ಮಡಿಕೇರಿ, ಮಾ. 30: ವಿಶ್ವವಿಖ್ಯಾತ ವೀರಸೇನಾನಿ ‘ಪದ್ಮಭೂಷಣ’ ಜನರಲ್ ಕೊಡಂದೇರ ಎಸ್. ತಿಮ್ಮಯ್ಯ ಅವರ 112ನೇ ಜನ್ಮದಿನೋತ್ಸವವನ್ನು ತಾ. 31ರಂದು (ಇಂದು) ಆಚರಿಸಲಾಗುವದು. ಕೊಡಗು ಜಿಲ್ಲಾಡಳಿತ ಮತ್ತು ‘ಫೀಲ್ಡ್ ಮಾರ್ಷಲ್ ಕಾರ್ಯಪ್ಪ - ಜನರಲ್ ತಿಮ್ಮಯ್ಯ ಫೋರಂ’ ವತಿಯಿಂದ ಬೆಳಿಗ್ಗೆ 9.30 ಗಂಟೆಗೆ ನಗರದ ಸನ್ನಿಸೈಡ್‍ನಲ್ಲಿ ಕಾರ್ಯಕ್ರಮ ನಡೆಯಲಿದೆ.

ಇದಕ್ಕೂ ಮುನ್ನ ಬೆಳಿಗ್ಗೆ 9 ಗಂಟೆಗೆ ಜನರಲ್ ತಿಮ್ಮಯ್ಯ ವೃತ್ತದಲ್ಲಿ ತಿಮ್ಮಯ್ಯ ಪ್ರತಿಮೆಗೆ ಪುಷ್ಪಾರ್ಚನೆ ನಡೆಯಲಿದೆ. ಬೆಳಿಗ್ಗೆ 9.30 ಗಂಟೆಗೆ ಸನ್ನಿಸೈಡ್ ಆವರಣದಲ್ಲಿ ಫೀ.ಮಾ.ಕಾರ್ಯಪ್ಪ ಅವರ ಪುತ್ರ ಏರ್ ಮಾರ್ಷಲ್ ಕೊಡಂದೇರ ನಂದಾ ಕಾರ್ಯಪ್ಪ ಹಾಗೂ ಫೋರಂ ಪ್ರಯತ್ನದಿಂದ ನೂತನವಾಗಿ ನಿರ್ಮಿಸಲಾಗಿರುವ ‘ವಾರ್ ಮೆಮೋರಿಯಲ್ (ಯುದ್ಧ ಸ್ಮಾರಕ)’ ಇದಾಗಿದೆ. ಇದರಲ್ಲಿ 1947ರಿಂದ ಇತ್ತೀಚೆಗಿನವರೆಗೆ ಸೇನಾ ಕಾರ್ಯದಲ್ಲಿ ವೀರಮರಣಪಟ್ಟ ಕೊಡಗಿನ ಎಲ್ಲಾ ವರ್ಗದ ಸೈನಿಕರ ಹೆಸರನ್ನೂ ಬರೆಯಲಾಗಿದೆ. (ಆಕಸ್ಮಿಕವಾಗಿ ಬಿಟ್ಟು ಹೋಗಿರುವವರ ಹೆಸರನ್ನು ಸೇರಿಸಲು ಅವಕಾಶ ಈಗಲೂ ಇದೆ. ಮಡಿಕೇರಿ ಪುರಭವನ ಸಮೀಪದಲ್ಲಿರುವ ‘ವಾರ್ ಮೆಮೋರಿಯಲ್ -ಯುದ್ಧ ಸ್ಮಾರಕ’ದಲ್ಲಿ 2ನೇ ಪ್ರಪಂಚ ಯುದ್ಧಪಡೆಯ ನಂತರ ವೀರಮರಣಪಟ್ಟ ಸೈನಿಕರ ಹೆಸರು ಮಾತ್ರ ಇದೆ).

ಈಗಿನ ನೂತನ ಯುದ್ಧ ಸ್ಮಾರಕ ಗೋಪುರವನ್ನು ಭಾರತೀಯ ನೌಕಾಪಡೆಯ ದಕ್ಷಿಣ ವಿಭಾಗದ ಮುಖ್ಯಸ್ಥ ವೈಸ್ ಅಡ್ಮಿರಲ್ ಎ.ಆರ್. ಕರ್ವೆ ಅವರು ಲೋಕಾರ್ಪಣೆ ಮಾಡುವರು. ಆ ಸಂದರ್ಭದಲ್ಲಿ ಅಲ್ಲಿ ಸಾರ್ವಜನಿಕ ಮುಖಂಡರಿಗೂ, ಸಂಘ- ಸಂಸ್ಥೆಗಳ ಪ್ರತಿನಿಧಿಗಳಿಗೂ ಪುಷ್ಪಾರ್ಚನೆ ಮಾಡಲು ಅವಕಾಶ ಮಾಡಿಕೊಡಲಾಗುವದು.

ಇದಾದ ನಂತರ ಬೆಳಿಗ್ಗೆ 10 ಗಂಟೆಗೆ ಅದೇ ಸ್ಥಳದಲ್ಲಿ ಜನರಲ್ ತಿಮ್ಮಯ್ಯ ಅವರ 112ನೇ ಜನ್ಮದಿನೋತ್ಸವ ಕುರಿತು ಉಪನ್ಯಾಸ, ನೆನಪು, ಆರ್ಮಿ ಬ್ಯಾಂಡ್ ಪ್ರದರ್ಶನ, ಸಾಂಸ್ಕøತಿಕ ಪ್ರದರ್ಶನ... ಇತ್ಯಾದಿ ನಡೆಯಲಿದೆ.

ಇಂದಿನ ಕಾರ್ಯಕ್ರಮಕ್ಕೆ ಜಿಲ್ಲೆಯ ಮಾಜಿ ಸೈನಿಕರು ತಮ್ಮ ಪ್ರಶಸ್ತಿ, ಮೆಡಲ್ ಇತ್ಯಾದಿಗಳನ್ನು ಧರಿಸಿಕೊಂಡು ಹಾಜರಾಗಬೇಕೆಂದು ತಿಳಿಸಲಾಗಿದೆ.