ಕೂಡಿಗೆ, ಏ. 4: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತ ಚಲಾವಣೆ ಮಾಡುವ ಮೂಲಕ ಉತ್ತಮ ಜನ ಪ್ರತಿನಿಧಿಯನ್ನು ಆಯ್ಕೆ ಮಾಡುವದು ನಮ್ಮ ಆದ್ಯ ಕರ್ತವ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ವಿಭಾಗದ ಕುಲಸಚಿವ ಪ್ರೊ.ಎ.ಎಂ.ಖಾನ್ ಹೇಳಿದರು.

ಚಿಕ್ಕ ಅಳುವಾರದಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ಜ್ಞಾನ ಕಾವೇರಿ, ಸ್ನಾತಕೋತ್ತರ ಕೇಂದ್ರ ಹಾಗೂ ಮಂಗಳ ಅಲ್ಯುಮಿನಿ ಅಸೋಸಿಯೇಷನ್ ಇವರುಗಳ ಸಹಯೋಗದೊಂದಿಗೆ ನಡೆದ ಮತದಾನದ ಮಹತ್ವ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿದ ಅವರು, ಸದೃಢ ಪ್ರಜಾಪ್ರಭುತ್ವದ ನಿರ್ಮಾಣದಲ್ಲಿ ಸಮರ್ಥ ಜನಪ್ರತಿನಿಧಿಯನ್ನು ಅತ್ಯಂತ ಜಾಗೃತಿಯಿಂದ ಮತ ಚಲಾವಣೆ ಮಾಡುವ ಮೂಲಕ ಆಯ್ಕೆ ಮಾಡುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಮೇಲಿದೆ. ನಿಮ್ಮ ಮತ ನಿಮ್ಮ ಹಕ್ಕು ಹಾಗಾಗಿ ಯಾವದೇ ಆಸೆ ಆಮಿಷ ಗಳಿಗೆ ಒಳಗಾಗದೆ ಮತದಾನ ಮಾಡಿ. ಧರ್ಮ ಆಥವಾ ಜಾತಿ ಆಧಾರದ ಮೇಲೆ ಜನಪ್ರತಿನಿಧಿಯನ್ನು ಆಯ್ಕೆ ಮಾಡುವದಕ್ಕಿಂತ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಕ್ಷೇತ್ರದಲ್ಲಿ ಉತ್ತಮ ಆಡಳಿತ ನೀಡುವಂತಹ ಸಮರ್ಥ ಆಡಳಿತಗಾರನ ಆಯ್ಕೆ ಮಾಡುವದು ಸೂಕ್ತ ಎಂದರು.

ಮಂಗಳೂರು ವಿಶ್ವವಿದ್ಯಾನಿಲಯ ಮಂಗಳ ಅಲ್ಯುಮಿನಿ ಅಸೋಸಿಯೇಷ ನ್‍ನ ಅಧ್ಯಕ್ಷ ದಿನೇಶ್‍ಕುಮಾರ್ ಆಳ್ವ ಮಾತನಾಡಿ, ವಿದ್ಯಾರ್ಥಿಗಳು ಹಾಗೂ ಯುವ ಜನತೆ ಸೇರಿದಂತೆ ದೇಶದ ಎಲ್ಲರೂ ಪ್ರಜಾಪ್ರಭುತ್ವದ ಭದ್ರ ಬುನಾದಿಗೆ ಹಾಗೂ ದೇಶದ ಸಮಗ್ರ ಅಭಿವೃದ್ಧಿಗೆ ಮತದಾನದ ಹಕ್ಕು ಚಲಾವಣೆ ಬಹುಮುಖ್ಯ. ಈ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇಂತಹ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಮಂಗಳ ಅಲ್ಯುಮಿನಿ ಅಸೋಸಿ ಯೇಷನ್‍ನ ಸಂಚಾಲಕ ಮಧು ಸೂದನ ಭಟ್, ಉಪಾಧ್ಯಕ್ಷ ಸದಾನಂದಶೆಟ್ಟಿ ಮಾತನಾಡಿದರು. ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ.ಪಿ.ಎಲ್. ಧರ್ಮ ಪ್ರಾಸ್ತಾವಿಕ ನುಡಿಗಳನ್ನಾಡಿ ದರು. ಕಾರ್ಯಕ್ರಮವನ್ನು ಕನ್ನಡ ಉಪನ್ಯಾಸಕ ಜûಮೀರ್ ಅಹಮದ್, ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿ ನಿರಂಜನ್ ಹಾಗೂ ಕನ್ನಡ ಉಪನ್ಯಾಸಕ ಡಾ.ಮಹಾಂತೇಶ ಪಾಟೀಲ ನಿರ್ವಹಿಸಿದರು. ಕಾರ್ಯ ಕ್ರಮದಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಉಪನ್ಯಾಸಕರು, ಆಡಳಿತ ವೃಂದ ಹಾಗೂ ವಿದ್ಯಾರ್ಥಿಗಳು ಇದ್ದರು.