ಕುಶಾಲನಗರ, ಮಾ. 28: ಕುಶಾಲನಗರದ ಸಾರಿಗೆ ಬಸ್ ಆವರಣದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಶಾಸಕ ಅಪ್ಪಚ್ಚುರಂಜನ್ ತಾ. 26 ರಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಶಾಸಕರ ಅನುದಾನದಡಿ ನಿರ್ಮಾಣಗೊಂಡಿರುವ ಕುಡಿಯುವ ನೀರಿನ ಘಟಕವನ್ನು ಸ್ಥಳೀಯ ವಾಸವಿ ಯುವಜನ ಸಂಘದವರು ನಿರ್ವಹಣೆ ಮಾಡುತ್ತಿದ್ದು, ಬೇಸಿಗೆ ಧಗೆಯ ಹಿನ್ನೆಲೆ ಘಟಕಕ್ಕೆ ನೀರಿಗಾಗಿ ಆಗಮಿಸುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕರು ಸಮರ್ಪಕ ನಿರ್ವಹಣೆ ಕುರಿತು ನಿರ್ವಾಹಕರಿಂದ ಮಾಹಿತಿ ಪಡೆದುಕೊಂಡು ಘಟಕದ ವಸ್ತು ಸ್ಥಿತಿ ಪರಿಶೀಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಶಾಲನಗರ ವ್ಯಾಪ್ತಿಯಲ್ಲಿ ಕುಡಿವ ನೀರಿಗೆ ತತ್ವಾರ ಉಂಟಾಗಿದೆ. ಶುದ್ಧ ಕುಡಿಯುವ ನೀರಿನ ಘಟಕದಿಂದ ದಿನವೊಂದಕ್ಕೆ 16 ಸಾವಿರಕ್ಕೂ ಅಧಿಕ ಲೀಟರ್ ನೀರು ವಿತರಣೆಯಾಗುತ್ತಿದೆ. ಈ ಸಂದರ್ಭ ಶುದ್ಧೀಕರಣ ವೇಳೆ ದಿನವೊಂದಕ್ಕೆ 10 ಸಾವಿರ ಲೀಟರ್‍ನಷ್ಟು ಕುಡಿಯಲು ಯೋಗ್ಯವಲ್ಲದ ನೀರು ಅನವಶ್ಯಕವಾಗಿ ಪೋಲಾಗುತ್ತಿದೆ. ರೈತರು ಅಥವಾ ಅಗತ್ಯವಿರುವವರು ಈ ನೀರನ್ನು ಸಂಗ್ರಹಿಸಿ ಕೊಂಡೊಯ್ದು ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳುವಂತೆ ಸಲಹೆ ನೀಡಿದರು.

ರಾಜ್ಯ ಸರಕಾರದಿಂದ ನಿರ್ಮಾಣಗೊಂಡಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ತಾಂತ್ರಿಕ ಕಾರಣಗಳಿಂದ ಕೆಲವೆಡೆ ಮುಚ್ಚಲ್ಪಟ್ಟಿದೆ. ಇಡೀ ರಾಜ್ಯಕ್ಕೆ ಒಂದೆರೆಡು ಖಾಸಗಿ ಸಂಸ್ಥೆಯವರಿಗೆ ನಿರ್ವಹಣೆ ಜವಾಬ್ದಾರಿ ನೀಡಿರುವ ಹಿನ್ನೆಲೆ ಈ ಸ್ಥಿತಿ ನಿರ್ಮಾಣಗೊಂಡಿದ್ದು ಆದಷ್ಟು ಬೇಗ ಇಂತಹ ಘಟಕಗಳನ್ನು ದುರಸ್ತಿಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಒದಗಿಸಬೇಕೆಂದರು. ಈ ಸಂದರ್ಭ ವಾಸವಿ ಯುವಜನ ಸಂಘದ ಅಧ್ಯಕ್ಷ ವಿ.ಆರ್. ಮಂಜುನಾಥ್, ಜೆಸಿಐ ಅಧ್ಯಕ್ಷ ಪ್ರವೀಣ್, ಪ್ರಮುಖರಾದ ವೈಶಾಖ್ ಮತ್ತಿತರರು ಇದ್ದರು.