ಮಡಿಕೇರಿ, ಏ. 3: ವಿವಿಧ ಕ್ಷೇತ್ರಗಳಲ್ಲಿ ದುಡಿಯುವ ವರ್ಗಗಳಿಂದ ಭವಿಷ್ಯ ನಿಧಿಗಾಗಿ ಸಂದಾಯ ಮಾಡುವ ಹಣ, ಮಧ್ಯವರ್ತಿಯೊಬ್ಬರ ವಂಚನೆಯಿಂದಾಗಿ ಕೇಂದ್ರ ಭವಿಷ್ಯ ನಿಧಿ ಇಲಾಖೆಗೆ ಸಲ್ಲಿಕೆಯಾಗದೆ ದುರುಪಯೋಗಗೊಂಡಿರುವದು ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಇಲ್ಲಿನ ನ್ಯಾಯಾಲಯದಲ್ಲಿ ಎರಡು ಸಹಕಾರ ಸಂಸ್ಥೆಗಳ ಉದ್ಯೋಗಿಗಳು ಮೊಕದ್ದಮೆ ದಾಖಲಿಸಿದ್ದಾರೆ.ಕೇಂದ್ರ ಸರಕಾರದ ಭವಿಷ್ಯ ನಿಧಿ ಇಲಾಖೆಯಲ್ಲಿ ಕಚೇರಿ ನಿರೀಕ್ಷಕರಾಗಿ ಮಡಿಕೇರಿ ಶಾಖೆಯಲ್ಲಿ ಕರ್ತವ್ಯನಿರತರಾಗಿದ್ದ ವ್ಯಕ್ತಿ, ಮಧ್ಯವರ್ತಿಯೊಬ್ಬರನ್ನು ಹಣ ಸಂದಾಯ ಮಾಡಲು ಪರಿಚಯಿಸುವದರೊಂದಿಗೆ, ಆ ವ್ಯಕ್ತಿ ತಮ್ಮಿಂದ ಹಣ ಪಡೆದುಕೊಂಡು ಇಲಾಖೆಗೆ ಸಲ್ಲಿಕೆ ಮಾಡದೆ ಮೋಸಗೊಳಿಸಿರುವದಾಗಿ ದೂರಿನಲ್ಲಿ ಆರೋಪಿಸಲಾಗಿದೆ.

ಆ ಪ್ರಕಾರ ಹೊದ್ದೂರು ಕೃಷಿ ಪತ್ತಿನ ಸಹಕಾರ ಸಂಘದ ಉದ್ಯೋಗಿಗಳ ಭವಿಷ್ಯನಿಧಿ ಹಣ ರೂಪಾಯಿ 3,79,680 ಮೊತ್ತವನ್ನು, ಭವಿಷ್ಯ ನಿಧಿ ಇಲಾಖೆಯ ಮಡಿಕೇರಿ ಶಾಖೆಯ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದರೆನ್ನಲಾದ ಎಂ. ವರ್ಮ ಎಂಬ ವ್ಯಕ್ತಿ ವಂಚಿಸಿರುವದಾಗಿ ಪ್ರಕರಣ ದಾಖಲಾಗಿದೆ.

ಅಲ್ಲದೆ ಮದೆನಾಡು ಕೃಷಿಪತ್ತಿನ ಸಹಕಾರ ಸಂಸ್ಥೆಯ ಉದ್ಯೋಗಿಗಳಿಗೆ ಸಂಬಂಧಿಸಿದ ಭವಿಷ್ಯ ನಿಧಿ ಹಣ ರೂ. 3,41,266 ಮೊತ್ತವೂ ಕೂಡ, ಮಡಿಕೇರಿ ಕಚೇರಿ ಮೂಲಕ ಸಲ್ಲಿಕೆಯಾಗಬೇಕಿದ್ದು, ಈ ಮೊತ್ತವನ್ನು ಕೂಡ ಮಧ್ಯವರ್ತಿ ವರ್ಮ ದುರುಪಯೋಗ ಮಾಡಿಕೊಂಡಿರುವದಾಗಿ ಆರೋಪಿಸಲಾಗಿದೆ.

ಈ ವಂಚನೆಗೆ ಈ ಹಿಂದೆ ಮಡಿಕೇರಿಯ ಭವಿಷ್ಯ ನಿಧಿ ಕಚೇರಿ ನಿರೀಕ್ಷಕರಾಗಿದ್ದು, ಪ್ರಸಕ್ತ ಹಾಸನ ಶಾಖೆಗೆ ವರ್ಗಾವಣೆಗೊಂಡಿರುವ ಅಧಿಕಾರಿಯೂ ಕಾರಣರಾಗಿದ್ದಾರೆಂದು ಸಹಕಾರ ಸಂಸ್ಥೆಗಳ ದೂರುದಾರರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಉಭಯ ಸಹಕಾರ ಸಂಸ್ಥೆಗಳ ಉದ್ಯೋಗಿಗಳ ದೂರನ್ನು ಆಲಿಸಿರುವ ಇಲ್ಲಿನ ನ್ಯಾಯಾಲಯವು, ಪೊಲೀಸ್ ಇಲಾಖೆಗೆ ಈ ಸಂಬಂಧ ನಿರ್ದೇಶನ ನೀಡಿದ್ದು, ಭವಿಷ್ಯ ನಿಧಿ ಇಲಾಖೆಯ ಮಡಿಕೇರಿ ಶಾಖೆಯ ಹಿಂದಿನ ನಿರೀಕ್ಷಕ ಹಾಗೂ ಮಧ್ಯವರ್ತಿ ವಿರುದ್ಧ ತನಿಖೆಗೆ ಸೂಚಿಸಿದೆ.

ನ್ಯಾಯಾಲಯದ ನಿರ್ದೇಶನದಂತೆ ಇದೀಗ ಮಡಿಕೇರಿ ಗ್ರಾಮಾಂತರ ಠಾಣೆ ಉಪ ನಿರೀಕ್ಷಕ ಚೇತನ್ ಅವರು, ಉಭಯ ಅರ್ಜಿದಾರರಿಂದ ಹೇಳಿಕೆಯನ್ನು ದಾಖಲಿಸಿಕೊಂಡು ಡಿವೈಎಸ್‍ಪಿ ಕೆ.ಎಸ್. ಸುಂದರರಾಜ್ ಮಾರ್ಗದರ್ಶನದಲ್ಲಿ ತನಿಖೆ ನಡೆಸುತ್ತಿದ್ದಾರೆ. ವಿಚಿತ್ರವೆಂದರೆ ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಮಾರು ರೂ. 7,20,946 ಮೊತ್ತ ವಂಚಿಸಿರುವ ಮಧ್ಯವರ್ತಿ ಕೆಲವು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಲದೆ, ಭವಿಷ್ಯ ನಿಧಿ ಇಲಾಖೆಗೆ ಫಲಾನುಭವಿಗಳು ತಮ್ಮ ಖಾತೆಯನ್ನು ‘ಆನ್‍ಲೈನ್’ ಮುಖಾಂತರ ನಿರ್ವಹಣೆಯೊಂದಿಗೆ ನೇರವಾಗಿ ಹಣವನ್ನು ಆ ಮೂಲಕವೇ ಸಂದಾಯ ಮಾಡಬೇಕಿತ್ತು.

ಹಾಗೆ ಮಾಡದೆ ಅನೇಕರು ಮೃತ ವ್ಯಕ್ತಿಗೆ ತಮ್ಮ ಭವಿಷ್ಯ ನಿಧಿಯನ್ನು ಮಾಸಿಕವಾಗಿ ಪ್ರತಿ ಹಂತದಲ್ಲಿ ನಗದು ರೂಪದಲ್ಲಿ ಅಥವಾ ಈ ವಂಚಿಸಿರುವ ವ್ಯಕ್ತಿ ಹೆಸರಿನಲ್ಲೇ ಚೆಕ್ ಮುಖಾಂತರ ನೀಡಿರುವದು ಬೆಳಕಿಗೆ ಬಂದಿದೆ. ಈ ಎಲ್ಲಾ ಹಿನ್ನೆಲೆಯೊಂದಿಗೆ ಭವಿಷ್ಯನಿಧಿ ವಂಚನೆ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದು, ಆ ಮೂಲಕ ನಿರ್ದೇಶನದಂತೆ ಪೊಲೀಸ್ ಇಲಾಖೆ ಕೈಗೊಂಡಿರುವ ತನಿಖೆ ಯಾವ ರೀತಿ ತಿರುವು ಪಡೆಯಲಿದೆ ಮತ್ತು ವಂಚನೆಗೊಳಗಾಗಿರುವವರಿಗೆ ನ್ಯಾಯ ದೊರಕಲಿದೆ ಎಂದು ಕಾದು ನೋಡಬೇಕಿದೆ.

ಮೇಲಿನ 2 ಪ್ರಕರಣವಲ್ಲದೆ, ಜಿಲ್ಲೆಯ ಇನ್ನು ಕೆಲವು ಕೃಷಿ ಪ್ರಾಥಮಿಕ ಪತ್ತಿನ ಸಹಕಾರ ಸಂಘಗಳು, ನಗರದಲ್ಲಿ ಅಧಿಕಾರಿಗಳ ಸಮೂಹದಿಂದ (ಮೊದಲ ಪುಟದಿಂದ) ನಡೆಯುತ್ತಿರುವ ಶಿಕ್ಷಣ ಸಂಸ್ಥೆಯೊಂದು ಸೇರಿದಂತೆ ಅನೇಕ ಕಾಫಿ ತೋಟಗಳ ಕಾರ್ಮಿಕರ ಭವಿಷ್ಯ ನಿಧಿಯನ್ನು ವ್ಯವಸ್ಥಿತವಾಗಿ ದುರುಪಯೋಗ ಎಸಗಿರುವ ಅಂಶ ಬಹಿರಂಗಗೊಂಡಿದೆ. ಈ ಬಗ್ಗೆ ವಂಚನೆಗೆ ಒಳಗಾಗಿರುವ ಸಂಘ ಸಂಸ್ಥೆಗಳ ಪ್ರಮುಖರು ಹಾಗೂ ಬೆಳೆಗಾರರು ಮತ್ತು ಉದ್ಯೋಗಿಗಳು ನಗರದ ಸಂಬಂಧಿಸಿದ ಕಚೇರಿ ಅಧಿಕಾರಿಗಳನ್ನು ಖುದ್ದು ಭೇಟಿ ಮಾಡಿ ವಿಚಾರಿಸಲಾಗಿ ಈ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸಿದರೆನ್ನಲಾಗಿದೆ.

ಈ ಕುರಿತು ‘ಶಕ್ತಿ’ ಸಂಬಂಧಿಸಿದ ಕಚೇರಿ ಅಧಿಕಾರಿಗಳಿಂದ ಪ್ರತಿಕ್ರಿಯೆ ಬಯಸಿದಾಗ, ಈ ಬಗ್ಗೆ ಮೈಸೂರು ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿಯಿಂದ ಮಾಹಿತಿ ಪಡೆದುಕೊಳ್ಳುವಂತೆ ಉತ್ತರ ನೀಡಿದ್ದಾರೆ. ಒಟ್ಟಿನಲ್ಲಿ ಭವಿಷ್ಯ ನಿಧಿ ವಂಚನೆ ಪ್ರಕರಣದಿಂದ ಅನೇಕ ಉದ್ಯೋಗಿಗಳು ಹಾಗೂ ತೋಟ ಮಾಲೀಕರು ಕಾರ್ಮಿಕ ಬಳಗ ಕಂಗಾಲಾಗಿದ್ದಾರೆ.

ಕೆಲವರು ಭವಿಷ್ಯ ನಿಧಿಯನ್ನು ದುರುಪಯೋಗಪಡಿಸಿಕೊಂಡ ವಿಷಯ ತಿಳಿದು, ಅನ್ಯ ಮಾರ್ಗವಿಲ್ಲದೆ ಆ ಮೊತ್ತವನ್ನು ಪುನಃ ತಾವೇ ಭರಿಸಿರುವದಾಗಿಯೂ ‘ಶಕ್ತಿ’ಗೆ ಮಾಹಿತಿ ಲಭಿಸಿದೆ. ಒಟ್ಟಿನಲ್ಲಿ ಆಧುನಿಕ ತಂತ್ರಜ್ಞಾನ ಬಳಕೆ ಕೆಲವರಿಗೆ ಎಟಿಎಂ ಮುಖಾಂತರ ಬ್ಯಾಂಕ್‍ಗಳಲ್ಲಿ ವಂಚಿಸಲು ದಾರಿಯಾದರೆ, ದುಡಿಯುವ ವರ್ಗದ ಭವಿಷ್ಯನಿಧಿಗೂ ಇಲಾಖೆಯ ಮೂಗಿನಡಿಯಲ್ಲೇ ವಂಚನೆ ಸಾಧ್ಯವಾಗಿರುವದು ಆಶ್ಚರ್ಯ ಮೂಡಿಸಿದೆ.