ಕುಶಾಲನಗರ, ಮಾ. 28: ಕುಶಾಲನಗರ ಸಮೀಪದ ಕಾವೇರಿ ನಿಸರ್ಗಧಾಮಕ್ಕೆ 3 ಕಾಡಾನೆಗಳು ಲಗ್ಗೆಯಿಟ್ಟ ಘಟನೆ ನಡೆದಿದೆ. ಪಿರಿಯಾಪಟ್ಟಣ ತಾಲೂಕು ವ್ಯಾಪ್ತಿಯ ಅರಣ್ಯದಿಂದ ನದಿ ದಾಟಿ ಆನೆಗಳು ಪ್ರವಾಸಿ ಕೇಂದ್ರಕ್ಕೆ ಪ್ರವೇಶಿಸಿದ್ದು ಬುಧವಾರ ಬೆಳಗ್ಗೆ ಪ್ರವಾಸಿ ಕೇಂದ್ರದ ಸಿಬ್ಬಂದಿಗಳಗೆ ಗೋಚರಿಸಿದೆ.

ತಕ್ಷಣ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳು ಕೂಡಲೇ ಪ್ರವಾಸಿಗರಿಗೆ ಧಾಮದೊಳಗೆ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ ಹಿನೆÀ್ನಲೆಯಲ್ಲಿ ಭಾರೀ ಅಪಾಯ ತಪ್ಪಿದೆ.ಬೆಳಗ್ಗೆ 9 ಗಂಟೆಯಿಂದ ಕಾಡಾನೆಗಳನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಕಾರ್ಯಾಚರಣೆ ನಡೆಸಿದರೂ ಯಾವದೇ ಪ್ರಯೋಜನವಾಗಿಲ್ಲ. ಮೂರು ಕಾಡಾನೆಗಳು ನಿಸರ್ಗ ಧಾಮದ ಜಿಂಕೆ ವನದ ಹಿಂಭಾಗದಲ್ಲಿ ಕಂಡುಬಂದಿದ್ದು ಹುಸಿ ಗುಂಡು ಹಾರಿಸಿ ಪಟಾಕಿಗಳನ್ನು ಸಿಡಿಸಿದರೂ ಆನೆಗಳು ಕದಲದೆ ನಂತರ ವನ್ಯಜೀವಿ ತಜ್ಞರಾದ ಡಾ.ಮುಜೀಬ್ ಮತ್ತು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಆನೆಯನ್ನು ಹಿಮ್ಮೆಟ್ಟಿಸಲು ಕಾರ್ಯಾಚರಣೆ ಕೈಗೊಂಡಿದ್ದಾರೆ.

ಅಂದಾಜು 60 ಎಕರೆ ವ್ಯಾಪ್ತಿಯ ಕಾವೇರಿ ನಿಸರ್ಗಧಾಮದ ಸುತ್ತ ಕಾವೇರಿ ನದಿ ಹರಿಯುತ್ತಿದ್ದು ನದಿಯಲ್ಲಿ ನಾಗರಿಕರು

(ಮೊದಲ ಪುಟದಿಂದ) ಓಡಾಡುತ್ತಿರುವ ಹಿನೆÀ್ನಲೆಯಲ್ಲಿ ಕಾರ್ಯಾಚರಣೆ ನಡೆಸಲಾಗುವದು ಎಂದು ಅರಣ್ಯ ಸಹಾಯಕ ಸಂರಕ್ಷಣಾಧಿಕಾರಿ ಎಂ.ಎಸ್. ಚಿಣ್ಣಪ್ಪ ತಿಳಿಸಿದ್ದಾರೆ. ಕಾರ್ಯಾಚರಣೆಗೆ ಆನೆಕಾಡು ಶಿಬಿರದಿಂದ ಎರಡು ಸಾಕಾನೆಗಳನ್ನು ತರಿಸಲಾಗಿದೆ. ಅರಣ್ಯ ವಲಯಾಧಿಕಾರಿ ಅರುಣ್ ಮತ್ತು ಸಿಬ್ಬಂದಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.

ಇತ್ತೀಚೆಗಷ್ಟೆ ಗುಡ್ಡೆಹೊಸೂರು ಬಳಿ ರಾತ್ರಿ ವೇಳೆ ಮೂರು ಕಾಡಾನೆಗಳು ಮುಖ್ಯರಸ್ತೆ ದಾಟುವ ಸಂದರ್ಭ ಕಾರೊಂದಕ್ಕೆ ಡಿಕ್ಕಿಯಾದ ಪ್ರಕರಣ ಸ್ಮರಿಸಬಹುದು.

ಕಾವೇರಿ ನಿಸರ್ಗಧಾಮ ಪ್ರವಾಸಿ ಕೇಂದ್ರಕ್ಕೆ ಲಗ್ಗೆಯಿಟ್ಟಿರುವ 3 ಗಂಡಾನೆಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಸಂಜೆ ತನಕ ಕಾರ್ಯಾಚರಣೆ ನಡೆಸಿದರೂ ಆನೆಗಳು ಕೇಂದ್ರದಿಂದ ಹೊರಗೆ ತೆರಳದೆ ಕಾರ್ಯಾಚರಣೆ ವಿಫಲಗೊಂಡಿದೆ. ಸಾಕಾನೆಗಳಾದ ಹರ್ಷ, ವಿಕ್ರಂ ನೆರವಿನೊಂದಿಗೆ ಸೋಮವಾರಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್.ಚಿಣ್ಣಪ್ಪ, ಸಹಾಯಕ ಅರಣ್ಯ ಅಧಿಕಾರಿಗಳಾದ ವಿಲಾಸ್, ರಂಜನ್ ಮತ್ತು ಸಿಬ್ಬಂದಿಗಳ ತಂಡ ನಿರಂತರ ಕಾರ್ಯಾಚರಣೆ ನಡೆಸಿದರು. ಸುಮಾರು 3 ಕಿಮೀ ಚದರ ವ್ಯಾಪ್ತಿಯಲ್ಲಿರುವ ಅರಣ್ಯದಲ್ಲಿ ಆನೆಗಳು ಅತ್ತಿಂದಿತ್ತ ಓಡಾಡುತ್ತಿದ್ದು ಪ್ರವಾಸಿ ಕೇಂದ್ರದಿಂದ ಹೊರಗೆ ಅಟ್ಟುವಲ್ಲಿ ವಿಫಲರಾಗಿದ್ದಾರೆ. 50 ಕ್ಕೂ ಅಧಿಕ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು ಪಟಾಕಿ ಸಿಡಿಸಿ ಬೆದರಿಸಿದರೂ ಆನೆಗಳು ಬಿದಿರಿನ ಮೆಳೆಗಳ ನಡುವೆ ನಿಂತಿರುತ್ತಿದ್ದ ದೃಶ್ಯ ಕಂಡುಬಂತು. ಕಾರ್ಯಾಚರಣೆ ಪೂರ್ಣಗೊಳ್ಳುವ ತನಕ ಕಾವೇರಿ ನಿಸರ್ಗಧಾಮಕ್ಕೆ ಪ್ರವಾಸಿಗರಿಗೆ ಪ್ರವೇಶಕ್ಕೆ ನಿರ್ಬಂಧ ಹೇರಲಾಗುವದೆಂದು ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ತಿಳಿಸಿದ್ದಾರೆ. ಪ್ರವಾಸಿಗರ ಭದ್ರತೆ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.