ಕುಶಾಲನಗರ, ಮಾ. 30: ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಹಾಗೂ ಸೋಮವಾರ ಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆಶ್ರಯದಲ್ಲಿ ಆರ್‍ಎಂಎಸ್‍ಎ ಯೋಜನೆಯಡಿ ತಾಲೂಕಿನ ಸರ್ಕಾರಿ ಪ್ರೌಢಶಾಲಾ 9 ನೇ ತರಗತಿ ಮಕ್ಕಳಿಗೆ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ಕಾರ್ಯಕ್ರಮ ನಡೆಯಿತು.
ಶಿಕ್ಷಣ ಸಂಸ್ಥೆಗಳ ಭೇಟಿ ಸಂದರ್ಭ ವಿದ್ಯಾರ್ಥಿಗಳು ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಸೇರಿದ ಚಿಕ್ಕ ಅಳುವಾರದ ಸ್ನಾತಕೋತ್ತರ ಕೇಂದ್ರ, ದೊಡ್ಡ ಅಳುವಾರದ ವನ್ಯಜೀವಿ ಪಶು ವೈದ್ಯಕೀಯ ಸಂಶೋಧನಾ ಸಂಸ್ಥೆ, ಕೂಡಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಕುಶಾಲನಗರ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಮತ್ತು ಸರ್ಕಾರಿ ಪಾಲಿಟೆಕ್ನಿಕ್ ಹಾಗೂ ಕೂಡಿಗೆ ಹಾಲಿನ ಡೈರಿಗೆ ಭೇಟಿ ನೀಡಿ ನೀಡಿದ್ದರು. ಶಿಕ್ಷಣ ಸಂಯೋಜಕ ಕೆ. ಮೂರ್ತಿ, ಮಾರ್ಗದರ್ಶಿ ಶಿಕ್ಷಕರಾದ ಟಿ.ಜಿ. ಪ್ರೇಮಕುಮಾರ್, ಸದಾಶಿವ ಎಸ್. ಪಲ್ಲೇದ್ ನೇತೃತ್ವದಲ್ಲಿ ತೆರಳಿದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಕಲಿಕೆ ಹಾಗೂ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದರು.
ಚಿಕ್ಕ ಅಳುವಾರದ ಸ್ನಾತಕೋತ್ತರ ಕೇಂದ್ರದಲ್ಲಿ ವಿಜ್ಞಾನ ವಿಭಾಗದಲ್ಲಿ ಮೈಕ್ರೋ ಬಯೋಲಾಜಿ, ಬಯೋ ಕೆಮಿಸ್ಟ್ರಿ ವಿಭಾಗ ಸೇರಿದಂತೆ ಮಾನವಿಕ ವಿಭಾಗಕ್ಕೆ ಭೇಟಿ ನೀಡಿದ್ದ ಸಂದರ್ಭ ಸ್ನಾತಕೋತ್ತರ ಕೇಂದ್ರದಲ್ಲಿರುವ ಕೋರ್ಸ್‍ಗಳ ಬಗ್ಗೆ ಮಾಹಿತಿ ಒದಗಿಸಲಾಯಿತು.
ದೊಡ್ಡ ಅಳುವಾರದ ವನ್ಯಜೀವಿ ಪಶು ವೈದ್ಯಕೀಯ ಸಂಶೋಧನಾ ಸಂಸ್ಥೆಯಲ್ಲಿ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದರು. ಕೂಡಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಸಂಸ್ಥೆಯ ವತಿಯಿಂದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಶೈಕ್ಷಣಿಕ ಚಟುವಟಿಕೆ ಹಾಗೂ ತರಬೇತಿ ಮೂಲಕ ಮಕ್ಕಳ ಕಲಿಕಾ ಮಟ್ಟವನ್ನು ಉತ್ತಮಪಡಿಸಲು ಕೈಗೊಂಡಿರುವ ಕ್ರಮದ ಬಗ್ಗೆ ವಿವರ ಸಂಗ್ರಹಿಸಿದರು.
ಕುಶಾಲನಗರ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ವಿವಿಧ ಕೋರ್ಸ್‍ಗಳು ಮತ್ತು ಉದ್ಯೋಗವಕಾಶಗಳ ಬಗ್ಗೆ ಮಾಹಿತಿ ಪಡೆದರು. ಕುಶಾಲನಗರ ಸರ್ಕಾರಿ ಪಾಲಿಟೆಕ್ನಿಕ್‍ನ ಡಿಪ್ಲೊಮೋ ಕೋರ್ಸ್ ಕಲಿಕೆ ಮತ್ತು ಉದ್ಯೋಗವಕಾಶಗಳ ಬಗ್ಗೆ ಮಾಹಿತಿ ಪಡೆದರು.
ಕೂಡಿಗೆ ಹಾಲಿನ ಡೈರಿಗೆ ಭೇಟಿ ನೀಡಿದ ವಿದ್ಯಾರ್ಥಿಗಳಿಗೆ ಡೈರಿಯಲ್ಲಿ ಹಾಲನ್ನು ಸಂಸ್ಕರಿಸಿ, ಪ್ಯಾಕೆಟ್ ಮಾಡಿ ಗ್ರಾಹಕರಿಗೆ ನೀಡುವ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಲಾಯಿತು.
ಕುಶಾಲನಗರ ಡಿಪ್ಲೊಮೋ ಕಾಲೇಜಿನಲ್ಲಿ ಸಿವಿಲ್, ಮೆಕ್ಯಾನಿಕಲ್, ಆಟೋಮೊಬೈಲ್ ವಿಭಾಗದ ಯಂತ್ರಗಾರಕ್ಕೆ ಭೇಟಿ ನೀಡಿದ ಸಂದರ್ಭ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಮಾಹಿತಿ ನೀಡಲಾಯಿತು.