ಮಡಿಕೇರಿ, ಮಾ. 24: ಇನ್ನೇನು... ರಾಜ್ಯ ವಿಧಾನಸಭಾ ಚುನಾವಣೆ ಸದ್ಯದಲ್ಲೇ ಎದುರಾಗಲಿದ್ದು, ಇಡೀ ಜಿಲ್ಲೆಯಲ್ಲಿನ ಬಹುತೇಕ ಚಟುವಟಿಕೆಗಳು ರಾಜಕೀಯ ಲೇಪನದೊಂದಿಗೆ ಬಿಂಬಿತವಾಗುತ್ತಿದೆ.ಬಹುಶಃ ಕೂತಿದ್ದು... ನಿಂತಿದ್ದು... ಮಾತನಾಡಿದ್ದು... ವಿವಿಧ ಕಾಮಗಾರಿಗಳ ಚಾಲನೆ ಸೇರಿದಂತೆ ಎಲ್ಲಾ ಆಗು-ಹೋಗುಗಳು ರಾಜಕೀಯ ತಿರುವು ಪಡೆದುಕೊಳ್ಳುತ್ತಿ ರುವದು ಈಗಿನ ಬೆಳವಣಿಗೆ. ಆರೋಪ, ಪ್ರತ್ಯಾರೋಪ, ಪಕ್ಷಕ್ಕೆ ಸೇರ್ಪಡೆ, ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಹಾರುವದು ಅಲ್ಲಲ್ಲಿ ಚುನಾವಣಾ ಬಹಿಷ್ಕಾರದ ಹೇಳಿಕೆ-ಪ್ರತಿಭಟನೆಗಳು ದಿನನಿತ್ಯ ಕಂಡುಬರುತ್ತಿವೆ. ರಾಜಕೀಯದಲ್ಲಿ ಗುರುತಿಸಿಕೊಂಡಿರುವ ಆಯಾ ಪಕ್ಷಗಳ ಪ್ರಭಾವಿಗಳಿಗೆ ಇದೊಂದು ತೀರಾ ಪ್ರತಿಷ್ಠೆಯ ವಿಚಾರವಾಗಿದ್ದರೆ ಆಯಾ ಪಕ್ಷ, ನಾಯಕರ ಅನುಯಾಯಿಗಳ ವರ್ತನೆಯೂ ಮತ ಸಮರಕ್ಕೆ ಸಜ್ಜಾಗುತ್ತಿದೆ.

ಪ್ರಮುಖವಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ರಾಷ್ಟ್ರೀಯ ಪಕ್ಷಗಳೊಂದಿಗೆ ಪ್ರಮುಖ ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಕೂಡ ಪ್ರಮುಖ ಸ್ಥಾನದಲ್ಲಿದೆ. ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಈಗಾಗಲೇ ವೀರಾಜಪೇಟೆ ಹಾಗೂ ಮಡಿಕೇರಿ ಕ್ಷೇತ್ರಕ್ಕೆ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಿದ್ದು, ಈ ಪಕ್ಷ ಅಭ್ಯರ್ಥಿ ವಿಚಾರದಲ್ಲಿ ಇನ್ನಿತರ ಎರಡು ರಾಜಕೀಯ ಪಕ್ಷಗಳಿಗಿಂತ ಮುಂಚೂಣಿಯಲ್ಲಿದೆ. ಪ್ರಸ್ತುತ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷ ಕೊಡಗಿನಲ್ಲಿ ತನ್ನ ಈ ಹಿಂದಿನ ಗತವೈಭವವನ್ನು ಸ್ಥಾಪಿಸಲು ಈ ಬಾರಿ ಶತಾಯ-ಗತಾಯವಾಗಿ ಪ್ರಯತ್ನ ಆರಂಭಿಸಿದ್ದು, ಎರಡು ಕ್ಷೇತ್ರಗಳಲ್ಲಿ ಹಲವು ಮಂದಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಇತ್ತ ಕೊಡಗನ್ನು ಭದ್ರಕೋಟೆಯನ್ನಾಗಿ ಮಾಡಿಕೊಂಡಿರುವ ಬಿಜೆಪಿ ಕೂಡಾ ತನ್ನ ಅಧಿಕಾರ ಉಳಿಸಿಕೊಳ್ಳಲು ತನ್ನದೇ ಆದ ಪ್ರಯತ್ನದಲ್ಲಿದೆ.

ಈ ಪಕ್ಷದಲ್ಲಿ ಹಾಲಿ ಶಾಸಕರು ಗಳಿಗೇ ಟಿಕೆಟ್ ಸಿಗಲಿದೆ ಎಂಬ ವಿಚಾರ ಇನ್ನೂ ಒಂದು ಹಂತಕ್ಕೆ ಬಂದಿಲ್ಲ. ಹಾಲಿ ಶಾಸಕರ ಬದಲಿಗೆ ಹೊಸಬರಿಗೆ ಟಿಕೆಟ್ ಸಿಗಲಿದೆ ಎಂಬ ದಟ್ಟ ಮಾತು. ಪ್ರಚಾರ ಹಾಗೂ ಸಂಘಟನೆಯಲ್ಲಿ ಮುಂಚೂಣಿಯಲ್ಲಿ ರುತ್ತಿದ್ದ ಬಿಜೆಪಿ ಕಾರ್ಯಕರ್ತರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಕಾಂಗ್ರೆಸ್ ಟಿಕೆಟ್ ಪಡೆಯಲು ಹಲವರು ರೇಸ್ ನಲ್ಲಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಸಕ್ರಿಯ ರಾಗಿರುವದರೊಂದಿಗೆ ಮೇಲ್ಮಟ್ಟದಲ್ಲಿ ತಮ್ಮದೇ ಪ್ರಯತ್ನದಲ್ಲಿರುವದು ಜಿಲ್ಲೆಯಲ್ಲಿ ರಾಜಕೀಯ ಕುತೂಹಲವನ್ನು ಸಹಜವಾಗಿಯೇ ಹೆಚ್ಚಿಸುತ್ತಿದೆ.

(ಮೊದಲ ಪುಟದಿಂದ) ಇನ್ನು ಮಡಿಕೇರಿ ಕ್ಷೇತ್ರದಲ್ಲಿ ಬಿ.ಎ. ಜೀವಿಜಯ ಹಾಗೂ ವೀರಾಜಪೇಟೆ ಕ್ಷೇತ್ರದಲ್ಲಿ ಸಂಕೇತ್ ಪೂವಯ್ಯ ಜೆಡಿಎಸ್ ಅಭ್ಯರ್ಥಿಗಳೆಂದು ಈಗಾಗಲೇ ಘೋಷಣೆಯಾಗಿದ್ದು, ಈ ಹಿಂದಿನ ವರ್ಷಗಳಲ್ಲಿ ಜಡ್ಡುಗಟ್ಟಿದಂತೆ ಇದ್ದ ಜೆಡಿಎಸ್ ಮೈಕೊಡವಿ ಮೇಲೆದ್ದಂತಿದೆ. ಜಿಲ್ಲೆಯ ಹಿರಿಯ ರಾಜಕಾರಣಿ ಈ ತನಕ ತಟಸ್ಥ ನಿಲುವಿನೊಂದಿಗೆ ಜೆಡಿಎಸ್ ಪಕ್ಷದಲ್ಲೇ ಮುಂದುವರಿದಿದ್ದ ಯಂ.ಸಿ. ನಾಣಯ್ಯ ಅವರು ಇದೀಗ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಳ್ಳಲಿರುವದು ಇದೀಗ ಖಾತ್ರಿಯಾಗಿದ್ದು, ಕೊಡಗಿನಲ್ಲಿ ಮತ್ತೊಂದು ರಾಜಕೀಯ ಸಂಚಲನ ಮೂಡಿಸಿದೆ.

ಪ್ರಸ್ತುತ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳದ್ದೇ ಕಾರುಬಾರು.. ಜನರ ಚರ್ಚೆಯೂ ಇದರಂತೆಯೇ ಸಾಗುತ್ತಿದೆ.

ಈ ನಡುವೆ ಕೆಲವರು ಪಕ್ಷೇತರರಾಗಿಯೂ ಕಣಕ್ಕಿಳಿಯುವ ಸಂದೇಶವನ್ನು ಹೊರಗೆಡವಿದ್ದಾರೆ. ಒಟ್ಟಿನಲ್ಲಿ ಪ್ರಸಕ್ತ ಎದುರಾಗಲಿರುವ ವಿಧಾನಸಭಾ ಚುನಾವಣೆ ದಿನೇ ದಿನೇ ಕುತೂಹಲ ಮೂಡಿಸುತ್ತಿರುವದಂತೂ ಸತ್ಯ.