ಮಡಿಕೇರಿ, ಮಾ. 24: ಕೋತೂರು ಗ್ರಾಮದ ಅಪ್ರಾಪ್ತ ಬಾಲಕಿ ಮೇಲೆ ನಿರಂತರ ಅತ್ಯಾಚಾರವೆಸಗಿ ಗರ್ಭಪಾತ ಮಾಡಿಸಿದ ಬಳಿಕವೂ ಆಕೆಯನ್ನು ಬಳಸಿಕೊಂಡ ಆರೋಪದ ಮೇಲೆ ಕೋತೂರು ಗ್ರಾಮದ ವಿ.ಇ. ಕೀರ್ತಿ ಎಂಬಾತನಿಗೆ ಶಿಕ್ಷೆ ವಿಧಿಸಿ ಮಡಿಕೇರಿ ನ್ಯಾಯಾಲಯ ತೀರ್ಪು ನೀಡಿದೆ.
17.12.2013ರಂದು ಹೆಣ್ಣು ಮಗುವಿಗೆ ಜನ್ಮವಿತ್ತ ಅಪ್ರಾಪ್ತ ಬಾಲಕಿ, ತನ್ನ ಮೇಲೆ 2 ವರ್ಷಗಳಿಂದ ನಿರಂತರ ಅತ್ಯಾಚಾರವಾಗಿತ್ತು ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಳು.
ಈ ಪ್ರಕರಣದ ವಿಚಾರಣೆಯನ್ನು 1ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ, ಮಡಿಕೇರಿ ಇಲ್ಲಿ ನಡೆಸಲಾಗಿದ್ದು, ನ್ಯಾಯಾಧೀಶ ಪವನೇಶ್ ಡಿ. ಅವರು ಆರೋಪಿಗೆ ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದ್ದಾರೆ. ಆರೋಪಿಯು ದೂರುದಾರಳ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಸಂಪರ್ಕ ಹೊಂದಿದ್ದ ಅಪರಾಧಕ್ಕಾಗಿ 10 ವರ್ಷಗಳ ಕಠಿಣ ಸಜೆ ಮತ್ತು ರೂ. 5000/- ದಂಡವನ್ನು, ಅವಳ ಮೇಲೆ ಆಗಿಂದಾಗ್ಗೆ ಪ್ರೀತಿಸುವಂತೆ ನಟಿಸಿ ಲೈಂಗಿಕ ಕ್ರಿಯೆ ನಡೆಸಿದ ಅಪರಾಧಕ್ಕಾಗಿ 10 ವರ್ಷಗಳ ಕಠಿಣ ಸಜೆ ಮತ್ತು ರೂ. 5000/- ದಂಡವನ್ನು ಆಕೆಯು ಗರ್ಭಿಣಿಯಾದಾಗ ಅದನ್ನು ತೆಗೆಸಿ ಪುನಃ ಆಕೆಯ ಮನೆಗೆ ಬಂದು ಆಗಿಂದಾಗ್ಗೆ ದೈಹಿಕ ಸಂಪರ್ಕ ಮಾಡಿ ಆಕೆಯು ಹೆಣ್ಣು ಮಗುವಿಗೆ ಜನ್ಮ ನೀಡಿದ ಅಪರಾಧಕ್ಕಾಗಿ ಪುನಃ 10 ವರ್ಷಗಳ ಕಠಿಣ ಸಜೆ ಮತ್ತು ರೂ. 5000/- ದಂಡವನ್ನು ವಿಧಿಸಲಾಗಿದೆ. ಆಕೆಗೆ ಪ್ರೀತಿಸುವದಾಗಿ ಮತ್ತು ಮದುವೆಯಾಗುವದಾಗಿ ಮೋಸದಿಂದ ನಂಬಿಸಿ ಆಕೆಯನ್ನು ಭೋಗಕ್ಕಾಗಿ ಬಳಸಿಕೊಂಡ ಅಪರಾಧಕ್ಕಾಗಿ 1 ವರ್ಷ ಕಠಿಣ ಸಜೆ ಮತ್ತು 2000/- ದಂಡವನ್ನು ವಿಧಿಸಲಾಗಿದೆ. ಪ.ಜಾ., ಪ.ಪಂ. (ದೌ) ತಡೆ ಕಾಯಿದೆ ಅಡಿಯಲ್ಲಿ ಆರೋಪಿತನಿಗೆ 5 ವರ್ಷಗಳ ಕಠಿಣ ಸಜೆ ಮತ್ತು 3000/- ದಂಡವನ್ನು ವಿಧಿಸಲಾಗಿದೆ. ಅಪ್ರಾಪ್ತ ವಯಸ್ಸಿನ ಬಾಲಕಿಯ ಅತ್ಯಾಚಾರ ಎಸಗಿದ ಆರೋಪದಡಿಯಲ್ಲಿ ಆರೋಪಿತನಿಗೆ 7 ವರ್ಷಗಳ ಕಠಿಣ ಸಜೆ ಮತ್ತು 2000/- ದಂಡವನ್ನು ವಿಧಿಸಲಾಗಿದೆ. ಅಲ್ಲದೆ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ನಿರಂತರವಾಗಿ ಲೈಂಗಿಕ ಅತ್ಯಾಚಾರ ಎಸಗಿದ ಅಪರಾಧಕ್ಕಾಗಿ 10 ವರ್ಷಗಳ ಕಠಿಣ ಸಜೆ ಮತ್ತು 3000/- ದಂಡವನ್ನು ವಿಧಿಸಲಾಗಿದೆ ಹಾಗೂ ಈ ಎಲ್ಲಾ ಶಿಕ್ಷೆಗಳನ್ನು ಆರೋಪಿತನು ಏಕಕಾಲದಲ್ಲಿ ಅನುಭವಿಸುವಂತೆಯೂ, ವಸೂಲಾತಿಯಾಗುವ ದಂಡದ ಹಣದಲ್ಲಿ ರೂ. 20,000/-ವನ್ನು ನೊಂದ ಬಾಲಕಿಗೆ ನೀಡುವಂತೆಯೂ ಆದೇಶದಲ್ಲಿ ತಿಳಿಸಲಾಗಿದೆ.
ಈ ಪ್ರಕರಣದ ವಿಚಾರಣೆಯಲ್ಲಿ ಎಂ.ಕೃಷ್ಣವೇಣಿ ಸರ್ಕಾರಿ ಅಭಿಯೋಜಕರು, 1ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ, ಮಡಿಕೇರಿ ಇವರು ವಾದ ಮಂಡಿಸಿದ್ದರು.