ಮಡಿಕೇರಿ, ಮಾ. 29 : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಹಚ್ಚಿನಾಡ್, ಹಮ್ಮಿಯಾಲ, ಮುಟ್ಲು ಗ್ರಾಮಸ್ಥರ ಸಂಯುಕ್ತ ಆಶ್ರಯದಲ್ಲಿ ಕೊಡವ ಕಳಿ ನಮ್ಮೆ ಅರ್ಥಪೂರ್ಣವಾಗಿ ಜರುಗಿತು.ಹಮ್ಮಿಯಾಲದ ಸರಕಾರಿ ಶಾಲಾ ಮೈದಾನದಲ್ಲಿ ನಡೆದ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಅವರು ಉದ್ಘಾಟಿಸಿದರು. ಈ ಸಂದರ್ಭ ಅವರು ಮಾತನಾಡಿ, ಇಲ್ಲಿನ ಮಂದಿ ಕೊಡವ ಸಂಸ್ಕøತಿ, ಕಲೆ, ಜಾನಪದವನ್ನು ಉಳಿಸಿ, ಬೆಳೆಸಿಕೊಂಡು ಬರುತ್ತಿದ್ದಾರೆ ಎಂದು ಶ್ಲಾಘಿಸಿದರು.ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಉತ್ತಮ ಕಾರ್ಯವನ್ನು ಮಾಡುತ್ತಿದೆ. ಶತಾಯುಷಿಯನ್ನು ಗುರುತಿಸಿ ಸನ್ಮಾನಿಸಿದೆ. ನೂರು ವರ್ಷಗಳ ಕಾಲ ತುಂಬು ಜೀವನ ನಡೆಸಿರುವ ಮೊಣ್ಣಂಡ ಸೋಮವ್ವ ಅವರು ನಮಗೆಲ್ಲ ಮಾದರಿಯಾಗಿದ್ದಾರೆ ಎಂದರು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ.ಹರೀಶ್ ಮಾತನಾಡಿ, ಹಮ್ಮಿಯಾಲದಂತಹ ಗ್ರಾಮದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವದು ಪ್ರಶಂಸನೀಯ. ಇದೇ ರೀತಿ ಹೆಚ್ಚು ಕಾರ್ಯಕ್ರಮಗಳು ನಡೆದು ಸಾಧಕರನ್ನು ಗುರುತಿಸುವಂತಾಗಲಿ ಎಂದು ಅವರು ಹೇಳಿದರು.