ಮಡಿಕೇರಿ: ಹೊದ್ದೂರು ಗ್ರಾ.ಪಂ. ವ್ಯಾಪ್ತಿಯ ಪಾಲೇಮಾಡಿ ನಲ್ಲಿ ನೆಲೆಸಿರುವ ನಿವಾಸಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿರುವ ಬಹುಜನ ಕಾರ್ಮಿಕ ಸಂಘದ ಅಧ್ಯಕ್ಷ ಕೆ. ಮೊಣ್ಣಪ್ಪ ವೈಫಲ್ಯಗಳನ್ನು ಖಂಡಿಸಿ ಮುಂಬರುವ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸಲು ಅಲ್ಲಿನ ನಿವಾಸಿಗಳು ನಿರ್ಧರಿಸಿದ್ದಾರೆ ಎಂದು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯ ಒಳಗಾಗಿ ಜಿಲ್ಲಾಡಳಿತ ಪಾಲೇಮಾಡಿನ ನಿವಾಸಿಗಳಿಗೆ ಹಕ್ಕುಪತ್ರ ನೀಡಬೇಕು, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಮತ್ತು ಸ್ಮಶಾನ ಜಾಗಕ್ಕೆ ಸಂಬಂಧಿಸಿದ ಗೊಂದಲಗಳನ್ನು ನಿವಾರಿಸಬೇಕು. ತಪ್ಪಿದಲ್ಲಿ ಚುನಾವಣೆಯನ್ನು ‘ಕಪ್ಪು ಪಟ್ಟಿ’ ಧರಿಸಿ ಬಹಿಷ್ಕರಿಸುವದಲ್ಲದೆ, ಹೊದ್ದೂರು ವಾಟೆಕಾಡು ಶಾಲೆಯ ಮತಗಟ್ಟೆಯಲ್ಲಿ ಮತದಾನಕ್ಕೂ ಅವಕಾಶ ನೀಡುವದಿಲ್ಲ ಎಂದು ಎಚ್ಚರಿಕೆ ನೀಡಿದರು. ಕಾನೂನು ಉಲ್ಲಂಘನೆಯಾದರೆ, ಇದಕ್ಕೆ ಜಿಲ್ಲಾಡಳಿತ ಮತ್ತು ಕಂದಾಯ ಇಲಾಖೆಯ ಕಾರ್ಯವೈಫಲ್ಯಗಳೇ ನೇರ ಕಾರಣವಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಕಂದಾಯ ಸಚಿವರ ನಿರ್ದೇಶನದಂತೆ 94ಸಿ ಯಡಿ ಹಕ್ಕುಪತ್ರ ವಿತರಣೆಯನ್ನು ಮಾರ್ಚ್ ತಿಂಗಳ ಒಳಗಾಗಿ ಪೂರ್ಣಗೊಳಿಸಬೇಕಿತ್ತು. ಆದರೆ, ಪಾಲೇಮಾಡುವಿನ 260 ಕುಟುಂಬಗಳ ಪೈಕಿ 90 ಮಂದಿಯಿಂದ ಮಾತ್ರ 94 ಸಿ ಅರ್ಜಿಯಂತೆ ಕಂದಾಯ ಪಾವತಿಸಿಕೊಳ್ಳಲಾಗಿದೆ. ಉಳಿದ 170ಕ್ಕೂ ಹೆಚ್ಚಿನ ಮಂದಿಯ 94ಸಿ ಅರ್ಜಿಗೆ ಯಾವದೇ ಸ್ಪಂದನ ದೊರಕಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

ಬಹುಜನ ಕಾರ್ಮಿಕ ಸಂಘದ ಕಾರ್ಯದರ್ಶಿ ಎಂ.ಎಸ್. ಆನಂದ ಮಾತನಾಡಿ, ಪಾಲೇಮಾಡು ನಿವಾಸಿಗಳು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಲು ಜಿಲ್ಲಾಡಳಿತವೇ ನೇರ ಕಾರಣವೆಂದು ಆರೋಪಿಸಿದರು. ಹೊದ್ದೂರು ಗ್ರಾ.ಪಂ. ಉಪಾಧ್ಯಕ್ಷೆ ಕುಸುಮಾವತಿ ಮಾತನಾಡಿ, ಪಾಲೇಮಾಡು ಪೈಸಾರಿ ನಿವಾಸಿಗಳ ಸಂಕಷ್ಟಕ್ಕೆ ಆಡಳಿತ ವ್ಯವಸ್ಥೆ ಸ್ಪಂದಿಸುತ್ತಿಲ್ಲವೆಂದು ಬೆÉೀಸರ ವ್ಯಕ್ತಪಡಿಸಿದರು.