ಸೋಮವಾರಪೇಟೆ, ಏ. 3: ಕಳೆದೆರಡು ದಿನಗಳಲ್ಲಿ ಸೋಮವಾರಪೇಟೆ ಭಾಗದಲ್ಲಿ ಭಾರೀ ಗಾಳಿಯೊಂದಿಗೆ ವರ್ಷಾಧಾರೆ ಯಾಗಿದ್ದು, ನಿನ್ನೆ ಸಂಜೆಯಿಂದ ರಾತ್ರಿವರೆಗೆ ಸುರಿದ ಮಳೆ-ಗಾಳಿಗೆ ಒಂದು ಮನೆ ಸಂಪೂರ್ಣ ಜಖಂಗೊಂಡಿದ್ದರೆ, ಮತ್ತೊಂದು ಮನೆಗೆ ಭಾಗಶಃ ಹಾನಿಯಾಗಿದೆ.

ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಸಮೀಪದ ಬೇಳೂರು ಗ್ರಾ.ಪಂ. ವ್ಯಾಪ್ತಿಯ ಕರ್ಕಳ್ಳಿ ಗ್ರಾಮದಲ್ಲಿ ಸುಂದರ ಎಂಬವರ ಮನೆ ಛಾವಣಿ ಸಂಪೂರ್ಣ ಹಾನಿಗೊಳಗಾಗಿದ್ದು, ಮನೆಯ ಒಂದು ಭಾಗದಲ್ಲಿ ಬಾಡಿಗೆಗಿರುವ ಸಾರಮ್ಮ ಎಂಬವÀರು ಅಡುಗೆ ಮಾಡುತ್ತಿದ್ದ ಸಂದರ್ಭ ಛಾವಣಿಗಳು ಮನೆಯೊಳಗೆ ಬಿದ್ದಿದ್ದು, ಅದೃಷ್ಟವಶಾತ್ ಹೆಚ್ಚಿನ ಅನಾಹುತ ತಪ್ಪಿದೆ.

ಮನೆಯೊಳಗಿದ್ದ ಸಾರಮ್ಮ ಪ್ರಾಣಾಪಾಯದಿಂದ ಪಾರಾಗಿದ್ದು, ಮಳೆಯಿಂದಾಗಿ ರಾತ್ರಿಯಿಡಿ ಪಕ್ಕದ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಇದರೊಂದಿಗೆ ಮಂಜುಳ ಎಂಬವರ ಮನೆಯ ಶೀಟ್‍ಗಳೂ ಸಹ ಹಾನಿಗೀಡಾಗಿದ್ದು ಮನೆಯೊಳಗೆ ಆಟವಾಡುತ್ತಿದ್ದ ಮಗು ಅಪಾಯದಿಂದ ಪಾರಾಗಿದೆ. ಮಳೆಯಿಂದ ಮನೆಯೊಳಗಿನ ವಸ್ತುಗಳು ಹಾನಿಯಾಗಿವೆ.

ಘಟನಾ ಸ್ಥಳಕ್ಕೆ ಬೇಳೂರು ಗ್ರಾಮ ಪಂಚಾಯ್ತಿ ಸದಸ್ಯರುಗಳಾದ ಯೋಗೇಂದ್ರ, ಸುಭದ್ರ ಕುಮಾರಿ, ವೀಣಾ, ಗ್ರಾಮದ ಪ್ರಮುಖ ಎಂ.ವೆಂಕಪ್ಪ ಅವರುಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಂಪೂರ್ಣ ಮನೆ ಹಾನಿಗೀಡಾಗಿರುವ ಸುಂದರ್ ರವರಿಗೆ 3 ಮಂದಿ ಸೇರಿ 15 ಸಾವಿರ ನಗದು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಗ್ರಾಮ ಲೆಕ್ಕಾಧಿಕಾರಿ ಮೋಹನ್ ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿದ್ದು, ಹೆಚ್ಚಿನ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ.