ಯಾವದೇ ತುರ್ತು ಕರೆಗಳು ಬಂದಾಗ, ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರದ ಯಾವದೇ ಕೇಂದ್ರ ತಲಪುವಂತೆ ವ್ಯವಸ್ಥೆ ರೂಪಿಸಲಾಗಿದೆ.
ಪಥ ಸಂಚಲನ: ಕೊಡಗಿನ ಪೊಲೀಸ್ ಚುನಾವಣಾ ನೋಡಲ್ ಅಧಿಕಾರಿ ಕೆ.ಎಸ್. ಸುಂದರರಾಜ್ ಹಾಗೂ ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರ ಪ್ರಸಾದ್ ಮಾರ್ಗದರ್ಶನದಲ್ಲಿ ಈಗಾಗಲೇ ಕೇಂದ್ರ ಮೀಸಲು ಸಶಸ್ತ್ರ ಪಡೆ ಸಿಬ್ಬಂದಿ ಅಲ್ಲಲ್ಲಿ ಪಥ ಸಂಚಲನ ನಡೆಸುವ ಮೂಲಕ ಜನತೆಯಲ್ಲಿ ಆತ್ಮಸ್ಥೈರ್ಯ ತುಂಬುವದರೊಂದಿಗೆ, ಸಮಾಜಘಾತುಕರಿಗೆ ಎಚ್ಚರಿಕೆಯ ಸಂದೇಶ ರವಾನಿಸಲಾಗುತ್ತಿದೆ.
ಈ ದಿಸೆಯಲ್ಲಿ ಈಗಾಗಲೇ ಸಿದ್ದಾಪುರ, ನೆಲ್ಲಿಹುದಿಕೇರಿ, ಕೊಂಡಂಗೇರಿ, ಪಾಲಿಬೆಟ್ಟ, ಚೆನ್ನನಕೋಟೆ, ಚೆನ್ನಂಗಿ ಮುಂತಾದೆಡೆಗಳಲ್ಲಿ ಪಥ ಸಂಚಲನ ನಡೆಸಲಾಗಿದೆ. ಅಲ್ಲದೆ ವಾಲ್ನೂರು ತ್ಯಾಗತ್ತೂರು, ಚೆಟ್ಟಳ್ಳಿ, ಪೊನ್ನತ್‍ಮೊಟ್ಟೆ ವ್ಯಾಪ್ತಿಯಲ್ಲಿ ಪಥ ಸಂಚಲನದೊಂದಿಗೆ, ಎಲ್ಲಿಯೂ ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ನೋಡೆಲ್ ಅಧಿಕಾರಿ ಸುಂದರರಾಜ್ ಖಚಿತ ಪಡಿಸಿದ್ದಾರೆ.
ಎಲ್ಲೆಡೆ ತೀವ್ರ ನಿಗಾ: ಈ ಹಿಂದೆ ಜಿಲ್ಲೆಯ ಕೆಲವೆಡೆ ಗ್ರಾಮೀಣ ಪ್ರದೇಶಗಳಲ್ಲಿ ನಕ್ಸಲರು ಕಾಣಿಸಿಕೊಂಡಿದ್ದ ಪ್ರದೇಶಗಳಲ್ಲಿನ ಮತಗಟ್ಟೆಗಳು ಸೇರಿದಂತೆ ಜಿಲ್ಲೆಯ ಗಡಿಗಳಲ್ಲಿ ಮತ್ತು ಅತಿ ಸೂಕ್ಷ್ಮ ಸ್ಥಳಗಳಲ್ಲಿ ಈಗಿನಿಂದಲೇ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಮಾತ್ರವಲ್ಲದೆ ಜನತೆಯನ್ನು ಚುನಾವಣಾ ಹಿನ್ನೆಲೆ ಯಾವದೇ ರೀತಿ ಪ್ರಚೋದಿಸುವವರ ವಿರುದ್ಧ ಕೂಡ ನಿಗಾವಿರಿಸಿದ್ದು, ಅಗತ್ಯ ಬಿದ್ದರೆ ಕಾನೂನು ಕ್ರಮ ಜರುಗಿಸಲಾಗುವದು ಎಂದು ಖಚಿತಪಡಿಸಿದ ಅವರು, ಯಾವದೇ ಊಹಾಪೋಹ ಅಥವಾ ಸಂಶಯಗಳಿಗೆ ಜನತೆ ಕಿವಿಗೊಡದಂತೆ ಸಲಹೆ ನೀಡಿದ್ದಾರೆ.