ಮಡಿಕೇರಿ, ಏ.2: ಕೊಡಗಿನ ಮೂಲಕ ಹಾದು ಹೋಗುವ ಮೈಸೂರು-ತಲಚೇರಿ ರೈಲು ಮಾರ್ಗದ ಯೋಜನೆ ಇಲ್ಲವೆಂದು ಕೆಲವರು ಜನರ ಹಾದಿ ತಪ್ಪಿಸುವ ಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಕೊಡಗು ವನ್ಯ ಜೀವಿ ಸಂಘ, ಯೋಜನೆ ಜಾರಿಗೆ ಕೇರಳ ಸರ್ಕಾರ ಕರ್ನಾಟಕದ ಮೇಲೆ ಒತ್ತಡ ಹೇರುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಕೊಡಗಿನ ಜನ ಎಚ್ಚೆತ್ತುಕೊಳ್ಳಬೇಕೆಂದು ಕರೆ ನೀಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಕರ್ನಲ್ ಸಿ.ಪಿ. ಮುತ್ತಣ್ಣ, ಕೊಡಗಿನ ಜನ ನಿರ್ಲಕ್ಷ್ಯ ವಹಿಸಿದರೆ ರೈಲು ಮಾರ್ಗ ಅನುಷ್ಠಾನಗೊಳ್ಳುವದು ಖಚಿತವೆಂದು ಮುನ್ಸೂಚನೆ ನೀಡಿದರು. ಕಾವೇರಿ ಹುಟ್ಟುವ ಪವಿತ್ರ ಭೂಮಿ ಕೊಡಗಿನ ರಕ್ಷಣೆಗಾಗಿ ಎಲ್ಲರು ಒಗ್ಗಟ್ಟನ್ನು ಪ್ರದರ್ಶಿಸಬೇಕೇ ಹೊರತು ಕೊಳಕು ರಾಜಕಾರಣ ಮಾಡಬಾರದೆಂದು ಮನವಿ ಮಾಡಿದರು.

ಕೆಲವರು ಯೋಜನೆಯನ್ನು ಕೈಬಿಡಲಾಗಿದೆಯೆಂದು ಹೇಳಿಕೆ ನೀಡುತ್ತಿದ್ದಾರೆ. ಆದರೆ, ಸಂಘಕ್ಕೆ ಬಂದ ಮಾಹಿತಿ ಪ್ರಕಾರ ರೈಲು ಮಾರ್ಗ ನಿರ್ಮಾಣವಾಗಲೆÉೀಬೇಕೆಂದು ಕೇರಳ, ಕರ್ನಾಟಕದ ಮೇಲೆ ಒತ್ತಡ ಹೇರುತ್ತಿರುವದು ಕಂಡು ಬಂದಿದೆ. 2017 ಏಪ್ರಿಲ್ 17 ರಂದು ಕೇರಳ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿ ರೈಲು ಮಾರ್ಗಕ್ಕೆ ಅವಕಾಶ ಕೋರಿದ್ದಾರೆ. ಈ ಬಗ್ಗೆ ದಾಖಲೆ ಇದ್ದರೂ ರೈಲು ಮಾರ್ಗದ ಯೋಜನೆ ಇಲ್ಲವೆಂದು ಜನರ ಹಾದಿ ತಪ್ಪಿಸುತ್ತಿರುವದನ್ನು ಸಂಘ ಖಂಡಿಸುವದಾಗಿ ಕರ್ನಲ್ ಮುತ್ತಣ್ಣ ತಿಳಿಸಿದರು.

ಫೆಬ್ರವರಿ 18ರ ಮೈಸೂರು ರ್ಯಾಲಿಯ ನಂತರ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರನ್ನು ವೈಲ್ಡ್ ಲೈಫ್ ಫಸ್ಟ್ ಎಂಬ ಸಂಘಟನೆ ಭೇಟಿ ಮಾಡಿದೆ. ಆದರೆ, ಕೊಡಗು ವನ್ಯ ಜೀವಿ ಸಂಘ ಮತ್ತು ಕೊಡಗು ರೈಲ್ವೆ ವಿರೋಧಿ ಹೋರಾಟ ವೇದಿಕೆಯ ಗಮನಕ್ಕೆ ಈ ಭೇಟಿಯ ವಿಚಾರ ತಿಳಿದು ಬಂದಿಲ್ಲ. ವೈಲ್ಡ್ ಲೈಫ್ ಫಸ್ಟ್ ಸಂಘಟನೆ ನೀಡಿರುವ ಹೇಳಿಕೆ ಮತ್ತು ನಿಯೋಗ ಸಚಿವರ ಬಳಿ ತಿಳಿಸಿದ ವಿಚಾರಕ್ಕೆ ನಾವು ಜವಾಬ್ದಾರರಲ್ಲವೆಂದು ಕರ್ನಲ್ ಮುತ್ತಣ್ಣ ಸ್ಪಷ್ಟಪಡಿಸಿದರು.

ಪ್ರಮುಖರಾದ ರಾಯ್ ಬೋಪಣ್ಣ ಮಾತನಾಡಿ, ತಲಚೇರಿ ಮತ್ತು ಮೈಸೂರು ಭಾಗದಿಂದ ರೈಲು ಮಾರ್ಗವನ್ನು ನಿರ್ಮಿಸುತ್ತಾ ಬಂದು ಕೊನೆಯ ಗಳಿಗೆಯಲ್ಲಿ ಕೊಡಗಿನ ಪ್ರದೇಶದಲ್ಲಿ ರೈಲು ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ಸಾಧ್ಯತೆಗಳಿದೆ. ಇದೇ ಪ್ರಕಾರವಾಗಿ ಹೈಟೆನ್ಶನ್ ವಿದ್ಯುತ್ ಮಾರ್ಗದ ಕಾಮಗಾರಿಯೂ ನಡೆದಿತ್ತು ಎಂದು ಆತಂಕ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಜೆಫ್ರಿ ಮುತ್ತಣ್ಣ, ಟಾರ್ಲಿ ಬೆಳ್ಯಪ್ಪ ಹಾಗೂ ಕಲ್ಮಾಡಂಡ ನವೀನ್ ಬೆಳ್ಯಪ್ಪ ಉಪಸ್ಥಿತರಿದ್ದರು.