ಸಿದ್ದಾಪುರ, ಮಾ. 28: ಕರಡಿಗೋಡು ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳನ್ನು ಕೂಡಲೇ ಒದಗಿಸಿ ಕೊಡದಿದ್ದಲ್ಲಿ ಚುನಾವಣೆ ಬಹಿಷ್ಕರಿಸಲಾಗುವದೆಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕರಡಿಗೋಡು ಗ್ರಾಮದ ಹೊಳೆಕೆರೆಯ ಬದಿಯಲ್ಲಿ ಸುಮಾರು 120 ಬಡ ಕುಟುಂಬಗಳು ವಾಸ ಮಾಡಿಕೊಂಡಿದ್ದು, ಈ ಭಾಗದಲ್ಲಿ ರಸ್ತೆಗಳು ತೀವ್ರವಾಗಿ ಹದಗೆಟ್ಟಿವೆ. ವಸತಿ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ಸಹಾಯಧನ ನೀಡದೇ ಗ್ರಾಮ ಪಂಚಾಯಿತಿ ಹಾಗೂ ಜಿ.ಪಂ., ತಾ.ಪಂ. ಸದಸ್ಯರುಗಳು ನಿರ್ಲಕ್ಷ್ಯವಹಿಸುತ್ತಿದ್ದಾರೆ. ಈ ಭಾಗವನ್ನು ಕಡೆಗಣಿಸಿರುವದನ್ನು ಪ್ರತಿಭಟಿಸಿ ಮುಂಬರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ರಸ್ತೆ ಹಾಗೂ ಮೋರಿಯನ್ನು ದುರಸ್ತಿಪಡಿಸಿ ಇಲ್ಲಿನ ಸಮಸ್ಯೆಗಳಿಗೆ ಸ್ಪಂದಿಸದಿದ್ದಲ್ಲಿ ಚುನಾವಣೆಯನ್ನು ಬಹಿಷ್ಕರಿಸುವದಾಗಿ ಕರಡಿಗೋಡು ಗ್ರಾಮಸ್ಥರು ಎಚ್ಚರಿಕೆಯನ್ನು ನೀಡಿದ್ದಾರೆ.

ಇತ್ತೀಚೆಗೆ ಮಹಿಳೆಯರು ಸೇರಿದಂತೆ ನೂರಾರು ಮಂದಿ ಸಭೆ ನಡೆಸಿ ಚರ್ಚಿಸಿದ ಬಳಿಕ ಸ್ಥಳೀಯ ನಿವಾಸಿ ಐರೀಸ್, ಎಂ.ಎಂ. ಕೃಷ್ಣ ಹಾಗೂ ಬೈಜು ಅವರಿಗೆ ಈ ಮಾಹಿತಿ ನೀಡಿದರು.