ಕೂಡಿಗೆ, ಏ. 11: ಕುಶಾಲನಗರದ ಅಗ್ನಿಶಾಮಕ ಠಾಣೆಯು ಅವಘಡ ಸಂಭವಿಸಿದಲ್ಲಿ ತುರ್ತು ಸೇವೆಯನ್ನು ವಾಹನಗಳ ಕೊರತೆಯ ನಡುವೆಯೂ ಸೂಕ್ತವಾಗಿ ಒದಗಿಸುತ್ತಿದ್ದು, ಅಗ್ನಿಶಾಮಕ ಕೇಂದ್ರವನ್ನು ಹಾಗೂ ಸೇವೆಯನ್ನು ಮೇಲ್ದರ್ಜೆಗೇರಿಸಬೇಕೆಂಬದು ಹೋಬಳಿ ವ್ಯಾಪ್ತಿಯ ಸಾರ್ವಜನಿಕರ ಆಗ್ರಹವಾಗಿದೆ.

ಕುಶಾಲನಗರ ಹೋಬಳಿ ವ್ಯಾಪ್ತಿಯ ಸುಂದರನಗರದಲ್ಲಿ ಅಗ್ನಿಶಾಮಕ ಠಾಣೆಗೆ 1985ರಲ್ಲಿ ಶಂಕುಸ್ಥಾಪನೆ ಮಾಡಿ, 1989 ರಿಂದ ಸ್ವಂತ ಕಟ್ಟಡದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ. ಪ್ರಸ್ತುತ ಠಾಣಾಧಿಕಾರಿ ಸೇರಿದಂತೆ 19 ಸಿಬ್ಬಂದಿಗಳು ಇದ್ದು, ಎರಡು ದೊಡ್ಡ ವಾಹನಗಳು ಮತ್ತು ಎರಡು ಚಿಕ್ಕ ವಾಹನಗಳು ಸೇವೆಯಲ್ಲಿವೆ. ಇಲ್ಲಿಗೆ ಹೆಚ್ಚು ವಾಹನಗಳ ಅಗತ್ಯವಿದೆ. ಈ ಠಾಣೆಯು ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿ, ತೊರೆನೂರು, ಶಿರಂಗಾಲ, ಹೆಬ್ಬಾಲೆ, ಕೂಡಿಗೆ, ಕೂಡುಮಂಗಳೂರು, ಮುಳ್ಳುಸೋಗೆ, ಗುಡ್ಡೆಹೊಸೂರು, ನಂಜರಾಯಪಟ್ಟಣ, ಸುಂಟಿಕೊಪ್ಪ ವ್ಯಾಪ್ತಿಗಳಲ್ಲಿ ಸೇವೆ ಒದಗಿಸುತ್ತಿದೆ.

ಕುಶಾಲನಗರ ಅಭಿವೃದ್ಧಿ ಪಥದಲ್ಲಿ ಬೆಳೆಯುತ್ತಿರುವ ನಗರ. ಜನಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕುಶಾಲ ನಗರ ಹೋಬಳಿ ವ್ಯಾಪ್ತಿಯಲ್ಲಿ ಬೃಹತ್ ಕೈಗಾರಿಕಾ ವಸತಿ ಪ್ರದೇಶದಲ್ಲಿ ಹಲವಾರು ಕಾಫಿ ಉದ್ದಿಮೆ ಕೇಂದ್ರ, ಮರಮುಟ್ಟು ಕಾರ್ಖಾನೆಗಳು, ಜಿಲ್ಲೆಯಲ್ಲಿಯೇ ಬಹಳ ದೊಡ್ಡ ಪ್ರಮಾಣದಲ್ಲಿವೆ. ಜೊತೆಗೆ ಸಮೀಪದಲ್ಲಿ ರಕ್ಷಿತ ಅರಣ್ಯ ವಲಯವೂ ಇದೆ. ಕೋಟ್ಯಾಂತರ ರೂಪಾಯಿಗಳ ಬೆಲೆಬಾಳುವ ನಾಟಾ ಸಂಗ್ರಹಾಗಾರವೂ ಇದೆ. ಈ ಪ್ರದೇಶಗಳಲ್ಲಿ ಬೆಂಕಿ ಅನಾಹುತಗಳು ಆಗುವದು ಸಾಮಾನ್ಯವಾಗಿದೆ. ಯಾವದೇ ಅನಾಹುತಗಳು ಸಂಭವಿಸಿದರೂ ತಕ್ಷಣ ಆಸರೆಗೆ-ರಕ್ಷಣೆಗೆ ಅಗ್ನಿಶಾಮಕ ದಳ ಸುಸಜ್ಜಿತವಾಗಿ ಸುಸ್ಥಿತಿಯಲ್ಲಿಯೂ ಕಾರ್ಯ ನಿರ್ವಹಿಸುತ್ತಿದೆ. ಸುಮಾರು 28 ವರ್ಷಗಳ ಹಿಂದೆ ಎರಡು ವಾಹನಗಳನ್ನು ಖರೀದಿಸಿದ್ದು, ಒಂದು ವಾಹನ ಕೆಟ್ಟಿದ್ದು, ಅಪಾಯದ ಸೂಚನೆಗಳ ಕರೆ ಬಂದ ತಕ್ಷಣ ಚಾಲನೆಗೆ ಪಯತ್ನಿಸಿದರೆ ವಾಹನ ಚಾಲನೆಗೆ ಸ್ಪಲ್ಪ ಸಮಯ ಬೇಕಾಗುತ್ತದೆ. ಇಂತಹ ವಾಹನಗಳಲ್ಲಿ ಜರೂರಾಗಿ ಬೆಂಕಿ ಅನಾಹುತ ಸ್ಥಳಗಳಿಗೆ ನೀರನ್ನು ತುಂಬಿಕೊಂಡು ಹೋಗುವದು ತುಂಬಾ ತ್ರಾಸದಾಯಕವಾಗಿದೆ. ಈ ಕಾರಣದಿಂದ ಆ ವಾಹನವನ್ನು ರಿಪೇರಿ ಮಾಡಿಸಲಾಗುತ್ತಿದೆ. ಇಂತಹ ಸಮಸ್ಯೆಗಳನ್ನು ತಪ್ಪಿಸಲು ಹಾಗೂ ಇದರ ಜೊತೆಯಲ್ಲಿ ಠಾಣೆಯನ್ನು ಮೇಲ್ದರ್ಜೆಗೇರಿಸಬೇಕು ಹಾಗೂ ಆಧುನಿಕ ತಂತ್ರಜ್ಞಾನವುಳ್ಳ ಪವರ್ ಸ್ಟೇರಿಂಗ್, ಪವರ್ ಬ್ರೇಕ್ ವಾಹನಗಳ ಅಗತ್ಯತೆ ಇದೆ. ಅದರಲ್ಲೂ ಕನಿಷ್ಟ 4 ವಾಹನಗಳಾದರೂ ಕುಶಾಲನಗರ ಹೋಬಳಿ ವ್ಯಾಪ್ತಿಗೆ ನೀಡುವದರ ಮೂಲಕ ತುರ್ತು ಸೇವೆಗೆ ಅವಕಾಶವಾಗಲು ಸರ್ಕಾರ ಗಮನಹರಿಸಬೇಕೆಂಬದು ಈ ವ್ಯಾಪ್ತಿಯ ಸಾರ್ವಜನಿಕರ ಒತ್ತಾಯವಾಗಿದೆ. - ಕೆ.ಕೆ. ನಾಗರಾಜ ಶೆಟ್ಟಿ.