ಕೂಡಿಗೆ, ಮಾ. 24: ಜಿಲ್ಲೆಯ ಪುರಾಣ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಕಾವೇರಿ ನದಿ ದಂಡೆಯಲ್ಲಿರುವ ಕಣಿವೆಯ ಶ್ರೀರಾಮಲಿಂಗೇಶ್ವರ ದೇವಾಲಯದಲ್ಲಿ ಬ್ರಹ್ಮ ರಥೋತ್ಸವವು ತಾ. 25ರಂದು (ಇಂದು) ನಡೆಯಲಿದೆ.
ಬೆಳಗ್ಗಿನಿಂದಲೇ ದೇವಾನಾಂದಿ, ಅಂಕುರಾರ್ಪಣ, ರಕ್ಷಾಬಂಧ, ಧ್ವಜಾರೋಹಣ, ನವಗ್ರಹ ಸ್ಥಾಪನೆ, ಜಪ, ಅಭಿಷೇಕ, ಪುಣ್ಯಾಹವಾಚನ, ಗಣಪತಿ ಹೋಮ, ದೇವತಾಹ್ವಾನ, ಮಹಾಪೂಜೆ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.
ಇಂದು ಪವಿತ್ರ ಗಂಗೋದಕದಿಂದ ಶ್ರೀ ಸ್ವಾಮಿಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಮಹಾಪೂಜೆ ನಂತರ ತೀರ್ಥ ಪ್ರಸಾದ ವಿನಿಯೋಗ ಕಾರ್ಯಕ್ರಮ ನಡೆಯಲಿದ್ದು, ಮಧ್ಯಾಹ್ನ 1.15 ರಿಂದ 2 ರ ಅಭಿಜಿನ್ ಮೂಹೂರ್ತದಲ್ಲಿ ಶ್ರೀ ವೇ.ಬ್ರ. ನರಹರಿಶರ್ಮಾ ನೇತೃತ್ವದಲ್ಲಿ ರಾಮಲಿಂಗೇಶ್ವರ ಸ್ವಾಮಿಯ ರಥಾರೋಹಣ, ಬ್ರಹ್ಮರಥೋತ್ಸವವು ನಡೆಯಲಿದೆ. ರಥೋತ್ಸವಕ್ಕೆ ಆಗಮಿಸುವ ಭಕಾದ್ತಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ.
ರಥೋತ್ಸವದ ಅಂಗವಾಗಿ ಸಂಜೆ ವಿದ್ಯುತ್ ಅಲಂಕೃತ ಮಂಟಪದಲ್ಲಿ ದೇವಾಲಯದ ಆವರಣದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಬಸವೇಶ್ವರ ಉತ್ಸವ ಮೆರವಣಿಗೆ, ಆಂಜನೇಯೋತ್ಸವ ಮೆರವಣಿಗೆ, ಉಯ್ಯಾಲೋತ್ಸವ ಸೇರಿದಂತೆ ಆಕರ್ಷಕ ಮದ್ದುಗುಂಡು ಪ್ರದರ್ಶನ, ತೆಪ್ಪೋತ್ಸವ ಹಾಗೂ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.
ರಥೋತ್ಸವದಂದು ಸಂಜೆ ಕೂಡುಮಂಗಳೂರು ಪಣವಂ ನಾಟ್ಯಾಲಯದಿಂದ ಭರತನಾಟ್ಯ, ಭಕ್ತಿಗೀತೆ, ಜಾನಪದ ನೃತ್ಯ ಕಾರ್ಯಕ್ರಮಗಳು ನಡೆಯಲಿವೆ.
ಹಿನ್ನೆಲೆ : ಜಿಲ್ಲೆಯ ಐತಿಹಾಸಿಕ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಕುಶಾಲನಗರ ಸಮೀಪದ ರಾಮಸ್ವಾಮಿ ಕಣಿವೆಯ ಕಾವೇರಿ ನದಿ ದಂಡೆಯಲ್ಲಿರುವ ಶ್ರೀರಾಮಲಿಂಗೇಶ್ವರನನ್ನು ಮಣ್ಣಿನಿಂದ ನಿರ್ಮಿಸಿ ಪ್ರತಿಷ್ಠಾಸಿರುವ ಸನ್ನಿವೇಶವು ರಾಮಾಯಣದ ಸೀತಾಪಹರಣ ಕಥೆಯಲ್ಲಿ ಬರುತ್ತದೆ ರಾಮಾಯಣಕ್ಕೂ ಕಣಿವೆಯ ನದಿ ದಂಡೆಗೂ ಇರುವ ಸಂಬಂಧವನ್ನು ಇಲ್ಲಿ ಎತ್ತಿ ತೋರಿಸುತ್ತಿದೆ ಈ ಪುಣ್ಯಕ್ಷೇತ್ರ.
ಶ್ರೀ ರಾಮನು ಲಕ್ಷಣನೊಂದಿಗೆ ಸೀತೆಯನ್ನು ದಕ್ಷಿಣಾಭಿಮುಖವಾಗಿ ಹುಡುಕುತ್ತಾ ಬರುವ ಸಂದರ್ಭ ಇಲ್ಲಿನ ಪ್ರಾಕೃತಿಕ ಸೌಂದರ್ಯವನ್ನು ಕಂಡು ಇಲ್ಲಿಯೇ ವಿಶ್ರಾಂತಿ ಪಡೆಯಲು ಮುಂದಾಗುತ್ತಾನೆ ಎನ್ನಲಾಗಿದೆ. ಇಲ್ಲಿನ ಕಾವೇರಿ ನದಿ ದಡದಲ್ಲಿ ಈ ಮೊದಲೇ ತಪಸ್ಸಿಗೆ ಕುಳಿತಿದ್ದ ವ್ಯಾಘ್ರ ಮಹರ್ಷಿಗಳು ಶ್ರೀ ರಾಮನಿಗೆ ಆಜ್ಞೆ ಮಾಡಿ ತನ್ನ ಪೂಜಾ ಕೈಂಕರ್ಯಗಳಿಗೆ ಅವಶ್ಯವಿರುವ ಶಿವಲಿಂಗವನ್ನು ತರಲು ಹೇಳುತ್ತಾರೆ. ಈ ಸಂದರ್ಭ ರಾಮನಿಗೆ ವ್ಯಾಘ್ರ ಮಹರ್ಷಿಗಳು ನೀಡಿದ ಆದೇಶವನ್ನು ಪಾಲಿಸಲು ಆಂಜನೇಯನು ಕಾಶಿಗೆ ಶಿವಲಿಂಗ ತರಲು ತೆರಳುತ್ತಾನೆ. ಆದರೆ, ಶಿವಲಿಂಗ ತರಲು ಹೋದ ಆಂಜನೇಯ ಬರಲು ತಡವಾಗುವದರ ಸೂಚನೆಯರಿತ ರಾಮ ತನ್ನ ಪೂಜೆಯ ಸಮಯ ಮೀರುತ್ತಿರುವದೆ ಎಂದು ಸ್ಥಳದಲ್ಲಿಯೇ ಮರಳಿನಿಂದ ಶಿವಲಿಂಗವನ್ನು ತಯಾರಿಸಿ ಪೂಜೆ ಆರಂಭಿಸುತ್ತಾನೆ.
ಅಷ್ಟರಲ್ಲಿ ಆಂಜನೇಯ ಶಿವಲಿಂಗವನ್ನು ತರುತ್ತಾನೆ. ಶ್ರೀರಾಮದೇವ ಮರಳಿನಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಪೂಜೆಯಲ್ಲಿ ನಿರತನಾದ ರಾಮದೇವರ ಮೇಲೆ ಆಂಜನೇಯ ಅಸಮಾಧಾನಗೊಳ್ಳುತ್ತಾನೆ. ಈ ನಡುವೆ ಆಂಜನೇಯನಿಗೆ ಬೇಸರ ಆಗಬಾರದು ಎಂಬ ಕಾರಣಕ್ಕೆ ಆಂಜನೇಯ ಕಾಶಿಯಿಂದ ತಂದ ಶಿವಲಿಂಗವನ್ನು ಶ್ರೀರಾಮ ಸನ್ನಿಯ ಹಿಂಬದಿಯಲ್ಲಿ ಲಕ್ಷ್ಮಣನ ಮೂಲಕ ಪ್ರತಿಷ್ಠಾಪಿಸುತ್ತಾನೆ. ಈ ಸ್ಥಳ ಇದೀಗ ಲಕ್ಷ್ಮಣೇಶ್ವರ ಕ್ಷೇತ್ರವಾಗಿ ಇದೇ ಸ್ಥಳದಲ್ಲಿ ಪ್ರಸಿದ್ಧಿ ಪಡೆದಿದೆ. ಹರಿಹರೇಶ್ವರ ಲಿಂಗವು ಸಹ ಇಲ್ಲಿ ಉದ್ಬವ ಮೂರ್ತಿಯಾಗಿ ಭಕ್ತರಿಂದ ಪೂಜಿಸಲ್ಪಡುತ್ತಿದೆ.
ಈ ಜಾತ್ರಾ ಮಹೋತ್ಸಕ್ಕೆ ಕಣಿವೆ ಸುತ್ತಮುತ್ತಲ 22 ಗ್ರಾಮಗಳ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಾರೆ. - ನಾಗರಾಜ ಶೆಟ್ಟಿ