ಸೋಮವಾರಪೇಟೆ, ಮಾ.28: ನಿನ್ನೆ ಸಂಜೆ ಸಮೀಪದ ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾನ್ವೆಂಟ್ ಬಾಣೆ ಶ್ರೀ ಚೌಡೇಶ್ವರಿ ದೇವರ ವಾರ್ಷಿಕ ಪೂಜೋತ್ಸವಕ್ಕೆ ಅಳವಡಿಸಿದ್ದ ಬ್ಯಾನರ್‍ಗಳನ್ನು ತೆರವುಗೊಳಿಸಿದ ಹಿನ್ನೆಲೆ ಗ್ರಾಮಸ್ಥರು ಪಂಚಾಯಿತಿ ವಾಹನಕ್ಕೆ ಅಡ್ಡಿಪಡಿಸಿದ್ದರ ವಿರುದ್ಧ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದೂರು ನೀಡಿದ್ದಾರೆ.ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆ, ಚುನಾವಣಾಧಿಕಾರಿಗಳ ಅದೇಶ ಪಾಲಿಸಲು ಮುಂದಾದ ಪಂಚಾಯಿತಿ ಸಿಬ್ಬಂದಿಗಳ ಮೇಲೆ ಹಲ್ಲೆ ಯತ್ನ ನಡೆಸಿದ್ದು, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಚೌಡೇಶ್ವರಿ ದೇವಾಲಯ ಸಮಿತಿ ಅಧ್ಯಕ್ಷ ವಿಶ್ವನಾಥ್ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜ ಅವರುಗಳ ಹೆಸರು ಉಲ್ಲೇಖಿಸಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸುಮೇಶ್ ಅವರು ಜಿಲ್ಲಾಧಿಕಾರಿಗಳು ಮತ್ತು ಚುನಾವಣಾಧಿಕಾರಿಗಳು, ಪೊಲೀಸ್ ವೃತ್ತ ನಿರೀಕ್ಷಕರು, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳು, ತಹಶೀಲ್ದಾರ್ ಸೇರಿದಂತೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ನಿನ್ನೆ ಸಂಜೆ ಗ್ರಾ.ಪಂ. ಕರವಸೂಲಿಗಾರ ಜಯರಾಂ, ನೀರು ನಿರ್ವಾಹಕ ಭರತ್, ಶ್ರೀಜಿತ್, ವಾಹನ ಚಾಲಕ ರಂಜಿತ್, ಸ್ವಚ್ಚತಾಗಾರ ಅನಂತ್‍ಕುಮಾರ್ ಅವರುಗಳು ಬ್ಯಾನರ್ ತೆರವಿಗೆ ಮುಂದಾದ ಸಂದರ್ಭ ಕರ್ತವ್ಯಕ್ಕೆ ತಡೆಯೊಡ್ಡಿ, ಪಂಚಾಯಿತಿ ವಾಹನಕ್ಕೆ ಅಡ್ಡಿಪಡಿಸಿದ್ದಾರೆ. ಇದರೊಂದಿಗೆ ಮಾನಸಿಕವಾಗಿ ಕುಗ್ಗುವಂತೆ ಧಿಕ್ಕಾರ ಘೋಷಣೆ ಕೂಗಿ ಹಲ್ಲೆ ಯತ್ನ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.