ಮಡಿಕೇರಿ, ಏ. 9: ಮುಂಬರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳಲ್ಲಿ ಸಂಚಲನ ಸೃಷ್ಟಿಯಾಗಿದೆ. ಜೆಡಿಎಸ್ ಪಕ್ಷ ತನ್ನ ಅಭ್ಯರ್ಥಿಗಳ ಖಚಿತತೆಯೊಂದಿಗೆ ಈಗಾಗಲೇ ಅಖಾಡಕ್ಕಿಳಿದಿದ್ದರೆ, ಕಾಂಗ್ರೆಸ್ ಪಕ್ಷದಲ್ಲಿ ಇದುವರೆಗೂ ಅಭ್ಯರ್ಥಿಗಳು ಅಂತಿಮಗೊಂಡಿಲ್ಲ. ಭಾರತೀಯ ಜನತಾ ಪಾರ್ಟಿಯಿಂದ ಓರ್ವ ಅಭ್ಯರ್ಥಿ ಮಾತ್ರ ನಿಗದಿಯಾಗಿದ್ದು, ಮತ್ತೋರ್ವ ಅಭ್ಯರ್ಥಿಯ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ.ಜೆಡಿಎಸ್‍ನಿಂದ ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಜೀವಿಜಯ, ವೀರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಸಂಕೇತ್ ಪೂವಯ್ಯ ಅಧಿಕೃತ ಅಭ್ಯರ್ಥಿಗಳೆಂದು ಈಗಾಗಲೇ ಘೋಷಣೆಯಾಗಿದೆ. ಬಿಜೆಪಿಯಿಂದ ಮಡಿಕೇರಿ ಕ್ಷೇತ್ರದ ಅಭ್ಯರ್ಥಿಯಾಗಿ ಅಪ್ಪಚ್ಚುರಂಜನ್ ಕಳಕ್ಕಿಳಿಯುವದು ಖಚಿತಗೊಂಡಿದೆ. ವೀರಾಜಪೇಟೆ ಕ್ಷೇತ್ರದಿಂದ ಕೆ.ಜಿ. ಬೋಪಯ್ಯ ಅವರ ಹೆಸರು ಕೇಳಿ ಬರುತ್ತಿದೆಯಾದರೂ ಇನ್ನೂ ಅಂತಿಮಗೊಂಡಿಲ್ಲ. ಕಾಂಗ್ರೆಸ್‍ನಿಂದ ಎರಡು ಕ್ಷೇತ್ರಗಳಿಗೂ ಆಕಾಂಕ್ಷಿಗಳ ನಡುವೆ ಹಗ್ಗಜಗ್ಗಾಟ ನಡೆಯುತ್ತಿದ್ದು, ಫಲಿತಾಂಶ ಹೊರಬಿದ್ದಿಲ್ಲ. ಇನ್ನು ಎಸ್‍ಡಿಪಿಐ ಪಕ್ಷವೂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತೀರ್ಮಾನಿಸಿದ್ದು, ಅಭ್ಯರ್ಥಿಗಳು ಯಾರೆಂದು ಬಹಿರಂಗಗೊಂಡಿಲ್ಲ. ಈ ನಡುವೆ ರಾಜಕೀಯ ರಹಿತ ಹಿಂದೂ ಮಹಾಸಭಾ ಸಿ.ಜೆ. ಭಾರ್ಗವ್ ಅವರನ್ನು ಮಡಿಕೇರಿ ಕ್ಷೇತ್ರದಿಂದ ಸ್ಪರ್ಧಾ ಕಣಕ್ಕೆ ಇಳಿಸುವದಾಗಿ ಘೋಷಿಸಿದ್ದು, ವೀರಾಜಪೇಟೆ ಕ್ಷೇತ್ರಕ್ಕೆ ಸದ್ಯದಲ್ಲಿಯೇ ಅಭ್ಯರ್ಥಿಯ ಹೆಸರನ್ನು ಪ್ರಕಟಿಸುವದಾಗಿ ರಾಜ್ಯ ಪದಾಧಿಕಾರಿ ಲೋಹಿತ್ ಸುವರ್ಣ ತಿಳಿಸಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಚುನಾವಣೆ
(ಮೊದಲ ಪುಟದಿಂದ) ಸಂಬಂಧಿ ಮೇಲಿನ ನಾಲ್ಕು ರಾಜಕೀಯ ಪಕ್ಷಗಳ ಜಿಲ್ಲಾಧ್ಯಕ್ಷರ ಅಭಿಪ್ರಾಯವನ್ನು ‘ಶಕ್ತಿ’ ಸಂಗ್ರಹಿಸಿದ್ದು, ವಿವರ ಇಂತಿದೆ.
ಪ್ರಚಾರ ಬಿರುಸು - ಸಂಕೇತ್
ಅಧಿಕೃತವಾಗಿ ಅಭ್ಯರ್ಥಿಗಳ ಘೋಷಣೆಯಾದ ಬಳಿಕ ಎಲ್ಲಾ ಹೋಬಳಿ ವ್ಯಾಪ್ತಿಯಲ್ಲೂ ಬಿರುಸಿನ ಪ್ರಚಾರ ಮಾಡಲಾಗಿದೆ. ದಿಡ್ಡಳ್ಳಿ ಪ್ರಕರಣ, ಕಾಡಾನೆಗೆ ಬಲಿಯಾದವರಿಗೆ ನೀಡಿದ ಸ್ಪಂದನ, ಬೆಳೆಗಾರರ ಸಂಕಷ್ಟ ಪರಿಹಾರಕ್ಕೆ ಕೈಗೊಂಡ ಹೋರಾಟ ಇವೆಲ್ಲವೂ ಈ ಬಾರಿ ಜೆಡಿಎಸ್‍ಗೆ ವರದಾನವಾಗಲಿದೆ. ಕಳೆದ ಬಾರಿ ಅಲ್ಪಮತಗಳಿಂದ ಕೈತಪ್ಪಿದ್ದ ಶಾಸಕ ಸ್ಥಾನ ಈ ಬಾರಿ ಕೈ ಸೇರಲಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತಾ. 18 ರಂದು ಕುಶಾಲನಗರದಲ್ಲಿ ನಡೆಯುವ ಜೆಡಿಎಸ್ ರ್ಯಾಲಿಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಮಾಹಿತಿಯಿತ್ತರು.
ತಾ. 12 ರಂದು ಅಭ್ಯರ್ಥಿ ಘೋಷಣೆ - ಶಿವು
ಕಾಂಗ್ರೆಸ್‍ನಿಂದ ಕಣಕ್ಕಿಳಿಯಲಿರುವ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ತಾ. 12 ರಂದು ಅಧಿಕೃತವಾಗಿ ಘೋಷಣೆಯಾಗಲಿದೆ. ಅಭ್ಯರ್ಥಿ ಯಾರೇ ಆದರೂ ಅವರ ಗೆಲುವಿಗಾಗಿ ಪಕ್ಷ ಕೆಲಸ ಮಾಡುತ್ತದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವು ಮಾದಪ್ಪ ಪ್ರತಿಕ್ರಿಯಿಸಿದ್ದಾರೆ. ಬೂತ್‍ಮಟ್ಟದಲ್ಲಿ 11 ಸಾವಿರ ಕಾರ್ಯಕರ್ತರಿದ್ದು, ಈಗಾಗಲೇ ಪಕ್ಷದ ಪರ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಎರಡು ದಿನಗಳಲ್ಲಿ ವೀರಾಜಪೇಟೆಗೆ ಅಭ್ಯರ್ಥಿ- ಭಾರತೀಶ್
ಮಡಿಕೇರಿ ಕ್ಷೇತ್ರದ ಅಭ್ಯರ್ಥಿಯಾಗಿ ಹಾಲಿ ಶಾಸಕ ಅಪ್ಪಚ್ಚು ರಂಜನ್ ಅವರು ಅಭ್ಯರ್ಥಿಯಾಗಿದ್ದು ಬಿಜೆಪಿಯಿಂದ ವೀರಾಜಪೇಟೆ ಕ್ಷೇತ್ರದಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿ ಹೆಸರು ಇನ್ನೆರಡು ದಿನಗಳಲ್ಲಿ ಘೋಷಣೆಯಾಗಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಭಾರತೀಶ್ ಹೇಳಿದ್ದಾರೆ. ಈಗಾಗಲೇ ಶೇ. 60 ರಷ್ಟು ಪ್ರಚಾರ ಕಾರ್ಯ ಮುಗಿದಿದ್ದು, ಪರಿವರ್ತನಾ ರ್ಯಾಲಿ ಸೇರಿದಂತೆ ಬಿಜೆಪಿ ಸಾಧನೆ ಬಗ್ಗೆ ಜನರಿಗೆ ಮನವರಿಕೆ ಮಾಡಿಸುವಲ್ಲಿ ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಬಿಜೆಪಿಯು ಈಗಿನ ಚುನಾವಣೆಯಲ್ಲಿ ಬೂತ್ ಮಟ್ಟದಲ್ಲಿನ ಕಾರ್ಯಕರ್ತರ ಮಾಹಿತಿ, ಚಟುವಟಿಕೆಗಳನ್ನು ವಿದ್ಯುನ್ಮಾನ ತಾಂತ್ರಿಕತೆಗೆ ಒಳಪಡಿಸಿದ್ದು, ಇದರಿಂದಾಗಿ ಪಕ್ಷದ ಕಾರ್ಯಚಟುವಟಿಕೆ ವ್ಯವಸ್ಥಿತವಾಗಿ ನಡೆಯಲಿದೆ ಎಂದರು.
ಎಸ್‍ಡಿಪಿಐಯಿಂದಲೂ ಅಭ್ಯರ್ಥಿಗಳು - ಅಮೀನ್
ಸೋಷಿಯಲ್ ಡೆಮಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಕೊಡಗಿನ ಎರಡು ಕ್ಷೇತ್ರಗಳಲ್ಲೂ ವಿಧಾನ ಸಭಾ ಚುನಾವಣೆಗೆ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಈಗಾಗಲೇ ತಳಮಟ್ಟದಿಂದ ಪ್ರಚಾರ ಕಾರ್ಯ ಕೈಗೊಂಡಿದ್ದು, ಅಭ್ಯರ್ಥಿಗಳ ಘೋಷಣೆÉಯಾದ ಬಳಿಕ ಪ್ರಚಾರ ಕಾರ್ಯವನ್ನು ಮತ್ತಷ್ಟು ಬಿರುಸುಗೊಳಿಸುವದಾಗಿ ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಅಮೀನ್ ಮೊಯ್ಸಿನ್ ತಿಳಿಸಿದ್ದಾರೆ.