ಸೋಮವಾರಪೇಟೆ,ಏ.6: ಕೊಡಗು ಮೂಲದ ಪೊಲೀಸ್ ಠಾಣಾಧಿಕಾರಿಯೊಬ್ಬರು ಮಂಗಳೂರಿನಲ್ಲಿ ಚುನಾವಣಾ ಕಣಕ್ಕೆ ಇಳಿದಿದ್ದು, ಈಗಾಗಲೇ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.

ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಸಮೀಪದ ದುಂಡಳ್ಳಿ ಗ್ರಾ.ಪಂ. ವ್ಯಾಪ್ತಿಯ ಮಾದ್ರೆ ಗ್ರಾಮದ ಚಂದ್ರಶೇಖರ್-ಹೇಮಲತಾ ಅವರ ಪುತ್ರ, ಕಳೆದ ಆರೂವರೆ ವರ್ಷದಿಂದ ಪೊಲೀಸ್ ಸೇವೆಯಲ್ಲಿರುವ ಎನ್.ಸಿ. ಮದನ್ ಖಾಕಿ ಕಳಚಿಟ್ಟು ಖಾದಿ ತೊಟ್ಟಿದ್ದಾರೆ. ಪ್ರಸ್ತುತ ಬಜ್ಪೆ ಪೊಲೀಸ್ ಠಾಣೆಯಲ್ಲಿ ಠಾಣಾಧಿಕಾರಿಯಾಗಿದ್ದವರು ಇತ್ತೀಚೆಗಷ್ಟೇ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ.

ಪೊಲೀಸ್ ಠಾಣಾಧಿಕಾರಿಯಾಗಿ ನೇರ ನೇಮಕಾತಿಯಾಗಿರುವ ಮದನ್ ಅವರು ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸುವ ಮನಸ್ಸು ಹೊಂದಿದ್ದು, ಈಗಾಗಲೇ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಇವರೊಂದಿಗೆ ಪ್ರಚಾರ ಕಾರ್ಯಕ್ಕೆ ನೆರವಾಗಲೆಂದು ಶನಿವಾರಸಂತೆ ಭಾಗದಿಂದ 25ಕ್ಕೂ ಅಧಿಕ ಯುವಕರು ಮಂಗಳೂರು ತಲಪಿದ್ದು, ಮದನ್ ಅವರ ಪರ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ.

ಭಾರತೀಯ ಜನತಾ ಪಾರ್ಟಿಯಿಂದ ಟಿಕೇಟ್ ಆಕಾಂಕ್ಷಿಯಾಗಿರುವ ಮದನ್, ಈ ಬಗ್ಗೆ ಬಹಿರಂಗವಾಗಿ ಒಪ್ಪಿಕೊಂಡಿಲ್ಲವಾದರೂ ಒಂದು ವೇಳೆ ಟಿಕೇಟ್ ಲಭಿಸದಿದ್ದರೂ ಪಕ್ಷೇತರರಾಗಿ ಸ್ಪರ್ಧೆ ಮಾಡುವದು ಖಚಿತ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.

ಮಂಗಳೂರು ದಕ್ಷಿಣ ಕ್ಷೇತ್ರದಿಂದ ಬಿಜೆಪಿಯ ಪ್ರಬಲ ಟಿಕೇಟ್ ಆಕಾಂಕ್ಷಿಯಾಗಿ ಯೋಗೇಶ್ ಭಟ್, ಕಾಂಗ್ರೆಸ್‍ನಿಂದ ಹಾಲಿ ಶಾಸಕ ಲೋಬೋ ಅವರುಗಳಿದ್ದು, ಇವರುಗಳ ನಡುವೆ ಕೊಡಗಿನ 31 ವರ್ಷದ ಯುವ ಪೊಲೀಸ್ ಅಧಿಕಾರಿ(ನಿವೃತ್ತ) ಹೋರಾಟಕ್ಕೆ ಅಣಿಯಾಗಿದ್ದಾರೆ.

ಕರ್ತವ್ಯದಲ್ಲೂ ನಿಷ್ಠೆ ಹೊಂದಿದ್ದ ಮದನ್ ಅವರ ರಾಜೀನಾಮೆಯನ್ನು ಅಂಗೀಕರಿಸಲು ಹಿರಿಯ ಪೊಲೀಸ್ ಅಧಿಕಾರಿಗಳೂ ವಿಳಂಬ ಮಾಡಿದ್ದು, ನಿಷ್ಠಾವಂತರ ಸೇವೆ ಪೊಲೀಸ್ ಇಲಾಖೆಗಿದೆ; ಮತ್ತೊಮ್ಮೆ ಯೋಚಿಸಿ ಎಂದು ಮನಪರಿವರ್ತನೆಗೆ ಮುಂದಾಗಿದ್ದರೂ ಪ್ರಯೋಜನವಾಗಿಲ್ಲ. ಮಂಗಳೂರು ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್ ಮತ್ತು ಡಿಸಿಪಿ ಅವರುಗಳ ಪ್ರಯತ್ನ ಸಫಲವಾಗದ ಹಿನ್ನೆಲೆ ಮದನ್ ಅವರ ರಾಜೀನಾಮೆ ಅಂಗೀಕಾರಗೊಂಡಿದೆ.