ಕುಶಾಲನಗರ, ಮಾ. 28: ಕುಶಾಲನಗರ ಪಟ್ಟಣ ವ್ಯಾಪ್ತಿಗೆ 24x7 ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪಿಸಬೇಕಿದೆ ಎಂದು ಕ್ಷೇಮ ಕುಶಾಲನಗರ ಸಮಿತಿ ಪ್ರಮುಖರು ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಪ್ರಮುಖ ಕೆ.ಎನ್. ದೇವರಾಜು, ಜೀವನದಿ ಕಾವೇರಿ ಬತ್ತಿಹೋಗಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಪಟ್ಟಣದ ಜನತೆಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಗೆ ಶಾಶ್ವತ ಕುಡಿವ ನೀರಿನ ಯೋಜನೆಯೊಂದು ರೂಪುಗೊಳ್ಳಬೇಕಿದೆ ಎಂದು ಆಗ್ರಹಿಸಿದರು.

ನಗರ ನೀರು ಸರಬರಾಜು ಮಂಡಳಿಯವರು ತಾಂತ್ರಿಕವಾಗಿ ಅಭಿವೃದ್ಧಿ ಹೊಂದಬೇಕಿದೆ ಎಂದ ಅವರು, ಬೇಸಿಗೆ ಸಂದರ್ಭ ಬೈಚನಹಳ್ಳಿ ಬಳಿ ನದಿಗೆ ಅಡ್ಡಲಾಗಿ ಮರಳು ಚೀಲದ ಬಂಡ್ ನಿರ್ಮಿಸಿ ನೀರು ಸಂಗ್ರಹಿಸುವ ಪದ್ಧತಿ ಕೈಬಿಟ್ಟು ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳುವಲ್ಲಿ ಚಿಂತನೆ ಹರಿಸಬೇಕಿದೆ ಎಂದರು.

ವಕೀಲ ಎಸ್.ಕೆ. ಮಂಜುನಾಥ್ ಹಾಗೂ ಸಮಿತಿ ಸಂಚಾಲಕ ಕೆ.ಎಸ್. ನಾಗೇಶ್ ಮಾತನಾಡಿದರು.