ಪೊನ್ನಂಪೇಟೆ, ಏ. 11 : ಅತ್ಯುತ್ತಮ ಪ್ರದರ್ಶನ ನೀಡಿದ ಪೊಯಕೆರ ರೈಡರ್ಸ್ ತಂಡವು ಕ್ರಿಕೆಟ್ ಮತ್ತು ವಾಲಿಬಾಲ್ ಪಂದ್ಯಾವಳಿಯಲ್ಲಿ ಬಲಿಷ್ಠ ಎರಟೇಂಡ ಟೈಗರ್ಸ್ ತಂಡವನ್ನು ಮಣಿಸಿ ಪ್ರಸಕ್ತ ಸಾಲಿನ ಎಡಪಾಲ ಕುಟುಂಬ ಕಪ್-2018 ಅನ್ನು ತನ್ನದಾಗಿಸಿಕೊಂಡು ಚಾಂಪಿಯನ್ ಪಟ್ಟ ಗಿಟ್ಟಿಸಿಕೊಂಡಿತು. ಭರವಸೆಯೊಂದಿಗೆ ಫೈನಲ್ಸ್ ಪ್ರವೇಶಿಸಿದ ಆತೀಥೆಯ ಎರಟೇಂಡ ಟೈಗರ್ಸ್ ತಂಡ ಪಂದ್ಯ ಗೆಲ್ಲಲು ಗರಿಷ್ಠ ಪ್ರಯತ್ನ ನಡೆಸಿದರೂ ಸಫಲವಾಗದೆ ಕ್ರಿಕೆಟ್ ಮತ್ತು ವಾಲಿಬಾಲ್ ಎರಡೂ ಪಂದ್ಯಾವಳಿಗಳಲ್ಲಿ ಎದುರಾಳಿ ತಂಡದ ಮುಂದೆ ಶರಣಾಗಿ ರನ್ನಸ್ರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಳ್ಳುವದು ಅನಿವಾರ್ಯವಾಯಿತು.
ಎಡಪಾಲ ಕುಟುಂಬ ಕಪ್ ಅಯೋಜನಾ ಸಮಿತಿ ವತಿಯಿಂದ ಅಲ್ಲಿನ ಕುರಿಕಡೆರ ಕುಟುಂಬಸ್ಥರ ಗದ್ದೆ ಬಯಲಿನಲ್ಲಿ ಎರಟೇಂಡ ಕುಟುಂಬಸ್ಥರ ಆತಿಥ್ಯದಲ್ಲಿ 2 ದಿನಗಳ ಕಾಲ ನಡೆದ ಎಡಪಾಲ ಗ್ರಾಮ ವ್ಯಾಪ್ತಿಯ ಕ್ರಿಕೆಟ್ ಮತ್ತು ವಾಲಿಬಾಲ್ ಸೌಹಾರ್ದ ಪಂದ್ಯಾವಳಿ ಎಡಪಾಲ ಕುಟುಂಬ ಕಪ್-2018ರ ಫೈನಲ್ಸ್ ಜರುಗಿತು. ಕ್ರಿಕೆಟ್ ಪಂದ್ಯಾವಳಿಯಲ್ಲಿ ಕುರಿಕಡೆರ ವಾರಿಯರ್ಸ್ ತಂಡ 3ನೇ ಸ್ಥಾನ ಪಡೆದುಕೊಂಡರೆ ವಾಲಿಬಾಲ್ (ಮೊದಲ ಪುಟದಿಂದ) ಪಂದ್ಯಾವಳಿಯಲ್ಲಿ ಕುಪ್ಪೋಡಂಡ ಪೈಟರ್ಸ್ ತಂಡ ತೃತೀಯ ಸ್ಥಾನ ಗಳಿಸಿತು.ಎಡಪಾಲ ಕುಟುಂಬ ಕಪ್-2018ರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪೈನಲ್ಸ್‍ಗೆ ಪ್ರವೇಶ ಪಡೆದ ಬಲಿಷ್ಠ ತಂಡಗಳಾದ ಪೊಯಕೆರ ರೈಡರ್ಸ್ ಮತ್ತು ಎರಟೇಂಡ ಟೈಗರ್ಸ್ ಕುಟುಂಬ ತಂಡ ಪಂದ್ಯ ಗೆಲ್ಲುವ ವಿಶ್ವಾಸದೊಂದಿಗೆ ಆಟ ಆರಂಭಿಸಿತು. ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪೊಯಕೆರ ರೈಡರ್ಸ್ ತಂಡ ನಿಗದಿತ 5 ಓವರ್‍ನಲ್ಲಿ 43 ರನ್ ಗಳಿಸಿ ಎದುರಾಳಿ ತಂಡಕ್ಕೆ ಮಿತಿ ನಿಗದಿಪಡಿಸಿತು. ನಂತರ ಬ್ಯಾಟಿಂಗ್ ಆರಂಭಿಸಿದ ಎರಟೇಂಡ ಟೈಗರ್ಸ್ ತಂಡ ನಿಗದಿತ ಓವರ್‍ನಲ್ಲಿ 29 ರನ್‍ಗಳನ್ನಷ್ಟೆ ಗಳಿಸಲು ಶಕ್ತವಾಯಿತು. ಇದರಿಂದಾಗಿ 14 ರನ್‍ಗಳಿಂದ ಪೊಯಕೆರ ರೈಡರ್ಸ್ ತಂಡ ತನ್ನ ವಿಜಯವನ್ನು ದೃಢಪಡಿಸಿಕೊಂಡಿತು. ಎರಟೇಂಡ ಟೈಗರ್ಸ್ ತಂಡವನ್ನು ನೇರಾ 2 ಸೆಟ್‍ಗಳಿಂದ ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು.
ಕ್ರಿಕೆಟ್ ಪಂದ್ಯಾವಳಿಯಲ್ಲಿ ಗರಿಷ್ಠ 11 ಸಿಕ್ಸರ್, ಒಟ್ಟು 9 ವಿಕೆಟ್ ಮತ್ತು ವೈಯಕ್ತಿಕವಾಗಿ ಒಟ್ಟು 105 ರನ್ ಬಾರಿಸಿದ ಎರಟೇಂಡ ಟೈಗರ್ಸ್ ತಂಡದ ಹನೀಫ್ ಅವರು ಅತ್ಯುತ್ತಮ ಆಲ್‍ರೌಂಡರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರೆ, ಪಂದ್ಯಾವಳಿ ಯಲ್ಲಿ ಮತ್ತೊಂದು ಒಟ್ಟು 9 ವಿಕೆಟ್ ಪಡೆದ ಪೊಯಕೆರ ರೈಡರ್ಸ್ ತಂಡದ ಇಸ್ಮಾಯಿಲ್ ಅವರು ಅತ್ಯುತ್ತಮ ಬೌಲರ್ ಪ್ರಶಸ್ತಿಯನ್ನು ಪಡೆದುಕೊಂಡರು. ವಾಲಿಬಾಲ್ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಎರಟೇಂಡ ಟೈಗರ್ಸ್ ತಂಡದ ಹಮೀದ್ ಅತ್ಯುತ್ತಮ ಆಟಗಾರ ಪ್ರಶಸ್ತಿಯನ್ನು ಗಳಿಸಿದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಟ್ರೋಪಿ ಮತ್ತು ನಗದು ಬಹುಮಾನ ಸೇರಿದಂತೆ ವೈಯಕ್ತಿಕ ಪಾರಿತೋಷಕ ವನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ವೀರಾಜಪೇಟೆಯಲ್ಲಿ ಇತ್ತೀಚೆಗೆ ನಡೆದ ಮುಸ್ಲಿಂ ಕಪ್-2018 ವಾಲಿಬಾಲ್ ಪಂದ್ಯಾವಳಿಯಲ್ಲಿ ರನ್ನರ್ರ್ಸ್ ಪ್ರಶಸ್ತಿ ಪಡೆದ ಕಳೆದ ಬಾರಿಯ ಚಾಂಪಿಯನ್, ಗ್ರಾಮದ 4 ಸ್ಟಾರ್ ಎಡಪಾಲ ತಂಡದ ಆಟಗಾರರನ್ನು ಗ್ರಾಮದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಎರಟೇಂಡ ಹಮೀದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಗ್ರಾಮದ ತಕ್ಕ ಮುಖ್ಯಸ್ಥರಾದ ಕುಪ್ಪೋಡಂಡ ಕುಂಞಮದ್, ಕುರಿಕಡೆದ ಅಜೀಝ್, ಉದ್ಯಮಿ ಎರಟೇಂಡ ರಫೀಕ್, ಕಾಫಿ ಬೆಳೆಗಾರರಾದ ಪೊಯಕೆರ ಹಮೀದ್, ಬೆಂಗಳೂರಿನ ಉದ್ಯಮಿ ಎರಟೇಂಡ ಹ್ಯಾರೀಸ್, ಕುಪ್ಪೋಡಂಡ ಹಂಸ ಹಾಜಿ, ಎರಟೇಂಡ ಹೆಚ್. ಹನೀಫ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಎಡಪಾಲ ಕುಟುಂಬ ಕಪ್ ಅಯೋಜನಾ ಸಮಿತಿ ಸ್ಥಾಪಕಾಧ್ಯಕ್ಷ ಕುಪ್ಪೋಡಂಡ ಎ. ಅಬ್ದುಲ್ ರಶೀದ್, ಪದಾಧಿಕಾರಿಗಳಾದ ಸಿ.ಎ ಬಶೀರ್, ಝಕರೀಯ ಮೊದಲಾದವರು ಸೇರಿದಂತೆ ನೂರಾರು ಗ್ರಾಮವಾಸಿ ಗಳು, ನೆರೆ ಗ್ರಾಮಸ್ಥರು ಸಮಾರಂಭದಲ್ಲಿ ಹಾಜರಿದ್ದರು. ಎರಟೇಂಡ ಜಂಶೀರ್ ಸ್ವಾಗತಿಸಿದರು. ಕೊಡವ ಮುಸ್ಲಿಂ ಅಸೋಸಿ ಯೇಷನ್‍ನ (ಕೆ.ಎಂ.ಎ.) ನಿರ್ದೇಶಕರಾದ ಕುರಿಕಡೆರ ಎ. ಅಬ್ದುಲ್ ಸಮದ್ ಅವರು ವೀಕ್ಷಕ ವಿವರಣೆ ನೀಡಿದರು. ಎರಟೇಂಡ ಹನೀಫ ವಂದಿಸಿದರು. ಇದಕ್ಕೂ ಮೊದಲು ನಡೆದ ಪೈನಲ್ಸ್ ಪಂದ್ಯಾವಳಿಯನ್ನು ಗ್ರಾಮದ ಮಾಜಿ ಯೋಧ ಕುಪ್ಪೋಡಂಡ ಶಾಹುಲ್ ಹಮೀದ್ ಮತ್ತು ಎರಟೇಂಡ ಹನೀಫ್ ಅವರು ಉದ್ಘಾಟಿಸಿದರು. ಅಲ್ಲದೆ ಮಂಗಳವಾರ ಆರಂಭವಾದ ಪಂದ್ಯಾವಳಿಗೆ ಗ್ರಾಮದ ಪ್ರಮುಖರಾದ ಎರಟೇಂಡ ಹನೀಫ್ ಮತ್ತು ಕುರಿಕಡೆರ ಹಸನ್ ಅವರು ಚಾಲನೆ ನೀಡಿದ್ದರು.
- ಚಿತ್ರ ವರದಿ : ರಫೀಕ್ ತೂಚಮಕೇರಿ