ಡಾ. ಗಣನಾಥ ಎಕ್ಕಾರು ಅಭಿಮತ

ಕುಶಾಲನಗರ, ಏ. 8: ಪ್ರಸ್ತುತ ಕಂಡುಬರುತ್ತಿರುವ ಸಾಮಾಜಿಕ ಅಸಮಾನತೆ ತೊಡೆದುಹಾಕುವಲ್ಲಿ 12ನೇ ಶತಮಾನದ ವಚನಗಳ ಸಾರ ಮಾರ್ಗದರ್ಶನವಾಗಿದೆ ಎಂದು ಬೆಂಗಳೂರಿನ ಕನ್ನಡ ಪ್ರಾಧ್ಯಾಪಕ ಡಾ. ಗಣನಾಥ ಎಕ್ಕಾರು ಹೇಳಿದರು.

ಮಂಗಳೂರು ವಿ.ವಿ.ಯ ಅಂಬಿಗರ ಚೌಡಯ್ಯ ಅಧ್ಯಯನ ಪೀಠದ ಆಶ್ರಯದಲ್ಲಿ ಸ್ಥಳೀಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಚನ ಚಳುವಳಿ ಮತ್ತು ಅಂಬಿಗರ ಚೌಡಯ್ಯನ ವಚನಗಳ ಪ್ರಸ್ತುತತೆಯ ಅನುಸಂಧಾನದ ಕುರಿತು ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಸಾಮಾಜಿಕ ಸಮಾನತೆಗಾಗಿ ವಚನಗಳ ಮೂಲಕ ಕ್ರಾಂತಿ ನಡೆಸಿದ ಮಹಾನ್ ವಚನಕಾರರ ಪೈಕಿ ಅಂಬಿಗರ ಚೌಡಯ್ಯ ಕೂಡ ಪ್ರಮುಖ ಪಾತ್ರ ವಹಿಸಿದ್ದಾರೆ. ಜಾತಿ, ಧರ್ಮಗಳ ನಡುವಿನ ಜಂಜಾಟ ಇಂದಿಗೂ ಮುಂದುವರೆದಿದ್ದು ವಚನಗಳ ಸಾರವನ್ನು ಎಲ್ಲೆಡೆ ಸಾರುವ ಮೂಲಕ ಸಮಾನತೆಯನ್ನು ಪ್ರತಿಪಾದಿಸಬೇಕಿದೆ ಎಂದು ಕರೆ ನೀಡಿದರು.

ವಿದ್ಯಾರ್ಥಿಗಳು ಬೌದ್ಧಿಕ ವಿಕಸನಕ್ಕೆ ಹೆಚ್ಚಿನ ಮಹತ್ವ ನೀಡಬೇಕಿದೆ. ವಚನಗಳನ್ನು ಅಭ್ಯಸಿಸುವದರೊಂದಿಗೆ ಅವುಗಳ ತಿರುಳನ್ನು ಅರ್ಥೈಸಿಕೊಂಡಲ್ಲಿ ಬೌದ್ಧಿಕ ವಿಕಸನಕ್ಕೆ ಸಹಕಾರಿಯಾಗಲಿದೆ ಎಂದರು.

ಪ್ರಾಸ್ತಾವಿಕ ನುಡಿಗಳಾಡಿದ ಅಂಬಿಗರ ಚೌಡಯ್ಯ ಅಧ್ಯಯನ ಪೀಠದ ಸಂಯೋಜಕ ಡಾ. ಆರ್. ನಾಗಪ್ಪ ಗೌಡ, ಇಂದಿನ ಸಮಾಜದಲ್ಲಿ ಮಾನವೀಯ ಮೌಲ್ಯಗಳ ಕೊರತೆ ಕಂಡುಬರುತ್ತಿರುವದು ವಿಷಾದಕರ ಸಂಗತಿಯಾಗಿದೆ. ಅಕ್ಷರಸ್ತರ ಸಂಖ್ಯೆ ಅಧಿಕಗೊಂಡಿದ್ದರೂ ಮಾನವೀಯ ಮೌಲ್ಯಗಳು ಕಣ್ಮರೆಯಾಗುತ್ತಿವೆ. ವಿದ್ಯಾರ್ಥಿಗಳಲ್ಲಿ ಮಾನವೀಯತೆ ಮೌಲ್ಯಯುತ ಶಿಕ್ಷಣದ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಮಂಗಳೂರು ವಿ.ವಿ. ಸ್ಥಾಪಿಸಿದ ಅಂಬಿಗರ ಚೌಡಯ್ಯ ಅಧ್ಯಯನ ಪೀಠದ ವತಿಯಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ. ವಿಶೇಷ ಉಪನ್ಯಾಸ ಕಾರ್ಯಕ್ರಮಗಳು, ವಚನ ಗಾಯನ ವ್ಯಾಖ್ಯಾನ ಕಾರ್ಯಕ್ರಮ, ಮೊಗವೀರರ ಸಮಸ್ಯೆ ಕುರಿತ ವಿಚಾರ ಸಂಕಿರಣ, ಅಂಬಿಗರ ಚೌಡಯ್ಯನ ಬದುಕು-ಬರಹದ ಕುರಿತಾದ ನಾಟಕ, ಸಾಕ್ಷ್ಯಚಿತ್ರ ರೂಪಿಸುವಲ್ಲಿ ಚಿಂತನೆ ಹರಿಸಲಾಗಿದೆ ಎಂದರು. ಕಾಲೇಜು ಪ್ರಾಂಶುಪಾಲ ಪ್ರೊ. ಪಿ.ಎಂ. ಸುಬ್ರಮಣ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಪ್ರೊ. ಹೆಚ್.ಬಿ. ಲಿಂಗಮೂರ್ತಿ, ವಸಂತ ಕುಮಾರಿ, ಪಿ.ಟಿ. ಕಾಶಿ ಕುಮಾರ್, ಪುಟ್ಟರಾಜು ಮತ್ತಿತರರು ಇದ್ದರು. ವಿದ್ಯಾರ್ಥಿನಿ ಶ್ವೇತ ಪ್ರಾರ್ಥಿಸಿದರು, ಉಪನ್ಯಾಸಕಿ ಚೈತ್ರ ಸ್ವಾಗತಿಸಿದರು, ನಂಜುಂಡಸ್ವಾಮಿ ನಿರೂಪಿಸಿದರು, ಅನಿತ ವಂದಿಸಿದರು.