ಸೋಮವಾರಪೇಟೆ,ಮಾ.31: ಇಲ್ಲಿನ ವೀರಶೈವ ಸಮಾಜದ ಅಕ್ಕನ ಬಳಗದ ಆಶ್ರಯದಲ್ಲಿ ಏ.1 ರಂದು (ಇಂದು) ಅಕ್ಕಮಹಾದೇವಿ ಜಯಂತಿ ಮತ್ತು ಮಹಿಳಾ ದಿನಾಚರಣೆ ನಡೆಯಲಿದೆ. ಈ ಪ್ರಯುಕ್ತ ಬಳಗದ ಸದಸ್ಯರಿಗೆ ವಿವಿಧ ಸ್ಪರ್ಧೆಗಳು ನಡೆದವು.
ಅಕ್ಕಮಹಾದೇವಿ ಮಂಟಪದಲ್ಲಿ ಜರುಗಿದ ಕ್ರೀಡಾಕೂಟಕ್ಕೆ ಬಳಗದ ಹಿರಿಯರಾದ ಬಸವರಾಜಮ್ಮ ನೀಲಕಂಠಪ್ಪ ಚಾಲನೆ ನೀಡಿದರು. ಮಕ್ಕಳಿಗೆ ಚಾಕಲೇಟ್ ಹೆಕ್ಕುವ ಸ್ಪರ್ಧೆ, ಲಕ್ಕಿ ನಂಬರ್ಸ್, ಕಾಳು ಹೆಕ್ಕುವದು, ಮಹಿಳೆಯರಿಗೆ ಕಾಯಿನ್ ಗೇಮ್, ಪಾಸಿಂಗ್ ದ ಬಾಲ್, ಲಕ್ಕಿ ಲೇಡಿ, ಹೌಸಿ ಹೌಸಿ, ಶರಣ ಸಾಹಿತ್ಯ ಬಗ್ಗೆ ಸಾಮಾನ್ಯ ಜ್ಞಾನ ಸ್ಪರ್ಧೆ ಹಾಗೂ 60ವರ್ಷ ಮೇಲ್ಪಟ್ಟವರಿಗೆ ಕವಡೆ ಆಟ ಸೇರಿದಂತೆ ಇನ್ನಿತರ ಸ್ಪರ್ಧೆಗಳು ನಡೆದವು.
ಬಳಗದ ಸದಸ್ಯರು ತಯಾರಿಸಿದ ತಿಂಡಿ, ತಿನಿಸುಗಳನ್ನು ಮಾರಾಟ ಮಾಡಿದರು. ಕಾರ್ಯಕ್ರಮದಲ್ಲಿ ಅಕ್ಕನ ಬಳಗದ ಅಧ್ಯಕ್ಷೆ ಜಲಜ ಶೇಖರ್, ಉಮಾ ರುದ್ರಪ್ರಸಾದ್, ಲತ ಮಂಜುನಾಥ್, ಜಲಜಾ ವಿಜಯಕುಮಾರ್, ಸುಮಾ ಸುದೀಪ್, ಉಷಾ ತೇಜಸ್ವಿ, ಕವಿತ ಸಂಜಯ್, ಮಂಗಳ ಆನಂದ್, ಭಾಗ್ಯ ಷಡಾಕ್ಷರಿ ಉಪಸ್ಥಿತರಿದ್ದರು.
ಇಂದು ಜಯಂತಿ: ಏ. 1ರಂದು (ಇಂದು) ಬೆಳಗ್ಗೆ 10.30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ವಿರಕ್ತ ಮಠಾಧೀಶರಾದ ಶ್ರೀ ವಿಶ್ವೇಶ್ವರ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಬಳಗದ ಅಧ್ಯಕ್ಷೆ ಜಲಜಾ ಶೇಖರ್ ಅಧ್ಯಕ್ಷತೆ ವಹಿಸಲಿದ್ದು, ನಿವೃತ್ತ ಉಪನ್ಯಾಸಕಿ ಎಸ್.ಜಿ. ನಯನತಾರಾ ಮುಖ್ಯ ಭಾಷಣ ಮಾಡಲಿದ್ದಾರೆ. ವೀರಶೈವ ಸಮಾಜದ ಯಜಮಾನರಾದ ಕೆ.ಎನ್. ಶಿವಕುಮಾರ್, ಸಮಾಜದ ಶೆಟ್ರು ಕೆ.ಎನ್. ತೇಜಸ್ವಿ, ಬಸವೇಶ್ವರ ಯುವಕ ಸಂಘದ ಅಧ್ಯಕ್ಷ ಎ.ಜಿ. ಚಂದ್ರಶೇಖರ್ ಅವರುಗಳು ಭಾಗವಹಿಸಲಿದ್ದಾರೆ.