ಮಡಿಕೇರಿ, ಮಾ. 31: ನಗರದ ಟ್ರೈಕಲರ್ ಅಕಾಡೆಮಿ ವತಿಯಿಂದ ನಡೆದ ಮುಕ್ತ ಪ್ರವೇಶ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಸರಕಾರಿ ಸೇವೆಗಳಿಗೆ ನಿಯುಕ್ತಿಗೊಳ್ಳುವವರೆಗೆ ಹೆಚ್ಚಿನ ತರಬೇತಿ ಮತ್ತು ಅದಕ್ಕೆ ಸಂಬಂಧಪಟ್ಟ ಎಲ್ಲಾ ಖರ್ಚು ವೆಚ್ಚಗಳನ್ನು ಸಂಸ್ಥೆಯೇ ಭರಿಸಲಿದೆ ಎಂದು ಅಕಾಡೆಮಿಯ ತರಬೇತುದಾರ ಎ. ಅರ್ಜುನ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ. 4 ಮತ್ತು 11 ರಂದು ಟ್ರೈಕಲರ್ ಅಕಾಡೆಮಿ ವತಿಯಿಂದ ಮುಕ್ತ ಪ್ರವೇಶ ಸ್ಪರ್ಧಾತ್ಮಕ ಪರೀಕ್ಷೆಯನ್ನು ಆಯೋಜಿಸಲಾಗಿತ್ತು, ಮೊದಲನೆಯ ಸುತ್ತಿನಲ್ಲಿ 725 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ನಂತರ ಎರಡನೇ ಸುತ್ತಿನಲ್ಲಿ ಪ್ರವೇಶ ಪಡೆದ ನೂರು ವಿದ್ಯಾರ್ಥಿಗಳಲ್ಲಿ ಅತ್ಯುತ್ತಮ 12 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, ಈ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಎಲ್ಲಾ ಖರ್ಚನ್ನು ಸಂಸ್ಥೆ ಭರಿಸಲಿದೆ ಎಂದು ಮಾಹಿತಿ ನೀಡಿದರು.
ಎನ್.ಎಲ್. ತೇಜಸ್ವಿ, ಎ.ಎಸ್. ಕಶೀಫ ಫಿರ್ದೌಸ್, ಪಿ.ಆರ್. ಅವೀನ್, ಫರೀನ್ ರೆಹಮಾನ್, ಎಂ.ಬಿ. ಚರ್ಮಣ್ಣ, ಕೆ.ಜಿ. ದಿವಿಜ, ಪ್ರಿಯಾಂಕ, ಕೆ.ಆರ್. ಶೋಭಿತ, ಎಂ.ಎಸ್. ಸೌಸನ್, ವಿ.ಎಸ್. ಸ್ಮಿತ, ಎನ್.ಹೆಚ್. ಮಮತ ಹಾಗೂ ಡಿ.ಜೆ. ಲಿಪಿಶ್ರೀ ಆಯ್ಕೆಯಾದ ವಿದ್ಯಾರ್ಥಿಗಳು.
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಮಾತನಾಡಿ, ಕೊಡಗಿನಂತಹ ಪ್ರದೇಶದಲ್ಲಿ ಟ್ರೈಕಲರ್ ಅಕಾಡೆಮಿ ವಿದ್ಯಾರ್ಥಿಗಳಿಗೆ ಸಹಕಾರಿಯಾಗಿದ್ದು, ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಉತ್ತಮ ಅವಕಾಶವನ್ನು ಕಲ್ಪಿಸಿದೆ ಎಂದರು. ಸ್ಪರ್ಧಾತ್ಮಕ ಪರೀಕ್ಷೆ ಗಣಿತ ಹಾಗೂ ಪ್ರಬಂಧ ರೂಪದಲ್ಲಿದ್ದು, ನಮ್ಮ ತಕ್ಷಣದ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗಿದೆ. ಅಲ್ಲದೆ ಬಡ ವಿದ್ಯಾರ್ಥಿಗಳಿಗೆ ಹೆಚ್ಚು ಉತ್ತೇಜನ ನೀಡುವ ಮೂಲಕ ಬಡ ಕುಟುಂಬದ ವಿದ್ಯಾರ್ಥಿಗಳೂ ಐ.ಎ.ಎಸ್. ಐ.ಪಿ.ಎಸ್. ಸೇರಿದಂತೆ ಇತರ ವಿಷಯದ ಕುರಿತು ಆಸಕ್ತಿ ಹೊಂದುವಂತೆ ಸಂಸ್ಥೆ ಹಾಗೂ ತರಬೇತುದಾರರು ಮಾಡಿದ್ದಾರೆ ಎಂದು ವಿದ್ಯಾರ್ಥಿಗಳು ತೃಪ್ತಿ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ವಿದ್ಯಾರ್ಥಿಗಳಾದ ಎನ್.ಎಲ್. ತೇಜಸ್ವಿ, ಎ.ಎಸ್. ಕಶೀಫ ಫಿರ್ದೌಸ್, ಪ್ರಿಯಾಂಕ, ಎಂ.ಎಸ್. ಸೌಸನ್ ಹಾಗೂ ಎನ್.ಹೆಚ್. ಮಮತ ಉಪಸ್ಥಿತರಿದ್ದರು.