ಮಡಿಕೇರಿ, ಮಾ.28 : ಚುನಾವಣೆಯಲ್ಲಿ ಅರ್ಹರೆಲ್ಲರೂ ಮತದಾನ ಮಾಡುವದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ಪ್ರಜಾಪ್ರಭುತ್ವ ಸರ್ಕಾರ ಯಶಸ್ವಿಯಾಗಬೇಕಾದರೆ ಪ್ರಜೆಯೊಬ್ಬನ ಕೊಡುಗೆ ಅತ್ಯಮೂಲ್ಯ. ಆಶಕ್ತರಲ್ಲಿ ಹುಮ್ಮಸ್ಸಿದೆ, ವೃದ್ಧರಲ್ಲಿ ತುಡಿತವಿದೆ. ಬುಡಕಟ್ಟು ಜನರಲ್ಲಿ ನಿಷ್ಕಲ್ಮಶ ಮನಸ್ಸಿದೆ, ಕನಸುಗಳಿವೆ. ಅಂತಹ ಅರ್ಹರೆಲ್ಲರೂ ಮತದಾನ ಮಾಡಿದರಲ್ಲವೇ ಉತ್ತಮ ಪ್ರಜಾಪ್ರಭುತ್ವವನ್ನು ಕಾಣಲು ಸಾಧ್ಯ?
ಈ ರೀತಿಯ ವಿಷಯಕ್ಕೆ ಸಂಬಂಧಿಸಿ ಮತದಾರರನ್ನು ಪ್ರೇರೇಪಿಸುವಂತೆ ಚುಟುಕು ಮತ್ತು ಕಾರ್ಟೂನ್ ಸ್ಪರ್ಧೆಯನ್ನು ಪೋಸ್ಟ್‍ಕಾರ್ಡ್ ಮುಖಾಂತರ ಏರ್ಪಡಿಸಲಾಗಿದೆ. ಆಸಕ್ತರು ಎರಡು ಸಾಲಿನ ಚುಟುಕನ್ನು ಕನ್ನಡ ಹಾಗೂ ಪ್ರಾದೇಶಿಕ ಭಾಷೆಗಳಾದ ಕೊಡವ, ಅರೆಭಾಷೆ, ತುಳು, ಬ್ಯಾರಿ ಮತ್ತು ಬುಡಕಟ್ಟು ಭಾಷೆಗಳಲ್ಲಿ ರಚಿಸಿ ಪೋಸ್ಟ್ ಕಾರ್ಡಿನಲ್ಲಿ ಕಳುಹಿಸಬಹುದಾಗಿದೆ. ಚುನಾವಣೆಗೆ ಸಂಬಂಧಿಸಿದಂತೆ ಕಾರ್ಟೂನ್‍ಗಳನ್ನು ರಚಿಸಿ ಪ್ರತ್ಯೇಕವಾಗಿ ಪೋಸ್ಟ್ ಕಾರ್ಡಿನಲ್ಲಿ ಕಳುಹಿಸತಕ್ಕದ್ದು, ಎರಡು ಸ್ಪರ್ಧೆಗಳ ಪೋಸ್ಟ್ ಕಾರ್ಡ್‍ಗಳು ಏಪ್ರಿಲ್ 3ರೊಳಗೆ ಉಪ ನಿರ್ದೇಶಕರ ಕಚೇರಿ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಚೈನ್‍ಗೇಟ್ ಹತ್ತಿರ, ಮೈಸೂರು ರಸ್ತೆ, ಮಡಿಕೇರಿ ಈ ವಿಳಾಸಕ್ಕೆ ಕಳುಹಿಸಬಹುದು. ಎರಡೂ ಸ್ಪರ್ಧೆಗಳಲ್ಲಿ ವಿಜೇತರಿಗೆ ಪ್ರಥಮ ರೂ. 2500, ದ್ವಿತೀಯ ರೂ. 1500 ಮತ್ತು ತೃತೀಯ ರೂ. 1000 ನಗದು ಬಹುಮಾನ ನೀಡಲಾಗುವದು. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ : 08272-225379 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಮಲ್ಲೆಸ್ವಾಮಿ ತಿಳಿಸಿದ್ದಾರೆ.