ಚೆಟ್ಟಳ್ಳಿ, ಮಾ. 31: ಆನೆಗಳ ಹಾವಳಿ ನಿಯಂತ್ರಣಕ್ಕೆ ಕೊಡಗಿನಲ್ಲಿ ಅರಣ್ಯ ಇಲಾಖೆ ಹಲವಾರು ನಿಯಂತ್ರಣ ಕ್ರಮವನ್ನು ಮಾಡುತಿದ್ದರೂ ಸಂಪೂರ್ಣ ಫಲಕಾರಿಯಾಗಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕೊಡಗಿನಲ್ಲೇ 4 ಹೆಣ್ಣಾನೆಗಳಿಗೆ ಜಿಪಿಎಸ್ ರೇಡಿಯೋ ಕಾಲರ್ ಅಳವಡಿಸಿ ಕಳೆದ ನಾಲಕ್ಕೈದು ದಿನಗಳಿಂದ ಆಕ್ಟಿವೇಟ್ ಮಾಡುವ ಮೂಲಕ ಆನೆಗಳ ಇರುವಿಕೆಯನ್ನು ಹಾಗೂ ನಿಂಯತ್ರಿಸಲು ಹೊಸ ಪ್ರಯತ್ನಕ್ಕೆ ಅರಣ್ಯ ಇಲಾಖೆ ಮುಂದಾಗಿದೆ..

ಎಂಡ್ರಾಯಿಡ್ ಪೋನ್‍ಗಳ ಮೂಲಕ ಜಿಯೋ ಟ್ರ್ಯಾಕರ್ ಆ್ಯಪ್‍ನ ಡೌನ್‍ಲೋಡ್ ಮಾಡಿಕೊಂಡು ಆಕ್ಟಿವೇಟ್ ಮಾಡಿ ಆನೆಗಳಿಗೆ ಅಳವಡಿಸಿದ ಜಿಪಿಎಸ್‍ನ ಪಾಸ್‍ವರ್ಡ್‍ಗಳನ್ನು ಹಾಕಿದಾಗ ಅನೆಗಳು ಇರುವ ಸ್ಥಳವನ್ನು ತೋರಿಸುವದು. ಇಂತಹ ಆ್ಯಪ್‍ಗಳನ್ನು ಬಳಸುವ ಮೂಲಕ ಆನೆಗಳ ಇರುವಿಕೆಯನ್ನು ಕೊಡಗಿನ ಅರಣ್ಯ ಅಧಿಕಾರಿಗಳು ಕಂಡುಹಿಡಿಯುತ್ತಿದ್ದಾರೆ. ಆದರೆ ಕೆಲವೊಂದು ರಾಷ್ಟ್ರ ಹಾಗೂ ರಾಜ್ಯಗಳಲ್ಲಿ ಸುಮಾರು ಹತ್ತು ವರ್ಷಗಳ ಹಿಂದಿನಿಂದಲೇ ಆನೆಗಳಿಗೆ ಜಿಪಿಎಸ್ ರೇಡಿಯೋ ಬಳಸಿ ಮಾಹಿತಿ ಪಡೆಯಲಾಗುತ್ತಿದೆ.

ವೀರಾಜಪೇಟೆ ವಲಯದಲ್ಲಿ ಸುಮಾರು ಮೂರು ತಿಂಗಳುಗಳ ಹಿಂದೆ ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸುವ ಬಗ್ಗೆ ಅಧಿಕಾರಿಗಳು ಚರ್ಚಿಸಿ ಒಂದು ಕಾಡಾನೆಗೆ ಅಳವಡಿಸಲಾಯಿತು. ಸ್ವಲ್ಪ ದಿನದಲ್ಲಿ ಕಾಡಾನೆಯಿಂದ ಅರಣ್ಯದೊಳಗೆ ಈ ಯಂತ್ರ ಬಿದ್ದು ಹೋದ ಬಗ್ಗೆ ಅಧಿಕಾರಿಗಳು ಹೇಳುತ್ತಾರೆ. ನಂತರದಲ್ಲಿ ನಾಲ್ಕು ರೇಡಿಯೋ ಕಾಲರ್‍ಗಳನ್ನು ತರಿಸಿ ತಿತಿಮತಿ, ಬಿಬಿಟಿಸಿ, ಚೆಟ್ಟಳ್ಳಿ ಸಮೀಪದ ಮೀನುಕೊಲ್ಲಿ ಸೇರಿ ಒಟ್ಟು ನಾಲ್ಕು ಕಾಡಾನೆಯ ತಂಡದ ಹೆಣ್ಣಾನೆಯನ್ನು ಗುರುತಿಸಿ ಕಳೆದೆರಡು ವಾರದ ಹಿಂದೆ ರೇಡಿಯೋ ಕಾಲರ್ ಅಳವಡಿಸಲಾಯಿತು.

ಅರಣ್ಯ ಅಧಿಕಾರಿಗಳು ಮೊಬೈಲ್‍ನಲ್ಲಿ ಜಿಪಿಎಸ್ ಆಕ್ಟಿವೇಟ್ ಮಾಡಿದಾಗ ಮ್ಯಾಪ್‍ನಲ್ಲಿ ರೇಡಿಯೋ ಕಾಲರ್ ಹಾಕಿದ ನಾಲ್ಕು ಕಾಡಾನೆಗಳ ಸ್ಥಳದ ಹೆಸರು ಹಾಗೂ ದಿಕ್ಕನ್ನು ತೋರಿ ಸುತ್ತಿದೆ ಎಂದು ವೀರಾಜಪೇಟೆ ವಲಯದ ಡಿಎಫ್‍ಓ ಮರಿಯ ಕ್ರಿಸ್ತರಾಜು ಹೇಳುತ್ತಾರೆ. ಕೊಡಗಿನ ಅರಣ್ಯ ಅಧಿಕಾರಿಗಳು, ಅರಣ್ಯ ಇಲಾಖಾ ವೈದ್ಯ ಡಾ. ಮುಜಿಬ್ ಅವರು ಆ್ಯಪ್‍ನ್ನು ಬಳಸುತ್ತಿದ್ದು, ಆನೆಗಳ ಚಲನ ವಲನದ ಬಗ್ಗೆ ನಿಗಾವಹಿಸುತ್ತಿದ್ದಾರೆ. ಮೊಬೈಲ್ ಆ್ಯಪ್‍ಗಳ ನಿಯಂತ್ರಣ ಮೇಲಧಿಕಾರಿಗಳ ಕೈಯಲ್ಲಿದ್ದು, ಜಿಪಿಎಸ್ ತೋರಿಸುವ ಮೂಲಕವೇ ಆನೆಗಳ ಇರುವಿಕೆಯ ಜಾಗಕ್ಕೆ ಹೋಗುತ್ತಿದ್ದೇವೆಂದು ಉಪ ವಲಯ ಅರಣ್ಯಾಧಿಕಾರಿ ಕಳ್ಳಿರ ದೇವಯ್ಯ ಹೇಳುತ್ತಾರೆ. ಅರಣ್ಯ ಇಲಾಖೆಯ ಆ್ಯಪ್ ಬಳಕೆಯಿಂದ ಇಲಾಖೆಗೆ ಹಾಗೂ ಜನರಿಗೆ ತಂಬಾ ಅನುಕೂಲವಾಗುವದು. ಮುಂದಿನ ದಿನಗಳಲ್ಲಿ ಕೊಡಗಿನ ಇನ್ನೂ ಹಲವು ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸುವ ಚಿಂತನೆ ನಡೆಯುತ್ತಿದೆ, ಜೊತೆಗೆ ಮೊಬೈಲ್ ಆ್ಯಪ್ ಹಾಗೂ ಪಾಸ್‍ವರ್ಡ್‍ಗಳನ್ನು ರೈತರಿಗೆ ನೀಡಿ ಆನೆಗಳ ಚಲನ ವಲನದ ಬಗ್ಗೆ ತಿಳಿಯಲು ಅರಣ್ಯ ಇಲಾಖೆ ಅನುಕೂಲ ಮಾಡಿಕೊಡಲಿ ಎಂದು ಡಿಎಫ್‍ಓ ಮರಿಯ ಕ್ರಿಸ್ತರಾಜು ಹೇಳುತ್ತಾರೆ. -ಕರುಣ್ ಕಾಳಯ್ಯ