ಸೋಮವಾರಪೇಟೆ, ಏ. 9: ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ತೋರಿದ ಸಾಧಕ ಮಹಿಳೆಯರನ್ನು ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯ ದರ್ಶಿ ಎಲ್.ಎಂ.ಪ್ರೇಮ ವಹಿಸಿದ್ದರು.
ಸಾಹಿತಿ ಸುನೀತಾ ಲೋಕೇಶ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಭಾಷೆಯ ಬೆಳವಣಿಗೆಗೆ ಓದು ಮತ್ತು ಬರಹ ಮುಖ್ಯವಲ್ಲ. ಭಾಷೆಯ ಬಗ್ಗೆ ಅಭಿರುಚಿ ಇರಬೇಕು ಎಂದರು.
ಸಂಗೀತ ಮತ್ತು ನಾಟ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಹಿರಿಯ ಕಲಾವಿದೆ ಕಂಬೆಯಂಡ ಸೀತಾಲಕ್ಷ್ಮಿ ಅಪ್ಪಯ್ಯ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ಎಳೆಯ ಪ್ರಾಯದಲ್ಲಿಯೇ ನಮಗೆ ಆಸಕ್ತಿ ಇರುವಂತಹ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು. ಯಾವದೇ ಕ್ಷೇತ್ರದಲ್ಲೂ ಉತ್ತುಂಗಕ್ಕೇರಬೇಕಾದರೆ ಅಡಿಪಾಯ ಮುಖ್ಯ. ಸತತ ಪರಿಶ್ರಮ, ಏಕಾಗ್ರತೆ, ಆತ್ಮ ವಿಶ್ವಾಸದಿಂದ ಮಾತ್ರ ನಾವು ವಿದ್ಯೆಯನ್ನು ಕರಗತಮಾಡಿ ಕೊಳ್ಳಲು ಸಾಧ್ಯ ಎಂದರು.
ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದ ವಿಶೇಷ ಸಾಧನೆಗಾಗಿ ಸನ್ಮಾನವನ್ನು ಸ್ವೀಕರಿಸಿದ ಇಲ್ಲಿನ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಪದವೀಧರ ಮುಖ್ಯ ಶಿಕ್ಷಕಿ ಎಂ.ಜೆ.ಅಣ್ಣಮ್ಮ ಮಾತನಾಡಿ, ಯಾವದೇ ಕ್ಷೇತ್ರದಲ್ಲೂ ಅರ್ಜಿಯನ್ನು ಹಾಕಿ ಪ್ರಶಸ್ತಿಯನ್ನು ಪಡೆಯುವ ಗೋಜಿಗೆ ಹೋಗ ಬಾರದು. ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ, ಪ್ರಾಮಾಣಿಕತೆ ಇದ್ದರೆ ಅದೇ ನಮಗೆ ತೃಪ್ತಿಯನ್ನು ನೀಡುತ್ತದೆ ಎಂದರು.
ಸಮಾಜ ಸೇವೆಗಾಗಿ ಎಚ್.ಬಿ. ಜಯಮ್ಮ, ಜಾನಪದ ಕ್ಷೇತ್ರದ ಸಾಧನೆ ಗಾಗಿ ಕೆ.ಆರ್. ಚಂದ್ರಿಕಾ ಅವರನ್ನು ಪರಿಷತ್ ವತಿಯಿಂದ ಸನ್ಮಾನಿಸಲಾ ಯಿತು. ಸಾಹಿತ್ಯ ಪರಿಷತ್ತಿನ ವಿಶೇಷ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಜನಪದ ಪರಿಷತ್‍ನ ತಾಲೂಕು ಕಾರ್ಯದರ್ಶಿ ವಿಜಯ್ ಹಾನಗಲ್, ಹಿರಿಯ ಸಾಹಿತಿ ನ.ಲ.ವಿಜಯ ಅವರುಗಳನ್ನು ಪರಿಷತ್ ವತಿಯಿಂದ ಗೌರವಿಸಲಾಯಿತು.
ವಕೀಲರಾದ ವಿ. ಮಾನಸ ಮಾತನಾಡಿದರು. ಪರಿಷತ್ ಸದಸ್ಯೆ ಎಂ.ಎ. ರುಬಿನಾ ಕಾರ್ಯಕ್ರಮ ನಿರೂಪಿಸಿದರು. ಕಸಾಪ ಅಧ್ಯಕ್ಷ ಎಸ್.ಡಿ. ವಿಜೇತ್, ಕಾರ್ಯದರ್ಶಿ ಆದಂ, ಕೋಶಾಧಿಕಾರಿ ವೀರರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.