ಬೀದಿಯಲ್ಲಿ ದೊಂಬರಾಟ ನಡೆಯುತ್ತಿರುತ್ತದೆ, ತಂತಿಯ ಮೇಲೆ ನಡೆಯುವದು, ಮರ್ಕಟನನ್ನು ಆಟವಾಡಿಸುವದು, ಕೋಲೆ ಬಸವನಾಟ, ಬಾಲಕ-ಬಾಲಕಿಯರಿಂದ ಸಾಹಸಗಳು-ನೋಡುಗರಿಗೆ ಅತ್ಯಾಕರ್ಷಣೀಯ. ಕರ್ನಾಟಕದ ಈಗಿನ ಚುನಾವಣಾ ಕಣ ಇದೇ ರೀತಿಯ ದೊಂಬರಾಟದಂತಾಗಿದೆ. ಒಂದೆಡೆ ವೈಯಕ್ತಿಕ ದ್ವೇಷ, ಮತ್ತೊಂದೆಡೆ ಮರ್ಕಟನಂತೆ ಪಕ್ಷಾಂತರ ಪರ್ವ, ಟಿಕೆÀಟ್ ಸಿಗದಿದ್ದರೆ ಬಂಡಾಯ ಬೆÀದರಿಕೆ ಸರ್ವೇ ಸಾಮಾನ್ಯವೆನಿಸಿದೆ. ಜಾತೀಯ, ಮತೀಯ ವೈಷಮ್ಯಗಳ ಬಹಿರಂಗ ಸಮರ, ಇದಕ್ಕಾಗಿ ಪ್ರಜಾಪ್ರಭುತ್ವ ಸ್ವಾತಂತ್ರ್ಯದÀ ಪೂರ್ಣ ದುರ್ಬಳಕೆ, ಆರೋಪಿತರು, ಭ್ರಷ್ಟರು, ಕಳಂಕಿತರಿಗೆ ಮಣೆÉ ಹಾಕಿ ಪಕ್ಷಗಳಿಗೆ ಸೆಳೆದುಕೊಳ್ಳುವದು ನಿರಾತಂಕವಾಗಿ ನಡೆದಿದೆ.ಮೇ. 12ರ ಮತದಾನ ಕಳೆದೊಡನೆ ಮತ್ತೆ ಮತದಾರ ಕೂಲಿ ನಾಲಿ, ಕೌಟುಂಬಿಕ, ಆರ್ಥಿಕ ಸಮಸ್ಯೆಗಳಲ್ಲಿ ಸಿಲುಕಿ ಕಂಗಾಲಾಗುತ್ತಾನೆ. ತಾನು ಆರಿಸಿದವರನ್ನು ತನ್ನ ಕೆಲಸಕ್ಕಾಗಿ ಭೇಟಿ ಮಾಡಲು ಕೂಡ ಸಾಧ್ಯವಾಗದೆ ವಿಲ ವಿಲನೆ ಒದ್ದಾಡುತ್ತಾನೆ. ಮುಂದಿನ 5 ವರ್ಷಗಳ ಕಾಲ ಮತ್ತೆ ಸಮಸ್ಯೆಗಳ ಸಂಕಷ್ಟದಲ್ಲಿ ಮುಳುಗುತ್ತಾನೆ.

ಪ್ರಸಕ್ತ ಸ್ಥಿತಿಯಲ್ಲಿ ರಾಷ್ಟ್ರೀಯ ಪಕ್ಷಗಳು ಇನ್ನೂ ಅಧಿಕೃತ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ಪಕ್ಷಗಳ ಹೈಕಮಾಂಡ್ ಮೀನ-ಮೇಷ ಎಣಿಸುತ್ತಿರುವದು ನಿಜಕ್ಕೂ ಖೇದಕರ. ಇದರಿಂದಾಗಿ ಅಭ್ಯರ್ಥಿಗಳ ನಿಲುವನ್ನು ಮತದಾರ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲದಂತಾಗಿ ಅನಿಶ್ಚಿತ ಮನೋಸ್ಥಿತಿಯಲ್ಲಿ ಮತದಾನವಾಗುವಂತಹ ದುಸ್ಥಿತಿ ಒದಗಿ ಬಂದಿದೆ. ಈ ನಡುವೆ ಸರ್ವೋಚ್ಚ ನ್ಯಾಯಾಲಯವು ನೋಟಾ ಮತದಾನಕ್ಕೆ ಅವÀಕಾಶ ಮಾಡಿರುವದು ವಿಷಾದಕರ. ಇದರಿಂದಾಗಿ ದೇಶದ ಸಾರ್ವಭೌಮ ಪ್ರಭುವೆನಿಸಿದ ಮತದಾರ ತನಗೆ ಅಪರೂಪಕ್ಕೆ ಒದಗಿ ಬರುವ ಮತದಾನದ ಹಕ್ಕನ್ನು ನೋಟಾಗೆ ಮಾಡುವ ಮೂಲಕ ಕಸದ ಬುಟ್ಟಿಗೆ ಎಸೆದಂತಾಗುತ್ತದೆ. ಇದರಿಂದಾಗಿ ಅನೇಕ ಅರ್ಹ ಅಭ್ಯರ್ಥಿಗಳು ಬಹುಮತ ದೊರಕದೆ ಪರಾಭವಗೊಳ್ಳುವ ಆತಂಕವಿದೆ. ಮತದಾರರು ಭಾರತದ ಇಂದಿನ ಸ್ಥಿತಿಯಲ್ಲಿ ನಿಷ್ಕಳಂಕ, ಪ್ರಬುದ್ಧ, ಪೂರ್ಣ ಪ್ರಾಮಾಣಿಕ ಅಭ್ಯರ್ಥಿಯನ್ನು ಗುರುತು ಮಾಡಲು ಅಂತಹವರು ಸಿಗುವದಿಲ್ಲ. ಆದರೆ, ದೇಶದ, ರಾಜ್ಯದ, ಸರ್ವ ಪ್ರಜೆಗಳ ಬಗ್ಗೆ ಒಲವಿರುವ, ಜಾತೀಯ ಎಲ್ಲೆ ಮೀರಿದ, ಸ್ಥಳೀಯವಾಗಿ ಜನರೊಂದಿಗೆ ಬೆರೆತು ಕೆಲಸ ಮಾಡುವ ಮನೋಭಾವವಿರುವ, ಅಭಿವೃದ್ಧಿಪರ ಕಾಳಜಿಯಿರುವ ಅಭ್ಯರ್ಥಿಯನ್ನು ಇರುವವರಲ್ಲಿ ಕಂಡು ಹಿಡಿದು, ಇದ್ದುದರಲ್ಲಿ ಸಮರ್ಪಕರಾದವರು ಎನ್ನುವವರನ್ನು ಗುರುತಿಸಲು ಪ್ರಯತ್ನಿಸಿ ಹಾಗೂ ಪಕ್ಷಗಳ ಸಿದ್ಧಾಂತ ಮತ್ತು ನಾಯಕತ್ವವನ್ನು ಪರಿಗಣಿಸಿ ಮತ ನೀಡಬೇಕಾಗಿದೆ.

ಈಗಿನ ಪ್ರಚಾರ ವೈಖರಿಯೆಂದರೆÀ, ರಾಜ್ಯ ನಾಯಕರು, ರಾಷ್ಟ್ರೀಯ ನಾಯಕರು ತಮ್ಮ ಎದುರಾಳಿಗಳನ್ನು ಹೀನಾಮಾನವಾಗಿ ಬೈಯ್ಯುವದು ಬಿಟ್ಟರೆ, ತಾವು ಏನು ಮಾಡುತ್ತೇವೆ, ತಮ್ಮ ಪಕ್ಷÀದ ಸ್ಪÀಷ್ಟ ನಿಲುವೇನು, ಸಾಮಾನ್ಯ ಜನರ ಸಮಸ್ಯೆಗಳಿಗೆ ಯಾವ ರೀತಿ ಸ್ಪಂದಿಸುತ್ತೇವೆ ಎನ್ನುವಂತಹ ವಿಚಾರಗಳು ಪ್ರಚಾರ ಸಭೆಗಳಲ್ಲಿ ನಗಣ್ಯವಾಗುತ್ತಿವೆ. ಮಠ, ಮಂದಿರ, ಮಸೀದಿ, ಚರ್ಚ್‍ಗಳಿಗೆ ಸ್ಪರ್ಧಾತ್ಮಕವಾಗಿ ಭೇಟಿ ಮೂಲಕ ಆಯಾ ವಿಭಾಗದ ಜನರನ್ನು ಒಲಿಸಿಕೊಳ್ಳುವ ರಣತಂತ್ರ ನೀತಿ ಎಲ್ಲ ಪಕ್ಷಗಳಲ್ಲಿಯೂ ಕಂಡುಬಂದಿವೆ. ಅಲ್ಲದೆ ಸಾಮಾನ್ಯ ಮತದಾರರು ತಮ್ಮ ನಿರ್ಧಾರವನ್ನು ರಹಸ್ಯವಾಗಿ ಇರಿಸಿಕೊಂಡಿದ್ದು, ಮೇ 12 ರಂದು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಒಂದೆಡೆ ವ್ಯಕ್ತಿ, ಪಕ್ಷ, ವೈಯಕ್ತಿಕ ವರ್ಚಸ್ಸು, ನಾಯಕತ್ವ -ಮತದಾರರ ಮೇಲೆ ಪ್ರಭಾವ ಬೀರಬಹುದು. ಇನ್ನೊಂದೆಡೆ ಹಣಕಾಸಿನ ಆಮಿಷವೂ ಕೆಲಸ ಮಾಡಬಹುದು. ಮತ್ತೊಂದೆಡೆ ಜಾತೀಯ, ಮತೀಯ ಪ್ರಚೋದನೆಗಳು ಮತದಾನ ಸಂದರ್ಭ ಕೆಲವು ಮತದಾರರ ಮೇಲೆ ಪರಿಣಾಮವುಂಟುಮಾಡಬಲ್ಲದು. ಮಗದೊಂದು ಕಡೆ-ಎಲ್ಲಕ್ಕಿಂತ ಮುಖ್ಯವಾಗಿ ಆ ವ್ಯಕ್ತಿಯ ಅದೃಷ್ಟವೂ ಗೆಲವಿಗೆ ಒಂದು ಕಾರಣವಾಗಬಲ್ಲದು. ಮಾನವನ ಸಂಕಲ್ಪವೊಂದಾದರೆ, ದೈವಚಿತ್ತ ಬೇರೆಯೇ ಇರಬಹುದು.

ದೇಶದ, ಅದರಲ್ಲೂ ಕರ್ನಾಟಕದ ಮತದಾರರು ಈವರೆಗಿನ ಚುನಾವಣೆಗಳಲ್ಲಿ ಸಾಕಷ್ಟು ಪ್ರಬುದ್ಧತೆ ಮೆರೆದಿದ್ದಾರೆ. ಅಪಪ್ರಚಾರ, ವೈಯಕ್ತಿಕ ದ್ವೇಷಾಸೂಯೆ, ತೇಜೋವಧೆ, ಜಾತಿ-ಮತ ಲೆಕ್ಕಾಚಾರ ರಾಜ್ಯದಲ್ಲಿ ಎಲ್ಲರ ಮೇಲೆ ಬೀರಿಲ್ಲ. ಅದರ ಪ್ರಮಾಣ ಇತರ ರಾಜ್ಯಗಳಿಗೆ ಹೋಲಿಸಿದರೆ ಕಡಿಮೆ ಎನ್ನಬಹುದು. ಮೌಢ್ಯತನದಲ್ಲಿ ನಾಯಕತ್ವ ಒಪ್ಪುವದಾಗಲಿ, ಕುರಿಗಳಂತೆ ನಾಯಕರನ್ನು ಹಿಂಬಾಲಿಸುವದಾಗಲಿ ರಾಜ್ಯದಲ್ಲಿ ಕಡಿಮೆ ಎನ್ನಬಹುದು. ಈ ಹಿನ್ನೆಲೆಯಲ್ಲಿ ಪ್ರಸ್ತುತ ಕಾಂಗ್ರೆಸ್, ಬಿ.ಜೆ.ಪಿ. ಹಾಗೂ ಜೆ.ಡಿ.ಎಸ್. ನಡುವಿನ ತ್ರಿಕೋಣ ಸ್ಪರ್ಧೆಯಲ್ಲಿ (ಬೇರೆ ಪಕ್ಷಗಳು, ಪಕ್ಷೇತರರು ಕೆಲವರಿರಬಹುದು) ಆಯಾ ಜಿಲ್ಲೆಗಳ ವಿಭಿನ್ನ ವಿದ್ಯಮಾನ, ವಿಭಿನ್ನ ಒಲವಿನ ಆಧಾರದಲ್ಲಿ ಫಲಿತಾಂಶ ಹೊರ ಬೀಳಲಿದೆ. ಅಲ್ಲಿಯವರೆಗೆ ಎಲ್ಲ ಕಡೆಗಳಿಂದ ಮತದಾರರಿಗೆ ಕಿರಿಕ್ ತಪ್ಪ್ಪಿದ್ದಲ್ಲ. ಆದರೆ, ಅನೇಕರಿಗೆ ಈ ಚುನಾವಣೆ ಆರ್ಥಿಕವಾಗಿ ಹಾಗೂ ತಾತ್ಕಾಲಿಕ ಆಮಿಷಗಳಿಂದಲೂ ಪ್ರಯೋಜನವುಂಟು ಮಾಡಬಹುದು. ಅಬ್ಬಾ! ಬೈಗುಳ, ಆರೋಪ- ಪ್ರತ್ಯಾರೋಪ ಮರ್ಕಟಗಳಂತೆ ಬೇರೆ ಬೇರೆ ಪಕ್ಷಗಳಿಗೆ ನೆಗೆಯುವದು- ಈ ನಡುವೆಯೂ ಚುನಾವಣಾಧಿಕಾರಿಗಳ ಹದ್ದುಗಣ್ಣು, ರಾಜಕೀಯ ರಹಿತವಾಗಿ ಖಾಸಗಿ ಅಗತ್ಯಗಳಿಗೂ ವಾಹನಗಳಲ್ಲಿ ಹಣ ಕೊಂಡೊಯ್ಯಲೂ ಕೂಡ ನಿರ್ಬಂಧ, ಹಣ ಮುಟ್ಟುಗೋಲು, ಮೊಕದ್ದಮೆಗಳು, ಅಧಿಕಾರಿಗಳಿಗೆ ಇದೊಂದು ಸಂದರ್ಭ ರಾಜಕಾರಣಿಗಳನ್ನು ಕುಣಿಸುವ ಸದವಕಾಶ ಬಳಕೆ- ಇವೆಲ್ಲ ಇನ್ನೂ ಒಂದು ತಿಂಗಳಿಗೂ ಮೀರಿ ಅನುಭವಿಸುವದು, ಸಹಿಸುವದು ಅನಿವಾರ್ಯ. ಒಂದು ರೀತಿ, ಈಗ ಪ್ರಜೆಗಳು ಅತಂತ್ರರು. ಮತದಾನ ದಿನವಾದ ಮೇ. 12 ರಂದು ಮಾತ್ರ ಸ್ವತಂತ್ರರು. ಕೊಡಗಿನ ಜನ ರಾಜ್ಯದಲ್ಲ್ಲಿಯೇ ಅಧಿಕ ಮತದಾನ ಮಾಡಿ ದಾಖಲೆ ಸ್ಥಾಪಿಸುವಂತಾಗಲಿ. ದಯವಿಟ್ಟು ನೋಟಾಗೆ ಕೊಟ್ಟು ನಿಮ್ಮ ಓಟು ಹಾಳು ಮಾಡದಿರಿ. ಜಿಲ್ಲೆಯ ಜನ ನಿರಂತರವಾಗಿ ಸ್ಥಳೀಯ ಸಮಸ್ಯೆಗಳ ಬಗ್ಗೆ ಆಗಿಂದಾಗ್ಗೆ ಅಲ್ಲಲ್ಲಿ ವಿರೋಧÀ, ಪ್ರತಿಭಟನೆಗಳನ್ನು ಮಾಡುತ್ತಿರುವದು ನಿತ್ಯ ಸುದ್ದಿ. ಆದರೆ, ಇದಕ್ಕೆಲ್ಲ ಪರಹಾರವೆನಿಸುವ ಮತದಾನದ ಹಕ್ಕು ಚಲಾಯಿಸಲೇ ಬೇಕು. ಮೂಲತಃ ಕೊಡಗಿನವರಾಗಿ ಹೊರಗೆ ನೆಲಸಿದ್ದು ಜಿಲ್ಲೆಯ ಆಗು-ಹೋಗುಗಳ ಬಗ್ಗೆ ಅಲ್ಲ್ಲಿಂದಲೇ ಸೂತ್ರ ಹಿಡಿಯುವ ಇಲ್ಲಿಯೇ ಮತದಾನವಿದ್ದರೂ ಆಗಮಿಸದೆ ಕುಳಿತುಕೊಳ್ಳುವ ಮಂದಿ ಆ ದಿನ ಜಿಲ್ಲೆಗೆ ಬಂದು ತಮ್ಮ ಹಕ್ಕನ್ನು ಚಲಾಯಿಸಲಿ.

ಕೊಡಗಿನ ಅನೇಕ ಬುದ್ಧಿವಂತರೆನಿಸಿದವರು ಮತದಾನ ಮಾಡದೆ ತಮ್ಮ ಹಕ್ಕನ್ನು ಚಲಾಯಿಸದೆ ತಮಗೆ ತಾವೇ ವಂಚಿಸಿಕೊಳ್ಳದಿರಲಿ. ಆ ದಿನವಾದರೂ ತಮ್ಮ ಅಭಿಪ್ರಾಯಗಳನ್ನು ಸಾಕಾರಗೊಳಿಸಿಕೊಳ್ಳ್ಳಲಿ ಎಂಬದು ‘ಶಕ್ತಿ’ಯ ಹಾರೈಕೆ, ಬಯಕೆ.

-ಜಿ. ರಾಜೇಂದ್ರ