ಸುಂಟಿಕೊಪ್ಪ, ಮಾ. 25: ಹೊಟೇಲ್‍ನಲ್ಲಿ ಅಕ್ರಮವಾಗಿ ಮದ್ಯವನ್ನು ದಾಸ್ತಾನು ಮಾಡಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಮಾಲು ಸಹಿತ ಬಂಧಿಸಿದ್ದಾರೆ.

ಸುಂಟಿಕೊಪ್ಪದ ಹೃದಯಭಾಗದಲ್ಲಿ ಹೊಟೇಲ್ ನಡೆಸುತ್ತಿದ್ದ ಚಂದ್ರಶೇಖರ ಎಂಬವರು ಅನೇಕ ದಿನಗಳಿಂದ ಹೊಟೇಲ್‍ನಲ್ಲಿ ಅಕ್ರಮವಾಗಿ ಮದ್ಯದ ಪ್ಯಾಕೇಟುಗಳನ್ನು ಇಟ್ಟುಕೊಂಡು ಗ್ರಾಹಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಸುಳಿವಿನ ಮೇರೆಗೆ ಸುಂಟಿಕೊಪ್ಪ ಠಾಣಾಧಿಕಾರಿ ಜಯರಾಂ ಹಾಗೂ ಸಿಬ್ಬಂದಿ ಇಂದು ಬೆಳಿಗ್ಗೆಯೇ ಹೊಟೇಲ್‍ಗೆ ತೆರಳಿ ಪರಿಶೀಲಿಸಿದಾಗ ಕೊಡೇಸ್, ಬಿಜಾಯಿಸ್ ಹಾಗೂ ಒರಿಜಿನಲ್ ಚಾಯ್ಸ್ 90 ಎಂಎಲ್ ಪ್ಯಾಕೇಟ್ ಸೇರಿದಂತೆ ರೂ 7,838 ಮೌಲ್ಯದ ಮದ್ಯ ಪತ್ತೆಯಾಗಿದೆ.

ಅಕ್ರಮ ಮದ್ಯವನ್ನು ಚಂದ್ರಶೇಖರ ಅವರ ಪುತ್ರ ಸುನಿಲ್ ಗ್ರಾಹಕರಿಗೆ ವಿತರಿಸುತ್ತಿದ್ದಾಗ ಪೊಲೀಸರ ಬಲೆಗೆ ಸಿಲುಕಿದ್ದಾನೆ. ಪೊಲೀಸರು ಅಬಕಾರಿ ಕಾಯ್ದೆ 32,34ರ ಅನ್ವಯ ಮೊಕದ್ದಮೆ ದಾಖಲಿಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.