ಶನಿವಾರಸಂತೆ, ಮಾ. 23: ಸರಕಾರ ಮತ್ತು ಆರೋಗ್ಯ ಇಲಾಖೆ ಗರ್ಭಿಣಿಯರು ಆರೋಗ್ಯ ಕಾಪಾಡಿಕೊಳ್ಳಲು ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ದುಂಡಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ಎನ್.ಕೆ. ಸುಮತಿ ಹೇಳಿದರು.ತ್ಯಾಗರಾಜ ಕಾಲೋನಿಯ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ ಇಲಾಖೆ ಹಾಗೂ ಐ.ಸಿ.ಡಿ.ಎಸ್. ಸಹಭಾಗಿತ್ವದಲ್ಲಿ ನಡೆದ ಗ್ರಾಮ ಆರೋಗ್ಯ ಮತ್ತು ಪೌಷ್ಟಿಕ ದಿನ ಹಾಗೂ ತಾಯಂದಿರ ಸಂಪೂರ್ಣ ವಾತ್ಸಲ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಂಜುಳಾ ಮಾತನಾಡಿ, ಪ್ರಸವ ಸಂದರ್ಭ ತಾಯಿ ಮತ್ತು ಮಗುವಿನ ಮರಣ ಸಂಭವಿಸಬಾರದು ಎಂಬ ಸದುದ್ದೇಶದಿಂದ ಸರಕಾರ ತಾಯಂದಿರ ಸಂಪೂರ್ಣ ವಾತ್ಸಲ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ ಎಂದರು.
ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಸರಸ್ವತಿ ಮಾತನಾಡಿ, 3, 5, 7, 9ನೇ ತಿಂಗಳಿನಲ್ಲಿ ಗರ್ಭಿಣಿ ಮಹಿಳೆಯರು ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದು ದೃಢಪಟ್ಟರೆ ಮಾತ್ರ ಸರಕಾರ ಆ ಮಹಿಳೆಗೆ ಯೋಜನೆ, ಅನುದಾನ ಬಿಡುಗಡೆ ಮಾಡುತ್ತದೆ.
ಔಷಧಿ ಅಂಗಡಿಗಳಿಗೆ ಹಣ ಹಾಕುವ ಬದಲು ಆಶಾ ಕಾರ್ಯಕರ್ತೆಯರನ್ನು ಭೇಟಿ ಮಾಡುವದರಿಂದ ಸಮಯ ಹಾಗೂ ಹಣ ಉಳಿತಾಯವಾಗುತ್ತದೆ ಎಂದರು.
ಗ್ರಾಮ ಪಂಚಾಯಿತಿ ಸದಸ್ಯೆ ನೇತ್ರಾವತಿ, ಆಶಾ ಕಾರ್ಯಕರ್ತೆ ಯರಾದ ಉಷಾ ಜಯೇಶ್, ಎಸ್.ಪಿ. ಭಾಗ್ಯ, ಅಂಗನವಾಡಿ ಕಾರ್ಯಕರ್ತೆ ಯರಾದ ಗಂಗಮ್ಮ, ಸಿದ್ದಮ್ಮ ಉಪಸ್ಥಿತರಿದ್ದರು. ಉಷಾ ವಂದಿಸಿದರು.