ಆಲೂರು-ಸಿದ್ದಾಪುರ, ಮಾ. 28: ಆಲೂರು-ಸಿದ್ದಾಪುರ ಗ್ರಾ.ಪಂ.ಯ ಕೇಂದ್ರವಾಗಿರುವ ಆಲೂರು-ಸಿದ್ದಾಪುರ ಎಂಬ ಪುಟ್ಟ ಗ್ರಾಮ ಜಿಲ್ಲೆಯ ಗಮನ ಸೆಳೆದಿದೆ. ಗ್ರಾಮದ ನಿವಾಸಿ ನಿವೃತ್ತಿ ಹೊಂದಿರುವ ಕೆಎಎಸ್ ಅಧಿಕಾರಿಯೊಬ್ಬರ ಪ್ರಯತ್ನದಿಂದ 25 ವರ್ಷಗಳ ಹಿಂದೆ ಕುಗ್ರಾಮವಾಗಿದ್ದ ಆಲೂರು ಸಿದ್ದಾಪುರದ ಮೂಲಕ 7 ಕ್ಕಿಂತ ಹೆಚ್ಚಿನ ರಾಜ್ಯ ರಸ್ತೆ ಸಾರಿಗೆ ಬಸ್ಸುಗಳು ಸಂಚರಿಸುತ್ತಿದ್ದವು. ಬೆಂಗಳೂರು ಕಡೆಗೆ ಹೋಗುವ 4 ಬಸ್ಸುಗಳು ಆಲೂರು ಸಿದ್ದಾಪುರದಲ್ಲಿ ತಂಗುತ್ತಿದ್ದವು ಈ ಕಾರಣದಿಂದ 2011 ರಲ್ಲಿ ಆಲೂರು ಸಿದ್ದಾಪುರದಲ್ಲಿ ಗ್ರಾಮೀಣ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ನಿರ್ಮಿಸುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಪುತ್ತೂರು ಡಿವಿಜನ್ ಪ್ರಸ್ತಾವನೆಗೆ ಸ್ಪಂದಿಸಿ ಸಂಸ್ಥೆ ಮೂಲಕ ಗ್ರಾಮೀಣ ಬಸ್ ನಿಲ್ದಾಣ ನಿರ್ಮಾಣಕ್ಕಾಗಿ ರೂ. 35 ಲಕ್ಷ ಮಂಜೂರಾತಿ ನೀಡಲಾಗುವದು ನಿಲ್ದಾಣ ನಿರ್ಮಿಸಲು ಗ್ರಾ.ಪಂ. ಜಾಗವನ್ನು ಬಿಟ್ಟುಕೊಟ್ಟರೆ ಸಂಸ್ಥೆಯಿಂದ ಬಸ್ ನಿಲ್ದಾಣ ಮಾಡಲಾಗುತ್ತದೆ ಎಂಬ ಸುತ್ತೊಲೆಯನ್ನು ಆಲೂರುಸಿದ್ದಾಪುರ ಗ್ರಾ.ಪಂ.ಗೆ ಕಳುಹಿಸಿಕೊಟ್ಟಿದೆ. ಗ್ರಾ.ಪಂ.ಗೆ ಸೇರಿದ ಸ.ನಂ.20/12 ರಲ್ಲಿ ಒಟ್ಟು 2.55 ಎಕರೆ ಜಾಗದ ಪೈಕಿ ಬಸ್ ನಿಲ್ದಾಣ ನಿರ್ಮಿಸಲು 154+150 ಅಡಿ ಜಾಗವನ್ನು ಬಿಟ್ಟುಕೊಟ್ಟಿತು. ಇದರ ಕಡತವನ್ನು ಪುತ್ತೂರು ರಸ್ತೆ ಸಾರಿಗೆ ಮಂಡಳಿಗೆ ಕಳುಹಿಸಿಕೊಡಲಾಯಿತು.
ಅದರಂತೆ ಪುತ್ತೂರು ರಸ್ತೆ ಸಾರಿಗೆ ವಿಭಾಗದಿಂದ 4.3.2014 ರಂದು ಆಲೂರು-ಸಿದ್ದಾಪುರದಲ್ಲಿ ಬಸ್ ನಿಲ್ದಾಣ ನಿರ್ಮಿಸಲು ಟೆಂಡರ್ ಕರೆಯಲಾಗಿದೆ. ಸಧ್ಯದಲ್ಲೇ ಕಾಮಗಾರಿ ಕಾರ್ಯ ಪ್ರಾರಂಭ ಮಾಡಲಾಗುತ್ತದೆ ಎಂದು ಆಲೂರು-ಸಿದ್ದಾಪುರ ಗ್ರಾ.ಪಂ.ಗೆ ಸುತ್ತೋಲೆಯನ್ನು ಕಳುಹಿಸಿಕೊಟ್ಟಿದೆ.
ಅದೇ ಕೊನೆ ಇಲ್ಲಿಯ ತನಕ ಯಾವದೇ ಕಡತ ವಿಲೇವಾರಿಯಾಗಲಿ, ಪುತ್ತೂರು ವಿಭಾಗದ ರಸ್ತೆ ಸಾರಿಗೆ ಮಂಡಳಿಯ ಅಧಿಕಾರಿಗಳಾಗಲಿ ಇಲ್ಲಿಗೆ ಬಂದು ಭೇಟಿ ನೀಡಿಲ್ಲ, ಬಸ್ ನಿಲ್ದಾಣ ನಿರ್ಮಾಣದ ಪ್ರಗತಿ 4 ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಇದೀಗ ಆಲೂರು-ಸಿದ್ದಾಪುರದಲ್ಲಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ವ್ಯವಸ್ಥೆ ಇಲ್ಲದಿರುವದರಿಂದ ಕೇವಲ 3 ಬಸ್ಗಳು ಮಾತ್ರ ಓಡಾಡುತ್ತಿದ್ದು, 2 ಬಸ್ಗಳು ಮಾತ್ರ ತಂಗುತ್ತಿವೆ, ಬಸ್ ನಿಲ್ದಾಣ ನಿರ್ಮಾಣದ ಬಗ್ಗೆ ಸ್ಥಳೀಯರು ಸಂಬಂಧಪಟ್ಟ ರಸ್ತೆ ಸಾರಿಗೆ ಡಿಪೊ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ ಎಂಬದು ಸ್ಥಳೀಯರ ಆರೋಪ.