ಕೂಡಿಗೆ, ಮಾ. 28: ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳನ್ನು ಗುಮ್ಮನಕೊಲ್ಲಿ ಕಾರ್ಯಕ್ಷೇತ್ರದ ಒಕ್ಕೂಟಗಳಲ್ಲಿ ಸಮರ್ಪಕವಾಗಿ ಅನುಷ್ಠಾನ ಮಾಡಿದುದರ ಫಲವಾಗಿ ತಾಲೂಕಿನಲ್ಲಿ ಪ್ರಪ್ರಥಮವಾಗಿ ಸಾಧನಾ ಸಮಾವೇಶ ಕಾರ್ಯಕ್ರಮ ವನ್ನು ನಡೆಸಲು ಸಾಧ್ಯವಾಯಿತು ಒಕ್ಕೂಟದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಮತ್ತು ಸೇವಾ ಪ್ರತಿನಿಧಿಯ ಶ್ರಮ ಮೇಲ್ವೀಚಾರಕರ ಹಾಗೂ ಮೇಲಾಧಿಕಾರಿಗಳ ಮಾರ್ಗದರ್ಶನದ ಸಂಪೂರ್ಣ ಬಳಕೆ ಮಾಡಿರುವದು ಎಲ್ಲರ ಪ್ರಸಂಶೆಗೆ ಕಾರಣವಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ತಾಲೂಕು ಯೋಜನಾಧಿಕಾರಿ ಪ್ರಕಾಶ್ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೂಡಿಗೆ ವಲಯದ ಗುಮ್ಮನಕೊಲ್ಲಿ ಎ ಮತ್ತು ಬಿ ಒಕ್ಕೂಟಗಳ ಸಾಧನಾ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ಅವಧಿಯಲ್ಲಿಯೂ ಎಲ್ಲಾ ಸದಸ್ಯರ ಒಗ್ಗಟ್ಟಿನಿಂದ ಒಕ್ಕೂಟವು ಇನ್ನಷ್ಟು ಸಾಧನೆ ಮಾಡಲು ಶ್ರೀ ಮಂಜುನಾಥ ಸ್ವಾಮಿ ಶಕ್ತಿ ನೀಡಲಿ ಎಂದು ಶುಭಹಾರೈಸಿದರು.
ಪ್ರೌಢಶಾಲಾ ಶಿಕ್ಷಕಿ ಮಾಲಾದೇವಿ ಮಾತನಾಡಿ ಮಹಿಳೆಯೊಬ್ಬಳು ಪ್ರಜ್ಞಾವಂತಳಾಗಿದ್ದಲ್ಲಿ ಸಮಾಜದಲ್ಲಿನ ನ್ಯೂನ್ಯತೆಯನ್ನು ಸರಿಪಡಿಸಲು ಸಾಧ್ಯವಾಗುತ್ತದೆ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸುವದರ ಜೊತೆಗೆ ತಮ್ಮ ಕುಟುಂಬದಲ್ಲಿ ಸ್ಥಾನಮಾನಗಳನ್ನು ಪಡೆದುಕೊಳ್ಳಲು ಶಕ್ತರಾಗಬೇಕು. ಕಾನೂನು ಮಾಹಿತಿಗಳನ್ನು ಅರಿತು ನಡೆದು ಕೊಳ್ಳಬೇಕು ಹಾಗಿದ್ದಾಗ ಮಾತ್ರ ಮಹಿಳಾ ಸಬಲೀಕರಣಕ್ಕೆ ನಿಜವಾದ ಅರ್ಥಬರುತ್ತದೆ ಎಂದರು.
ದೈಹಿಕ ಶಿಕ್ಷಕ ಸೋಮಶೇಖರ ಮಾತನಾಡಿ, ಮಕ್ಕಳಂತೆ ಮಹಿಳೆಯರೆಲ್ಲರೂ ಆಟೋಟ ಸ್ಪರ್ಧೆಯಲ್ಲಿ ಬಾಗವಹಿಸಿರುವದು ಪ್ರಶಂಸನೀಯ ವಿಚಾರವಾಗಿದೆ ಎಂದರು. ಕಾರ್ಯಕ್ರಮವನ್ನು ಗುಮ್ಮನಕೊಲ್ಲಿ ಎ ಒಕ್ಕೂಟದ ಅಧ್ಯಕ್ಷೆ ವನಿತಾ, ಗುಮ್ಮನಕೊಲ್ಲಿ ಬಿ ಒಕ್ಕೂಟದ ಅಧ್ಶಕ್ಷೆ ಶರ್ಮಿಳಾ, ವಲಯದ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ ನಿರ್ವಹಿಸಿದರು.
ತಾಲೂಕು ಜ್ಞಾನವಿಕಾಸ ಸಮನ್ವಯಧಿಕಾರಿ ಭಾವನಾ ರವಿಪ್ರಸಾದ್ ಆಟೋಟ ಸ್ಪರ್ಧೆಯನ್ನು ನಿರ್ವಹಿಸಿದರು. ಸೇವಾನಿರತೆ ಸುವರ್ಣ ಒಕ್ಕೂಟದ ಸಾಧನೆಯ ವರದಿಯನ್ನು ಮಂಡಿಸಿದರು. ಒಕ್ಕೂಟದ ಪದಾಧಿಕಾರಿಗಳು ಸಮವಸ್ತ್ರ ಧರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.