ಗೋಣಿಕೊಪ್ಪ ವರದಿ, ಮಾ. 31: ಅಪಘಾತ ನಡೆದ ಸಂದರ್ಭ ಭಯ ಬಿಟ್ಟು ಜೀವ ಉಳಿಸಲು ಮುಂದಾಗಬೇಕಿದೆ ಎಂದು ಡಿವೈಎಸ್‍ಪಿ ನಾಗಪ್ಪ ಹೇಳಿದರು. ಕಾವೇರಿ ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ಕಾವೇರಿ ಎಜುಕೇಷನ್ ಸೊಸೈಟಿ ವತಿಯಿಂದ ಅನುಷ್ಠಾನಕ್ಕೆ ತರಲು ಉದ್ದೇಶಿಸಿರುವ ಕಾವೇರಿ ಸಾಂತ್ವನ ಯೋಜನೆಯ ಕೈಪಿಡಿ ಬಿಡುಗಡೆಗೊಳಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ವಾಹನ ಅಪಘಾತಗಳಿಂದ ಪ್ರಾಣ ಹಾನಿ ಹಾಗೂ ಅಂಗವಿಕಲತೆ ಸಂಖ್ಯೆ ಹೆಚ್ಚಾಗುತ್ತಿದೆ. ಅಪಘಾತಕ್ಕೆ ಒಳಗಾದವರು ಜೀವ ಉಳಿಸಿಕೊಳ್ಳಲು ನರಳಾಡುತ್ತಿದ್ದರೂ ಜನತೆ ಪೊಲೀಸರು ಸಾಕ್ಷಿ, ದೂರು ಕೇಳುತ್ತಾರೆ ಎಂಬ ಭಯದಿಂದ ಮಾನವೀಯತೆ ಮೆರೆಯಲು ಮುಂದಾಗದಿರುವದು ನೋವಿನ ಸಂಗತಿಯಾಗಿದೆ. ಸುಪ್ರಿಂ ಕೋರ್ಟ್ ಆದೇಶದಂತೆ ಅಪಘಾತಕ್ಕೆ ಒಳಗಾದವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸುವವರಿಂದ ಯಾವದೇ ದೂರು ಅಥವಾ ಸಾಕ್ಷಿ ಕೇಳಬಾರದು ಎಂಬ ಕಾನೂನು ಜೀವ ಉಳಿಸಲು ನೆರವಾಗಲಿದೆ. ಇದನ್ನು ಅರಿತು ಜನರು ಜೀವ ರಕ್ಷಣೆ ಮಾಡುವ ಮೂಲಕ ಸೇವಾಭಾವನೆ ತೋರಬೇಕು ಎಂದರು.
ಅಪಘಾತ ಪೊಲೀಸ್ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ. 14 ವರ್ಷದೊಳಗಿನವರು ಹೆಚ್ಚಾಗಿ ಜೀವ ಕಳೆದುಕೊಳ್ಳುತ್ತಿರುವದು ಕುಟುಂಬಕ್ಕೆ ತುಂಬಲಾಗದ ನಷ್ಟವಾಗಿದೆ. ಈ ಬಗ್ಗೆ ಅರಿತುಕೊಂಡು ತಕ್ಷಣ ಸ್ಪಂದಿಸಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದರು.
ಕಾವೇರಿ ಸಾಂತ್ವನ ಯೋಜನಾ ಸಮಿತಿ ಕಾರ್ಯದರ್ಶಿ ವನಿತ್ ಕುಮಾರ್ ಪ್ರಾಸ್ತಾವಿಕ ಭಾಷಣದಲ್ಲಿ ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯ ಹೆಚ್ಚಿಸಲು ಇಂತಹ ಯೋಜನೆಯನ್ನು ಜಾರಿಗೆ ತರಲಾಗಿದೆ. ವಿದ್ಯಾರ್ಥಿಗಳಲ್ಲಿ ಜಾಗೃತಿ ಹೆಚ್ಚಾಗಬೇಕು. ಶಿಕ್ಷಣದ ಜತೆಯಲ್ಲಿ ಸಮನ್ವಯತೆ, ಸಮಾನತೆ, ಮಾನವೀಯ ಗುಣಗಳನ್ನು ಹೆಚ್ಚಿಸಲು ಸಹಕಾರಿಯಾಗಲಿದೆ ಎಂದರು.
ಈ ಸಂದರ್ಭ ಕಾವೇರಿ ಎಜುಕೇಶನ್ ಸೊಸೈಟಿ ಅಧ್ಯಕ್ಷ ಡಾ. ಎ.ಸಿ. ಗಣಪತಿ, ಪ್ರಾಂಶುಪಾಲರುಗಳಾದ ಪ್ರೊ. ಪೂವಣ್ಣ, ಶ್ರೀನಿವಾಸ್, ವೃತ್ತ ನಿರೀಕ್ಷಕ ಹರಿಶ್ಚಂದ್ರ, ಪೊಲೀಸ್ ಉಪನಿರೀಕ್ಷಕ ಮಹೇಶ್, ಎನ್‍ಎಸ್‍ಎಸ್ ಯೋಜನಾಧಿಕಾರಿಗಳಾದ ಎನ್.ಪಿ. ರೀತಾ, ಅಂಬಿಕಾ, ಕಾವೇರಿ, ಯೋಜನೆ ಕಾರ್ಯಕಾರಿ ಸಮಿತಿ ನಿರ್ದೇಶಕ ಪ್ರಸಾದ್‍ರಾವ್ ಉಪಸ್ಥಿತರಿದ್ದರು. ಈ ಸಂದರ್ಭ ಜನರಲ್ ತಿಮ್ಮಯ್ಯ ಜನ್ಮದಿನಾಚರಣೆ ಪ್ರಯುಕ್ತ ತಿಮ್ಮಯ್ಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.