ಮಡಿಕೇರಿ, ಏ.4 : ಭಾರತೀಯ ಜನತಾ ಪಾರ್ಟಿಯ ನಿಷ್ಟಾವಂತ ಹಾಗೂ ಅತ್ಯಂತ ಹಿರಿಯ ಕಾರ್ಯಕರ್ತನಾಗಿರುವ ನಾನು ಪಕ್ಷಕ್ಕೆ ಎಂದಿಗೂ ದ್ರೋಹ ಬಗೆದಿಲ್ಲವೆಂದು ಸ್ಪಷ್ಟಪಡಿಸಿರುವ ಸೋಮವಾರಪೇಟೆ ತಾಲೂಕು ಪಂಚಾಯ್ತಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ, ತಾನು ಬೆಳೆಸಿದ ವ್ಯಕ್ತಿ ತನಗೆ ನೋಟೀಸ್ ನೀಡಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ.ಭಾರತೀಶ್ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ಬಿ. ಭಾರತೀಶ್ ಅವರನ್ನು ಬಿಜೆಪಿ ಜಿಲ್ಲಾಧ್ಯಕ್ಷರೆಂದು ತಾನು ಒಪ್ಪಿಕೊಳ್ಳುವದಿಲ್ಲವೆಂದು ತಿರುಗೇಟು ನೀಡಿದರು. ಜಿಲ್ಲೆಯಲ್ಲಿ ಸಾಕಷ್ಟು ಹಿರಿಯ ಕಾರ್ಯಕರ್ತರಿದ್ದಾರೆ; ತಾನು ಕೂಡ ಕಳೆದ 41 ವರ್ಷಗಳಿಂದ ಬಿಜೆಪಿಗಾಗಿ ದುಡಿದಿದ್ದೇನೆ; ಬಿ.ಬಿ.ಭಾರತೀಶ್ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ಮಾಡಿದ್ದು ಯಾರು ಎಂದು ಪ್ರಶ್ನಿಸಿದರು. ತಾನು ಎಂದಿಗೂ ಪಕ್ಷದ ವಿರುದ್ಧವಾಗಿ ಮಾತನಾಡಿಲ್ಲ. ಆದರೂ, ತನ್ನ ಹೇಳಿಕೆ ಬಗ್ಗೆ ಪಕ್ಷದೊಳಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಆದರೆ, ಏಕಾಏಕಿ ಪತ್ರಿಕೆಗಳ ಮೂಲಕ ನೋಟೀಸ್ ಜಾರಿ ಮಾಡಿ ಮನೆಯ ಜಗಳವನ್ನು ಬಯಲಿಗೆ ತಂದಿದ್ದಾರೆ. ನನಗೆ ಬಿಜೆಪಿ ನೋಟೀಸ್ ನೀಡಿಲ್ಲ ಬದಲಿಗೆ ಭಾರತೀಶ್ ನೀಡಿದ್ದಾರೆ ಎಂದು ಮಣಿ ಉತ್ತಪ್ಪ ಆರೋಪಿಸಿದರು.

ಭಾರತೀಶ್ ಅವರು ಪಕ್ಷದೊಳಗೆ ಮಾಡಿರುವ ತಪ್ಪುಗಳ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದೇನೆ; ವಿಧಾನಸಭಾ ಚುನಾವಣೆಯೊಳಗೆ ಭಾರತೀಶ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಮಣಿ ಉತ್ತಪ್ಪ ಒತ್ತಾಯಿಸಿದರು.

ಆರ್‍ಎಸ್‍ಎಸ್ ಹೆತ್ತಮ್ಮ

ರಾಷ್ಟ್ರೀಯ ಸ್ವಯಂ ಸೇವಕ ಸಂಘ ನನಗೆ ಹೆತ್ತಮ್ಮನಿದ್ದಂತೆ. ಆರ್‍ಎಸ್‍ಎಸ್ ಬಗ್ಗೆ ನಾನು ಮಾತನಾಡಿದ್ದೇನೆ ಎನ್ನುವ ಕಾರಣಕ್ಕೆ ಕೆಲವರು ಬೆದರಿಕೆ ಕರೆ ಮಾಡಿದ್ದರು. ಹೆತ್ತಮ್ಮನಿಗೆ ತೊಂದರೆಯಾಗಿದೆ ಯೆಂದು ತಿಳಿದು ನಾನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕ್ಷಮೆ ಕೋರಿದ್ದೇನೆ ಎಂದು ಸ್ಪಷ್ಟಪಡಿಸಿದರು. ಇದೇ ಸಂದರ್ಭ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ.ಭಾರತೀಶ್ ಅವರಿಗೆ ಏಳು ಪ್ರಶ್ನೆಗಳನ್ನು ನೀಡಿರುವ ಮಣಿ ಉತ್ತಪ್ಪ, ಇವುಗಳಿಗೆ ಉತ್ತರಿಸಲು ಸಾಧ್ಯವಾಗ ದಿದ್ದಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಒತ್ತಾಯಿಸಿದರು.

7 ಪ್ರಶ್ನೆಗಳು

ಗುಡ್ಡೆಹೊಸೂರು ಜಿ.ಪಂ. ಕ್ಷೇತ್ರದಲ್ಲಿ ಲೋಕೇಶ್ ಕುಮಾರ್ ಸೋಲಿಗೆ ಮತ್ತು ಲತೀಫ್ ಗೆಲುವಿಗೆ ಯಾರು ಕಾರಣ? ಇಲ್ಲಿ ನಿಮ್ಮ ಸ್ವಾಮಿ ನಿಷ್ಠೆ ಎಲ್ಲಿಗೆ ಹೋಗಿತ್ತು? ಸುಂಟಿಕೊಪ್ಪ ಕ್ಷೇತ್ರದಲ್ಲಿ ಬಿಜೆಪಿಯ ರಮ್ಯ ಅವರನ್ನು ಬಿಟ್ಟು ಕಾಂಗ್ರೆಸ್‍ನ ಕೆ.ಪಿ.ಚಂದ್ರಕಲಾ ಅವರನ್ನು ಗೆಲ್ಲಿಸಲು ಸಹಕಾರ ನೀಡಿದಾಗ ನಿಮ್ಮ ಸ್ವಾಮಿ ನಿಷ್ಠೆ ಎಲ್ಲಿಗೆ ಹೋಗಿತ್ತು? ತಾವು ಬಿಜೆಪಿ ಅಧ್ಯಕ್ಷರಾಗಿದ್ದುಕೊಂಡು ಚುನಾವಣಾ ಟಿಕೆಟ್ ಕೇಳುವದು ಸರಿಯೇ? ಸಂವಾದ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರಿಗೇ ಇನ್ನೂ ಟಿಕೆಟ್ ಖಾತ್ರಿಯಾಗಿಲ್ಲವೆಂದು ಹೇಳುವ ಮೂಲಕ ಪಕ್ಷಕ್ಕೆ ಅಗೌರವ ತೋರಿರುವ ನಿಮ್ಮ ಸ್ವಾಮಿ ನಿಷ್ಠೆ ಎಷ್ಟು ದೊಡ್ಡದು? ಚೆಟ್ಟಳ್ಳಿಯ ತೀರ್ಥ ಕುಮಾರ್ ಅವರನ್ನು ಗ್ರಾ.ಪಂ ಚುನಾವಣೆಯಲ್ಲಿ 1 ಮತದಿಂದ ಗೆಲ್ಲ್ಲಿಸಿ ನನ್ನನ್ನು ಸೋಲಿಸುವಾಗ ನಿಮಗೆ ಸ್ವಾಮಿ ನಿಷ್ಠೆ ಇರಲಿಲ್ಲವೆ, ಇಷ್ಟೆಲ್ಲ ಬೇಜವಾಬ್ದಾರಿತನದಿಂದ ತಾವು ನಡೆದುಕೊಂಡಿರುವಾಗ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವದು ಸೂಕ್ತವಲ್ಲವೆ ಎಂದು ಬಲ್ಲಾರಂಡ ಮಣಿ ಉತ್ತಪ್ಪ ಪ್ರಶ್ನಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಜನಪರ ಹೋರಾಟ ಸಮಿತಿಯ ಖಜಾಂಚಿ ಧನಂಜಯ್ ಉಪಸ್ಥಿತರಿದ್ದರು.