ಮಡಿಕೇರಿ, ಮಾ. 31: ಹತ್ತನೇ ತರಗತಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗೆ ಪ್ರತಿ ವರ್ಷ ಪಾರಿತೋಷಕ ಮತ್ತು ನಗದು ಬಹುಮಾನ ನೀಡಿ ಗೌರವಿಸಲಾಗುವದು ಎಂದು ಟಿ.ಪಿ. ರಮೇಶ್ ನುಡಿದರು.
ಟಿ.ಪಿ.ರಮೇಶ್ ಅಭಿನಂದನಾ ಗ್ರಂಥ “ಸಾಧನೆಯ ಹಾದಿಯಲ್ಲಿ” ಬಿಡುಗಡೆ ಸಮಿತಿಯ ಲೆಕ್ಕಪತ್ರ ಮತ್ತು ಸದಸ್ಯರಿಗೆ ಧನ್ಯವಾದ ಸಮರ್ಪಣಾ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ ಇದಕ್ಕಾಗಿ ಒಂದು ದತ್ತಿನಿಧಿಯನ್ನು ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದಲ್ಲಿ ಸ್ಥಾಪಿಸಲಾಗುವದು ಎಂದರು.
ಅಭಿನಂದನಾ ಗ್ರಂಥವನ್ನು ಅಚ್ಚುಕಟ್ಟಾಗಿ ರೂಪಿಸಿ ಅದರ ಸಂಪಾದಕತ್ವದ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿದ ಪ್ರಧಾನ ಸಂಪಾದಕ ಬಿ.ಎ. ಶಂಷುದ್ದಿನ್, ಸಮಿತಿಯ ಸಂಚಾಲಕ ಎಂ.ಪಿ. ಕೇಶವ ಕಾಮತ್ ಮತ್ತು ಸಂಪಾದಕ ಮಂಡಳಿಯ ಸದಸ್ಯ ಕೆ.ಟಿ.ಬೇಬಿ ಮ್ಯಾಥ್ಯು ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಸ್ವಾಗತ ಸಮಿತಿಯ ಬಿ.ಎನ್ ಪ್ರಕಾಶ್, ಆಹಾರ ಸಮಿತಿಯ ಅಂಬೆಕಲ್ ನವೀನ್, ಆರ್.ಪಿ. ಚಂದ್ರಶೇಖರ್, ಹಣಕಾಸು ಸಮಿತಿಯ ಐತಪ್ಪ ರೈ, ಟಿ.ಪಿ.ರಾಜೇಂದ್ರ, ವೇದಿಕೆ ಸಮಿತಿಯ ಬಾಳೆಯಡ ಕಿಶನ್ ಪೂವಯ್ಯ,ರೇವತಿ ರಮೇಶ್, ಪ್ರಚಾರ ಸಮಿತಿಯ ಶ್ರೀಧರ ಹೂವಲ್ಲಿ ಅವರನ್ನು ಗೌರವಿಸಲಾಯಿತು. ಸಮಿತಿಯ ಎಲ್ಲ ಸದಸ್ಯರಿಗೆ ನೆನಪಿನ ಕಾಣಿಕೆ ನೀಡಿ ಅವರ ಸೇವೆಯನ್ನು ಅಭಿನಂದಿಸಲಾಯಿತು.
ಈ ಸಂಧರ್ಭ ಸಭೆಯನ್ನುದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಶಂಷುದ್ದಿನ್ ಅಭಿನಂದನಾ ಸಮಿತಿಯ ಸದಸ್ಯರ ಕಾರ್ಯವನ್ನು ಶ್ಲಾಘಿಸಿದರು. ಲೆಕ್ಕಪತ್ರ ಮಂಡನೆ ಮಾಡಿದ ಸಂಚಾಲಕ ಎಂ.ಪಿ.ಕೇಶವ ಕಾಮತ್ ಮಾತನಾಡುತ್ತಾ ಪ್ರಥಮ ಸಭೆಯಲ್ಲಿ ಸಮಿತಿ ಸದಸ್ಯರೇ ಕಾರ್ಯಕ್ರಮದ ಎಲ್ಲ ಖರ್ಚು ವೆಚ್ಚಗಳನ್ನು ಭರಿಸಬೇಕೆಂಬ ಸಲಹೆ ನೀಡಿ, ಅದರಂತೆ ಸಹಕರಿಸಿದ ಎಲ್ಲ ಸದಸ್ಯರಿಗೆ ಧನ್ಯವಾದ ಸಮರ್ಪಿಸಿದರು. ಕೆ.ಟಿ.ಬೇಬಿ ಮ್ಯಾಥ್ಯು ಸ್ವಾಗತಿಸಿ ಶ್ರೀಧರ ಹೂವಲ್ಲಿ ವಂದಿಸಿದರು.